ಬೆಂಗಳೂರು: ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಉಗ್ರರ ದಾಳಿಗೆ ಸಿಲುಕಿ ಮೃತಪಟ್ಟಿರುವ ಟೆಕ್ಕಿ ಮಧುಸೂದನ್ ಸೋಮಿಶೆಟ್ಟಿ ರಾವ್ ಅವರ ಮೃತದೇಹವನ್ನು ಇಂದು ಸಂಜೆ ಆಂಧ್ರ ಪ್ರದೇಶದ ನೆಲ್ಲೂರಿಗೆ ರವಾನಿಸಲಾಗುತ್ತಿದೆ. ಕುಟುಂಬದೊಂದಿಗೆ ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲಿ ಈ ಭಯಾನಕ ಘಟನೆ ನಡೆದಿದೆ.
ಮೂಲತಃ ಆಂಧ್ರದ ನೆಲ್ಲೂರಿನವವರಾಗಿರುವ ಮಧುಸೂದನ್ ರವರು ಕಳೆದ ಒಂದು ದಶಕದಿಂದ ಬೆಂಗಳೂರಿನ ರಾಮಮೂರ್ತಿನಗರದಲ್ಲಿ ನೆಲೆಸಿದ್ದರು. ವೃತ್ತಿಯಲ್ಲಿ ತಂತ್ರಾಂಶ ಇಂಜಿನಿಯರ್ ಆಗಿದ್ದ ಅವರು, ಪತ್ನಿ ಕಾಮಾಕ್ಷಿ ಪ್ರಸನ್ನ, ಮಗಳು ಮೇದಾಶ್ರೀ ಹಾಗೂ ಮಗ ಮುಕುಂದ ಶ್ರೀದತ್ತ ಅವರೊಂದಿಗೆ ಸಂತೋಷದ ಜೀವನ ನಡೆಸುತ್ತಿದ್ದರು. ಇತ್ತೀಚೆಗೆ ರಾಮಮೂರ್ತಿನಗರದಲ್ಲಿ ತಮ್ಮದೇ ಆದ ಹೊಸ ಮನೆ ಕಟ್ಟಿಸಿಕೊಂಡು, ಕುಟುಂಬದೊಂದಿಗೆ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು.
ಕಳೆದ ವಾರ ಕುಟುಂಬದೊಂದಿಗೆ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ಮಧುಸೂದನ್, ಅಲ್ಲಿಯ ಪಹಲ್ಗಾಮ್ ಪ್ರದೇಶದಲ್ಲಿ ಇದ್ದರು. ಅವರೊಂದಿಗೆ ಇನ್ನೆರಡು ಕುಟುಂಬಗಳೂ ಪ್ರವಾಸದಲ್ಲಿ ಭಾಗವಹಿಸಿತ್ತು. ಪ್ರವಾಸದ ದಿನಗಳಲ್ಲಿ ಊಟದ ವ್ಯವಸ್ಥೆಗಾಗಿ ಕೆಲವು ಮಂದಿ ಹೊರಹೋದರೆ, ಮಧುಸೂದನ್ ಅವರ ಪತ್ನಿಯು ಸಹಮಹಿಳೆಯರೊಂದಿಗೆ ಸ್ಥಳೀಯ ಸ್ಥಳಗಳಿಗೆ ತೆರಳಿದ್ದರು. ಈ ವೇಳೆ ಉಗ್ರರ ಭಯಾನಕ ದಾಳಿಗೆ ಇವರು ಬಲಿಯಾಗಿದ್ದಾರೆ.
ಈ ದಾಳಿಯಲ್ಲಿ ಮಧುಸೂದನ್ ಬಲಿಯಾಗಿ ಸಾವನ್ನಪ್ಪಿದ್ದಾರೆ. ಅವರ ಪತ್ನಿ ಮತ್ತು ಮಕ್ಕಳು ಈ ಘಟನೆ ದುರಂತದಿಂದ ಸಿಕ್ಕಾಪಟ್ಟೆ ಆಘಾತಕ್ಕೊಳಗಾಗಿದ್ದಾರೆ. ಸ್ಥಳೀಯ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿ ಉಳಿದವರಿಗೆ ರಕ್ಷಣೆ ಒದಗಿಸಿದ್ದಾರೆ.
ಮೃತದೇಹವನ್ನು ಇಂದು ಕಾಶ್ಮೀರದಿಂದ ಚೆನ್ನೈಗೆ ವಿಮಾನದ ಮೂಲಕ ತರಲಾಗುತ್ತಿದ್ದು, ನಂತರ ನೆಲ್ಲೂರಿಗೆ ವಾಹನದ ಮೂಲಕ ಸಾಗಿಸಲಾಗುವುದು. ಅಂತಿಮ ದರ್ಶನಕ್ಕಾಗಿ ಕುಟುಂಬಸ್ಥರು ಹಾಗೂ ಬಂಧುಗಳು ನೆಲ್ಲೂರಿಗೆ ಆಗಮಿಸುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.