ಪ್ರಶಾಂತ್ ಎಸ್., ಪ್ರೋಗ್ರಾಂ ಪ್ರೊಡ್ಯೂಸರ್, ಗ್ಯಾರಂಟಿ ನ್ಯೂಸ್
ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಿಳಾ ಮುಖ್ಯಮಂತ್ರಿ ಆಯ್ಕೆ ಆಗುತ್ತಾರೆ ಎಂದು ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ಅವರು ನುಡಿದಿದ್ದರು. ಇದು ಸತ್ಯವಾಗಿದ್ದು ಘಟಾನುಘಟಿ ನಾಯಕರ ಹೊರತಾಗಿ ಅಳೆದು-ತೂಗಿ ಬಿಜೆಪಿ ವರಿಷ್ಠರು ಮಹಿಳೆಗೆ ದೆಹಲಿ ಮುಖ್ಯಮಂತ್ರಿಯ ಕಿರೀಟ ತೊಡಿಸಿದ್ದಾರೆ.
ಅಚ್ಚರಿ ಅಭ್ಯರ್ಥಿಗಳು, ಅಚ್ಚರಿ ಮುಖ್ಯಮಂತ್ರಿಗಳನ್ನ ಆಯ್ಕೆ ಮಾಡುವುದರಲ್ಲಿ ಭಾರತೀಯ ಜನತಾ ಪಾರ್ಟಿ ಎತ್ತಿದ ಕೈ. ಹರಿಯಾಣ, ರಾಜಸ್ಥಾನ, ಉತ್ತರಾಖಂಡ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳಿಗೆ ಕೇಸರಿ ವರಿಷ್ಠರು ಅಚ್ಚರಿ ನಾಯಕರನ್ನ ಮುಖ್ಯಮಂತ್ರಿ ಕುರ್ಚಿ ಮೇಲೆ ಕೂರಿಸಿದ್ದಾರೆ. 27 ವರ್ಷಗಳ ನಂತರ ದೆಹಲಿ ಗದ್ದುಗೆ ಹಿಡಿದ ಬಿಜೆಪಿ, ಮಹಿಳಾ ಮುಖ್ಯಮಂತ್ರಿಯನ್ನ ಆಯ್ಕೆ ಮಾಡಿದೆ. ಮೊದಲ ಬಾರಿ ಶಾಸಕಿಯಾದ ರೇಖಾ ಗುಪ್ತಾ ಅವರಿಗೆ ದೆಹಲಿ ಮುಖ್ಯಮಂತ್ರಿ ಸ್ಥಾನ ಒಲಿದು ಬಂದಿದ್ದು, ಸುಷ್ಮಾಸ್ವರಾಜ್, ಶೀಲಾ ದೀಕ್ಷಿತ್, ಅತಿಶಿ ಮರ್ಲೆನಾ ನಂತರ ದೆಹಲಿ ಮಂದಿಗೆ ರೇಖಾಗುಪ್ತಾ ಅವರು ಸಿಎಂ ಆಗಿ ಸಿಕ್ಕಂತಾಗಿದೆ.
ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂತೆ, ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ಅವರು ಹೇಳಿದ ಭವಿಷ್ಯ ಮತ್ತೊಮ್ಮೆ ನಿಜವಾಗಿದೆ. ಎರಡು ವರ್ಷಗಳ ಹಿಂದೆ 2023ರಲ್ಲಿ ಆಪ್ ಸರ್ಕಾರ ಉರುಳಿ ಹೋಗುತ್ತೆ. ಅರವಿಂದ ಕೇಜ್ರಿವಾಲ್ಗೆ ಕೆಟ್ಟ ಸಮಯ ಶುರುವಾಗುತ್ತೆ. ಜೈಲಿಗೆ ಹೋಗುವ ಪರಿಸ್ಥಿತಿಯೂ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಿದ್ದರು. ಅಷ್ಟೆ ಅಲ್ಲದೆ ಕಳೆದ ವರ್ಷ ಅಕ್ಟೋಬರ್ 13ರಂದು ದೆಹಲಿಯಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳಾ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಭವಿಷ್ಯವಾಣಿ ಹೇಳಿದ್ದರು. ದೆಹಲಿ ಚುನಾವಣೆ ಫಲಿತಾಂಶದ ಬಳಿಕ ಮುಂದಿನ ಸಿಎಂ ಯಾರು ಆಗುತ್ತಾರೆ ಎನ್ನುವ ಕುತೂಹಲಕ್ಕೆ ಬ್ರೇಕ್ ಹಾಕಿರುವ ಬಿಜೆಪಿ, ರೇಖಾ ಗುಪ್ತಾ ಅವರನ್ನು ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದೆ.
ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ದೆಹಲಿ ರಾಜಕಾರಣ ಬಗ್ಗೆ ಮಾತ್ರ ಭವಿಷ್ಯ ನುಡಿದಿಲ್ಲ. ಮಹಾರಾಷ್ಟ್ರಕ್ಕೆ ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿ ಆಗಲಿದ್ದಾರೆ, ಏಕನಾಥ್ ಶಿಂಧೆ ಸಿಎಂ ಆಗುವುದಿಲ್ಲ ಎಂದು ಸಹ ಹೇಳಿದ್ದರು. ಇದಲ್ಲದೆ ಬಾಂಗ್ಲಾದೇಶದ ಪರಿಸ್ಥಿತಿ ಹಾಗೂ ಶೇಖ್ ಹಸೀನಾ ಅವರ ರಾಜಕೀಯದ ಬಗ್ಗೆಯೂ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದರು. ಅದರಂತೆ ಬಾಂಗ್ಲಾದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿ, ಶೇಖ್ ಹಸೀನಾ ಅಧಿಕಾರದಿಂದ ಕೆಳಗೆ ಇಳಿಯ ಬೇಕಾಯಿತು.
ಪ್ರಶಾಂತ್ ಕಿಣಿ ಕನ್ನಡದ ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಹನುಮಂತ ವಿನ್ ಆಗುತ್ತಾರೆ ಎಂದು ಹೇಳಿದ್ದರು. ಕಳೆದ ವರ್ಷ ಮಾರ್ಚ್ನಲ್ಲಿ ನವೆಂಬರ್ನಲ್ಲಿ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾಗಲಿದೆ ಎಂದು ಹೇಳಿದ್ದರು. ಹೀಗೆ ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ಅವರು ಹೇಳಿದ ಭವಿಷ್ಯಗಳೆಲ್ಲಾ ಸತ್ಯವಾಗಿವೆ.
ಈಗ ಮತ್ತೊಂದು ಟ್ವೀಟ್ ಮೂಲಕ ಕರ್ನಾಟಕ ರಾಜ್ಯ ರಾಜಕಾರಣದ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಅವರು ಟ್ವೀಟ್ ಮಾಡಿರುವ ಪ್ರಕಾರ ಶೀಘ್ರದಲ್ಲೇ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯಲಿದ್ದಾರೆ ಎಂದು ಹೇಳಿದ್ದಾರೆ. ಅವರ ಸ್ಥಾನಕ್ಕೆ ರಾಜಕೀಯ ಪಂಡಿತರು ನಿರೀಕ್ಷಿಸದ ವ್ಯಕ್ತಿ ಸಿಎಂ ಆಗಲಿದ್ದಾರೆ ಎಂದು ಹೇಳಿದ್ದು, ಸಿದ್ದರಾಮಯ್ಯ ಬದಲಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳಿದ್ದಾರೆ. ಈ ಭವಿಷ್ಯ ಖಂಡಿತವಾಗಿ ನಿಜವಾಗುತ್ತಾ..? ಇಲ್ಲವಾ..? ಎನ್ನುವುದಕ್ಕೆ ಕಾಲವೇ ಉತ್ತರ ನೀಡಬೇಕಿದೆ.