ರೋಟರಿ ಇಂಟರ್ ನ್ಯಾಷನಲ್, ರೋಟರಿ ಡಿಸ್ಟ್ರಿಕ್ 3192 ಆಯೋಜಿಸುತ್ತಿರುವ ದಕ್ಷಿಣ ಏಷ್ಯಾ ಅಂತರರಾಷ್ಟ್ರೀಯ ಶಾಂತಿ ಸಮ್ಮೇಳನದ ಕುರಿತಾದ ಸಮಗ್ರ ಮಾಹಿತಿ ನೀಡಲಾಗುತ್ತಿದೆ.ಜಾಗತಿಕ ಶಾಂತಿ, ಜಾಗತಿಕ ಆರೋಗ್ಯ ಮತ್ತು ಜಾಗತಿಕ ಸಮುದಾಯಗಳ ನಡುವೆ ಸೌಹಾರ್ಧತೆ ಮೂಡಿಸುವ ಉದಾತ್ತ ಉದ್ದೇಶದಿಂದ ರೋಟರಿ ಇಂಟರ್ ನ್ಯಾಷನಲ್ ಸಂಸ್ಥೆ ರೋಟರಿ ಜಿಲ್ಲೆ 3192 ದಕ್ಷಿಣ ಏಷ್ಯಾ ಅಂತರರಾಷ್ಟ್ರೀಯ ಶಾಂತಿ ಸಮ್ಮೇಳನ ಆಯೋಜಿಸಿದೆ ಎಂದು ರೋಟರಿ ಇಂಟರ್ ನ್ಯಾಷನಲ್ ಜಿಲ್ಲಾ ಗವರ್ನರ್ ಮಹದೇವ್ ಪ್ರಸಾದ್ ಹೇಳಿದರು. ನಗರದ ಪ್ರೆಸ್ ಕ್ಲಬ್ ನ ಮಾಧ್ಯಮ ಗೋಷ್ಟಿಯನ್ನು ಉದ್ದೇಶಿಸಿ ಅವರು ಶಾಂತಿ ಸಮ್ಮೇಳನದ ವಿವರಗಳನ್ನು ಹಂಚಿಕೊಂಡಿದರು.
ಈ ಶಾಂತಿ ಸಮ್ಮೇಳನವನ್ನು ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ತಾವರಚಂದ್ ಗೆಹ್ಲೋಟ್ ಅವರು ಉದ್ಘಾಟಿಸಲಿದ್ದು, ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ ಕುಮಾರಸ್ವಾಮಿಯವರು, ರಾಜ್ಯದ ಗೃಹಸಚಿವರಾದ ಶ್ರೀ ಡಾ. ಜಿ ಪರಮೇಶ್ವರ್, ಆರೋಗ್ಯ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್, ಅರಣ್ಯ ಮತ್ತು ಪರಿಸರ ಖಾತೆ ಸಚಿವರಾದ ಶ್ರೀ ಈಶ್ವರ್ ಖಂಡ್ರೆ ಹಾಗೂ ಸಮಾಜ ಕಲ್ಯಾಣ ಸಚಿವರಾದ ಶ್ರೀ ಹೆಚ್.ಸಿ ಮಹದೇವಪ್ಪ ಉಪಸ್ಥಿತರಿರಲಿದ್ದಾರೆ. ಶಾಂತಿ ಸಮ್ಮೇಳನದಲ್ಲಿ ಆದಿ ಚುಂಚನಗಿರಿ ಮಹಾಸಂಸ್ಥಾನದ ಪೂಜ್ಯ ನಿರ್ಮಲಾನಂದನಾಥ ಸ್ವಾಮಿಜಿ ಮತ್ತು ಆರ್ಟ್ ಆಫ್ ಲೀವಿಂಗ್ ರವಿಶಂಕರ್ ಗುರೂಜಿಯವರ ದಿವ್ಯ ಸಾನಿಧ್ಯವೂ ಇರಲಿದೆ ಎಂದರು.
