ಬೆಂಗಳೂರು, ಏ.23: ಜಮ್ಮು ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯಲ್ಲಿ ಮಂಗಳವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಹತ್ಯೆಯಾದ ಶಿವಮೊಗ್ಗದ ನಿವಾಸಿ ಮಂಜುನಾಥ್ ಅವರ ಕುಟುಂಬ ಸದಸ್ಯರಿಗೆ ದೂರವಾಣಿ ಕರೆ ಮಾಡಿ ಡಿಸಿಎಂ ಡಿ.ಕೆ. ಶಿವಕುಮಾರ್ ಸಾಂತ್ವನ ಹೇಳಿದರು.
“ಮಂಜುನಾಥ್ ಅವರ ಭಾವಮೈದ ಡಾ. ರವಿಕಿರಣ್ ಅವರನ್ನು ಬುಧವಾರ ಬೆಳಗ್ಗೆ ದೂರವಾಣಿ ಮೂಲಕ ಸಂಪರ್ಕಿಸಿದ ಡಿಸಿಎಂ ಅವರು, “ನಿಮ್ಮ ಜೊತೆ ನಾವಿದ್ದೇವೆ. ನಮ್ಮ ಸರ್ಕಾರ ನಿಮ್ಮ ಕುಟುಂಬ ಸದಸ್ಯರ ದುಃಖದಲ್ಲಿ ಭಾಗಿಯಾಗಿದೆ. ನಾನು ನಿಮ್ಮ ಕುಟುಂಬದ ಸದಸ್ಯನಂತಿದ್ದು, ಧೈರ್ಯ ಕಳೆದುಕೊಳ್ಳಬೇಡಿ” ಎಂದು ಸ್ಥೈರ್ಯ ತುಂಬಿದರು.
ಇದೇ ವೇಳೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಪ್ರತಿನಿಧಿಗಳ ಜತೆಯೂ ದೂರವಾಣಿ ಕರೆ ಮಾಡಿ ಮಾತನಾಡಿ, “ಮಂಜುನಾಥ್ ಕುಟುಂಬ ಸದಸ್ಯರನ್ನು ಖುದ್ದಾಗಿ ಭೇಟಿ ಮಾಡಿ ಸಾಂತ್ವನ ತಿಳಿಸಿ” ಎಂದು ಸೂಚಿಸಿದರು.
ವಿಕಾಸ್ ಕುಮಾರ್ ಗೆ ಧೈರ್ಯ ತುಂಬಿದ ಡಿಸಿಎಂ
ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ನಿಂದ ಹಲ್ಲೆಗೆ ಒಳಗಾಗಿರುವ ಕನ್ನಡಿಗ ವಿಕಾಸ್ ಕುಮಾರ್ ಅವರ ಜತೆಗೂ ಇದೇ ವೇಳೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿ ಧೈರ್ಯ ತುಂಬಿದರು. ಈ ಪ್ರಕರಣದಲ್ಲಿ ನ್ಯಾಯ ಸಿಗುವಂತೆ ಮಾಡಲಾಗುವುದು, ಯಾವುದಕ್ಕೂ ಹೆದರುವ ಅಗತ್ಯವಿಲ್ಲ ಎಂದು ತಿಳಿಸಿದರು.