ಮಹಿಳೆಯರಿಗೆ ಗುಡ್ ನ್ಯೂಸ್: ಇನ್ಮುಂದೆ ಬಸ್ ಪ್ರಯಾಣಕ್ಕೆ ಆಧಾರ್ ಅಗತ್ಯವಿಲ್ಲ!

Untitled design 2025 04 16t105332.741

ಬೆಂಗಳೂರು: ರಾಜ್ಯದ ಮಹಿಳೆಯರಿಗೆ ಉಚಿತ ಸಾರಿಗೆ ಸೌಲಭ್ಯ ನೀಡುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದ್ದ, ಐದು ಗ್ಯಾರಂಟಿಗಳ ಪೈಕಿ ಪ್ರಮುಖವಾದ ಶಕ್ತಿ ಯೋಜನೆಗೆ ಮತ್ತಷ್ಟು ಸೌಲಭ್ಯ ನೀಡಲು ಸರ್ಕಾರ ಮುಂದಾಗಿದೆ. ಇನ್ನು ಮುಂದೆ ಬಸ್‌ನಲ್ಲಿ ಪ್ರಯಾಣ ಮಾಡುವಾಗ ಆಧಾರ್ ಕಾರ್ಡ್ ತೆಗೆದುಕೊಂಡು ಹೋಗುವ ಅಗತ್ಯವಿಲ್ಲ. ಅದರ ಬದಲಿಗೆ ಸ್ಮಾರ್ಟ್ ಕಾರ್ಡ್ ತೋರಿಸಿದರೆ ಸಾಕು.

ಶಕ್ತಿ ಯೋಜನೆಯ ಲಾಭವನ್ನು ಇನ್ನಷ್ಟು ಸರಳವಾಗಿ ಪಡೆಯಲು ಸರ್ಕಾರ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡುವ ನಿರ್ಧಾರ ಕೈಗೊಂಡಿದೆ. ಈ ಸ್ಮಾರ್ಟ್ ಕಾರ್ಡ್‌ನ್ನು ಎರಡು ತಿಂಗಳೊಳಗೆ ರಾಜ್ಯದ ಎಲ್ಲಾ ಅರ್ಹ ಮಹಿಳೆಯರಿಗೆ ಉಚಿತವಾಗಿ ನೀಡಲಾಗುವುದು. ಈಗಾಗಲೇ ಈ ಕುರಿತ ಕಡತ ಹಣಕಾಸು ಇಲಾಖೆಗೆ ಹೋಗಿದ್ದು, ಕೇವಲ ಅನುಮತಿಯ ಬಾಕಿಯಿದೆ. ಸಾರಿಗೆ ಇಲಾಖೆ ಟೆಂಡರ್ ಕರೆಯಲು ಸಿದ್ಧತೆ ಮಾಡಿಕೊಂಡಿದೆ.

ADVERTISEMENT
ADVERTISEMENT

ಸ್ಮಾರ್ಟ್ ಕಾರ್ಡ್ ಪಡೆಯಲು ಮಹಿಳೆಯರು ‘ಗ್ರಾಮ ಒನ್’ ಅಥವಾ ‘ಬೆಂಗಳೂರು ಒನ್’ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬೇಕು. ಅಲ್ಲದೆ, ಸೇವಾಸಿಂಧು ವೆಬ್‌ಸೈಟ್‌ ಬಳಸಿ ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಸಲ್ಲಿಸಿದ ನಂತರ ತಕ್ಷಣವೇ ಪ್ರಿಂಟ್‌ ಮಾಡಿದ ರಸೀದಿಯೇ ಸ್ಮಾರ್ಟ್ ಕಾರ್ಡ್ ಎಂದು ಪರಿಗಣಿಸಲಾಗುತ್ತದೆ. ಮಾಸಿಕ ಪಾಸ್ ಅಥವಾ ಕಾರ್ಡ್ ವಿತರಣೆ ಇಲ್ಲ. ಇದು ಶಾಶ್ವತ ಪಾಸ್‌ನಂತೆ ಕಾರ್ಯನಿರ್ವಹಿಸುತ್ತದೆ.

ಆದರೆ, ಸ್ಮಾರ್ಟ್ ಕಾರ್ಡ್‌ಗಾಗಿ ನೀಡುವ ದಾಖಲೆಗಳು ನಿಖರವಾಗಿರಬೇಕು. ಯಾವುದೇ ನಕಲಿ ಆಧಾರ್ ಕಾರ್ಡ್ ಅಥವಾ ತಪ್ಪು ದಾಖಲೆ ನೀಡಿದರೆ, ನಿಮ್ಮ ಅರ್ಜಿಯನ್ನು ರದ್ದುಗೊಳಿಸುವ ಸಾಧ್ಯತೆ ಉಂಟು. ಆದ್ದರಿಂದ ನಿಜವಾದ ಮತ್ತು ಸರಿಯಾದ ಮಾಹಿತಿ ನೀಡುವುದು ಅನಿವಾರ್ಯ.

ಅಲ್ಲದೇ, ಈ ಸ್ಮಾರ್ಟ್ ಕಾರ್ಡ್‌ನ್ನು ಕೇವಲ ಕರ್ನಾಟಕದ ನಿವಾಸಿಗಳಿಗಷ್ಟೇ ನೀಡಲಾಗುತ್ತದೆ. ಆಧಾರ್ ಕಾರ್ಡ್‌ನ ವಿಳಾಸ ಕರ್ನಾಟಕದೊಳಗೇ ಇರಬೇಕಾಗಿದೆ. ಶಕ್ತಿ ಯೋಜನೆಯ ಲಾಭ ಪಡೆಯಲು ಕೆಲವರು ಆಧಾರ್ ವಿಳಾಸ ಬದಲಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಆದರೆ ವಿಳಾಸ ಬದಲಿಸಿ ಸ್ಮಾರ್ಟ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದರೆ ಅದು ಅಂಗೀಕಾರವಾಗುವುದಿಲ್ಲ.

ಈ ಯೋಜನೆಯಿಂದ ಈಗಾಗಲೇ ಲಕ್ಷಾಂತರ ಮಹಿಳೆಯರು ಪ್ರಯೋಜನ ಪಡೆಯುತ್ತಿದ್ದಾರೆ. ರಾಜ್ಯದ ವಿವಿಧೆಡೆ ಬೀದರ್‌ನಿಂದ ಬೆಂಗಳೂರು ತನಕ ದಿನ ಸಾವಿರಾರು ಮಹಿಳೆಯರು ಬಸ್‌ನಲ್ಲಿ ಉಚಿತ ಪ್ರಯಾಣಿಸುತ್ತಿದ್ದಾರೆ. ಇದೀಗ ಸ್ಮಾರ್ಟ್ ಕಾರ್ಡ್ ಸೌಲಭ್ಯದಿಂದ ಅವರ ಪ್ರಯಾಣವು ಇನ್ನೂ ಸುಗಮವಾಗಲಿದೆ.

ಮಹಿಳೆಯರಿಗೆ ಈ ಯೋಜನೆಯಿಂದ ಬಸ್ ಪ್ರಯಾಣ ಖರ್ಚು ಉಳಿಯುವುದರ ಜೊತೆಗೆ, ಅವರ ದೈನಂದಿನ ಬದುಕಿನಲ್ಲಿ ಸ್ವಲ್ಪ ಸ್ವಾತಂತ್ರ್ಯ ಹಾಗೂ ಆತ್ಮವಿಶ್ವಾಸ ಕೂಡ ಹೆಚ್ಚಾಗುತ್ತಿದೆ.

Exit mobile version