ಅಂತರರಾಷ್ಟ್ರೀಯ ಖ್ಯಾತಿಯ ಸಂಗೀತ ಸಂಯೋಜಕ ಪದ್ಮಶ್ರೀ ರಿಕ್ಕಿ ಕೇಜ್ ಈ ಶಾಂತಿ ಸಮ್ಮೇಳನದ ರಾಯಭಾರಿಯಾಗಿದ್ದು, ನೇಪಾಳದಿಂದ ಸಂದೀಪ್ ರಾಜ್ ಪಾಂಡೆ, ಶ್ರೀಲಂಕಾದ ಸರತ್ ಕೋಟಗಾಮ, ನಮ್ಮ ರಾಜ್ಯದಿಂದ ಖ್ಯಾತ ಕೃಷಿ ವಿಜ್ಞಾನಿ ಡಾ. ಕೆ.ಎನ್ ಗಣೇಶಯ್ಯ ಮತ್ತು ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಸೇರಿದಂತೆ ಅನೇಕ ಸಂಪನ್ಮೂಲ ವ್ಯಕ್ತಿಗಳು ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ ಎಂದರು.
ಭಾರತ ಸೇರಿದಂತೆ ಸುಮಾರು 8 ದೇಶಗಳ ವಿವಿದ ಕ್ಷೇತ್ರಗಳ 2000ಕ್ಕೂ ಅಧಿಕ ಉತ್ಸಾಹಿಗಳು ಶಾಂತಿ ಸಮ್ಮೇಳನದಲ್ಲಿ ಭಾಗವಹಿಸಲು ನೊಂದಾವಣೆ ಮಾಡಿಕೊಂಡಿದ್ದು, ನೇಪಾಳ, ಭೂತಾನ್, ಮಾಲ್ಡೀವ್ಸ್, ಶ್ರೀಲಂಕಾ, ಬಾಂಗ್ಲಾದೇಶ, ಆಫ್ಘಾನಿಸ್ತಾನ, ಟರ್ಕಿ ದೇಶಗಳ ಪ್ರತಿನಿಧಿಗಳು ಶಾಂತಿ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದರು. ಜಗತ್ತು ಮೂರನೆಯ ಮಹಾಯುದ್ದದ ಭೀತಿಯಲ್ಲಿದೆ, ಗಾಜಾ ಪಟ್ಟಿಯಲ್ಲಿ ಮತ್ತು ಉಕ್ರೇನ್ ನಲ್ಲಿ ನಿರಂತರ ಯುದ್ಧಗಳಿಂದ ಜನಸಮುದಾಯ ತತ್ತರಿಸಿದೆ, ನೆರೆಯ ಬಾಂಗ್ಲಾದೇಶದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿತ್ತು. ಜಾಗತಿಕ ಶಾಂತಿಯನ್ನು ರೋಟರಿ ಸಂಸ್ಥೆ ಸಮರ್ಥಿಸುತ್ತದೆ, ಜೊತೆಗೆ ಕೋವಿಡ್ ನಂತ ಮಾರಣಾಂತಿಕ ಮಹಾಮಾರಿ ರೋಗಗಳು ಮತ್ತೆ ಬರದಂತೆ ತಡೆಗಟ್ಟುವುದು ಹಾಗೂ ಗಡಿಯ ಸಮಸ್ಯೆಗಳನ್ನು ಸಂಘರ್ಷಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವುದನ್ನು ರೋಟರಿ ಬಯಸುತ್ತದೆ ಎಂದರು.
