ವಿಧಾನಸಭೆ ಚುನಾವಣೆಗೂ ಮುನ್ನ ಘೋಷಣೆ ಮಾಡಿದಂತೆ ಪದವಿ ಹಾಗೂ ಡಿಪ್ಲೊಮಾ ಪೂರ್ಣಗೊಳಿಸಿದ ಪದವೀಧರರಿಗೆ ಯುವನಿಧಿ ಗ್ಯಾರಂಟಿ ಯೋಜನೆಯಡಿ ನೀಡಲಾಗುತ್ತಿರುವ ಆರ್ಥಿಕ ಸಹಾಯವನ್ನು ನೀಡಲು ಸರ್ಕಾರ ಬದ್ಧವಾಗಿದ್ದು, ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಸೋಮವಾರದ ವಿಧಾನಪರಿಷತ್ ಕಲಾಪದಲ್ಲಿ ಬಿಜೆಪಿಯ ಅರುಣ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಾವು ಕೊಟ್ಟ ವಾಗ್ದಾನದಂತೆ ನಡೆದುಕೊಳ್ಳುತ್ತೇವೆ. ಚುನಾವಣೆಗೂ ಮುನ್ನ ಜನತೆಗೆ ಯಾವ ಭರವಸೆಯನ್ನು ಕೊಟ್ಟಿದ್ದೇವೋ ಅವೆಲ್ಲವನ್ನೂ ಈಡೇರಿಸಲು ನಾವು ಬದ್ಧರಾಗಿದ್ದೇವೆ. ಯುವನಿಧಿ ಯೋಜನೆಯನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ವದಂತಿಗಳಿಗೆ ತೆರೆ ಎಳೆದರು.
ಕೆಲವು ತಾಂತ್ರಿಕ ಕಾರಣಗಳಿಂದ ಯುವನಿಧಿ ಯೋಜನೆಯಡಿ ನೀಡಲಾಗುತ್ತಿರುವ ಆರ್ಥಿಕ ನೆರವು ವಿಳಂಬವಾಗಿರಬಹುದು. ಹಾಗೆಂದು ಇದನ್ನು ಸ್ಥಗಿತ ಮಾಡುತ್ತೇವೆ ಎಂದು ಯಾರೂ ಭಾವಿಸಬೇಕಾಗಿಲ್ಲ. ಅನುದಾನದ ಕೊರತೆಯೂ ಇಲ್ಲ. ನಿಯಮಗಳ ಅನುಸಾರವಾಗಿ ನೀಡಬೇಕು ಎಂದು ಸ್ಪಷ್ಟಪಡಿಸಿದರು.
ಯುವನಿಧಿಗೆ ಇಂತಿಷ್ಟೇ ಎಂದು ಟಾರ್ಗೆಟ್ ಮಾಡಿಕೊಂಡಿಲ್ಲ, ಇದು ಅನ್ ಲಿಮಿಟೆಡ್, ತಿಂಗಳಿನಿಂದ ತಿಂಗಳು, ವರ್ಷದಿಂದ ವರ್ಷಕ್ಕೆ ಫಲಾನುಭವಿಗಳ ಸಂಖ್ಯೆ ಹೆಚ್ಚಾಗುತ್ತದೆ. ಮುಂದಿನ ವರ್ಷ 5 ಲಕ್ಷವಾಗಬಹುದು. ನಂತರ 10 ಲಕ್ಷ ತಲುಪುವ ಸಾಧ್ಯತೆಯೂ ಇದೆ. ಪ್ರತಿ ವರ್ಷ ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಪದವಿ ಮತ್ತು ಡಿಪ್ಲೊಮಾ ಪೂರ್ಣಗೊಳಿಸಿ ಬರುತ್ತಾರೆ ಸಚಿವರು ತಿಳಿಸಿದರು.
ಪದವಿ ಡಿಪ್ಲೊಮಾ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಈ ಯೋಜನೆಯಡಿ ಆರ್ಥಿಕ ನೆರವು ಪಡೆಯಬೇಕಾದರೆ ಮೊದಲು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ಇದಕ್ಕಾಗಿ ಇಲಾಖೆಗೆ ಸೇವಾ ಸಿಂಧು ಪೋರ್ಟಲ್ ಸೃಜನೆ ಮಾಡಿದೆ. ಇಲ್ಲಿವರೆಗೆ 1,74,181 ವಿದ್ಯಾರ್ಥಿಗಳು ಇದರ ನೆರವು ಪಡೆದಿದ್ದಾರೆ ಎಂದು ಡಾ. ಪಾಟೀಲ್ ವಿವರಿಸಿದರು.
ಹೆಸರು ನೋಂದಣಿ ಮಾಡಿದ ಮೇಲೆ ಅಭ್ಯರ್ಥಿಗಳು 181 ದಿನ ಕಾಯಬೇಕಾಗುತ್ತದೆ. ಈ ಕೆಟಗಿರಿಯಲ್ಲಿ 49 ಸಾವಿರ ಜನರಿದ್ದಾರೆ. ಹೆಚ್ಚಿನ ವಿದ್ಯಾಭ್ಯಾಸ ಅಥವಾ ಉದ್ಯೋಗಕ್ಕೆ ಸೇರಿದರೆ ಇದರ ನೆರವು ಸಿಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಪದವಿ ಹಾಗೂ ಡಿಪ್ಲೊಮಾ ಪೂರ್ಣಗೊಳಿಸಿದ ತಕ್ಷಣವೇ ಅರ್ಹರಿಗೆ ಇದು ಅನ್ವಯವಾಗುತ್ತದೆ. ಹೆಸರು ನೋಂದಾಯಿಸಿಕೊಂಡು ಪೋರ್ಟಲ್ ನಲ್ಲಿ ಅರ್ಜಿ ಹಾಕಿದರೆ ನೋಂದಣಿಯಾಗುತ್ತದೆ. ಇದಕ್ಕೆ ಯಾರ ಸಹಾಯವೂ ಬೇಕಾಗಿಲ್ಲ, ಇಲಾಖೆಯು ಎಲ್ಲಾ ರೀತಿಯ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶದ ಯುವಕರಿಗೆ ಮಾಹಿತಿ ಕೊಡಲು ಅಗತ್ಯವಾದ ವ್ಯವಸ್ಥೆ ಮಾಡಿದ್ದೇವೆ. ಕೆಲವು ಸಣ್ಣಪುಟ್ಟ ತಾಂತ್ರಿಕ ತೊಂದರೆಗಳು ಎದುರಾಗಬಹುದು ವಿದ್ಯಾರ್ಥಿಗಳು ಗಾಬರಿಪಡದೆ ಸರ್ಕಾರ ಸವಲತ್ತು ಪಡೆಯಲು ಮುಂದಾಗಬೇಕೆಂದು ಸಚಿವರು ಮನವಿ ಮಾಡಿದರು.