ಈ ದಕ್ಷಿಣ ಏಷ್ಯಾ ಅಂತರಾಷ್ಟ್ರೀಯ ಶಾಂತಿ ಸಮ್ಮೇಳನದ ಮುಖ್ಯ ಮೂರು ಆಯಾಮಗಳೆಂದರೆ ಆರೋಗ್ಯದ ಮೂಲಕ ಶಾಂತಿ, ಪರಿಸರ ಸಂರಕ್ಷಣೆಯ ಮೂಲಕ ಶಾಂತಿ ಮತ್ತು ಸಮಾಜ-ಸಮುದಾಯದ ಕಲ್ಯಾಣ. ಆರೋಗ್ಯಕರ ಜಗತ್ತು ಮತ್ತು ಹಸಿರು ನಾಳೆಗಳು ಎನ್ನುವುದು ಈ ಸಮ್ಮೇಳನದ ಧ್ಯೇಯವಾಕ್ಯ ಎಂದು ಅವರು ಮಾಹಿತಿ ನೀಡಿದರು. ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ನೇಪಾಳ, ಶ್ರೀಲಂಕಾ, ಭೂತಾನ್ ದೇಶಗಳ ಕಲೆ ಮತ್ತು ಸಂಸ್ಕೃತಿಯ ಪ್ರದರ್ಶನಗಳಿಗೆ ಈ ಶಾಂತಿ ಸಮ್ಮೇಳನ ವೇದಿಕೆ ಒದಗಿಸಿಕೊಡಲಿದೆ ಎಂದರು.
ಎಡಗೈನಲ್ಲಿ ಮಾಡಿದ ಕೆಲಸವನ್ನು ಬಲಗೈಗೆ ಗೊತ್ತಾಗದಂತೆ ರೋಟರಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ರೋಟರಿ ಸಂಸ್ಥೆಯಿಂದ ಈವರೆಗೆ ಸುಮಾರು 12,000ಕ್ಕೂ ಅಧಿಕ ಮಕ್ಕಳ ಹೃದಯದ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಮಾಡಿಸಲಾಗಿದೆ, ರೋಟರಿ ಮತ್ತು ಟಿಟಿಕೆ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ಬೆಂಗಳೂರಿನ ರಕ್ತದ ಅವಶ್ಯಕತೆಯ ಮೂರನೆಯ ಎರಡು ಭಾಗದಷ್ಟು ಪೂರೈಸಲಾಗುತ್ತದೆ. ಈವರೆಗೆ ರೋಟರಿ ಇಂಟರ್ ನ್ಯಾಷನಲ್ ಸಂಸ್ಥೆ ಜಗತ್ತಿನ 201 ರಾಷ್ಟ್ರಗಳಲ್ಲಿ ಪೋಲಿಯೋ ನಿರ್ಮೂಲನೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಪೋಲಿಯೋ ನಿರ್ಮೂಲನೆಗಾಗಿಯೇ ರೋಟರಿ ಸಂಸ್ಥೆ ಸುಮಾರು 50 ಮಿಲಿಯನ್ ಡಾಲರ್ ವ್ಯಯಿಸುತ್ತಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ದಕ್ಷಿಣ ಏಷ್ಯಾ ಅಂತರಾಷ್ಟ್ರೀಯ ಶಾಂತಿ ಸಮ್ಮೇಳನ ಸಮಿತಿಯ ಚೇರ್ಮನ್ ಶಂಕರ್ ಶ್ರೀನಿವಾಸ್, ಜಿಲ್ಲಾ ಕಾರ್ಯದರ್ಶಿಗಳಾದ ರಂಗಸ್ವಾಮಿ, ನಿಂರಂಜನ್, ರಾಜಾರಾಮ್, ಮೀಡಿಯಾ ಕೋಆರ್ಡಿನೇಟರ್ ಝರೀರ್ ಭಾತಾ ಹಾಗೂ ರೋಟರಿ ಸಂಸ್ಥೆಯ ವಾಸನ್, ಅಬಾ ಸಕ್ಸೇನಾ, ಕ್ಯಾಪ್ಟನ್ ಹೆಗಡೆ ಮುಂತಾದವರು ಉಪಸ್ಥಿತರಿದ್ದಾರೆ.