ತುಂಗಭದ್ರ ಡ್ಯಾಂನಲ್ಲಿ ವ್ಯರ್ಥವಾಗುತ್ತಿರುವ 27 ಟಿಎಂಸಿ ನೀರಿನ ಸದ್ಬಳಕೆಗೆ ಸರ್ಕಾರ ಸೂಕ್ತ ಕ್ರಮ: ಡಿಕೆಶಿ

Wmremove transformed (5)

ಬೆಂಗಳೂರು, ಮಾ.13: “ತುಂಗಭದ್ರ ಜಲಾಶಯದಲ್ಲಿ ಹೂಳು ತುಂಬಿ ವ್ಯರ್ಥವಾಗುತ್ತಿರುವ 27 ಟಿಎಂಸಿ ನೀರು ಸದ್ಬಳಕೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಇದಕ್ಕಾಗಿ ನವಲಿ ಸಮಾನಾಂತರ ಜಲಾಶಯ ನಿರ್ಮಾಣ ಹಾಗೂ ಪಂಪ್ ಮಾಡಿ ನೀರು ಬಳಸಿಕೊಳ್ಳುವ ಪರ್ಯಾಯ ಯೋಜನೆ ಬಗ್ಗೆ ಸರ್ಕಾರ ಆಲೋಚಿಸುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಸದಸ್ಯರಾದ ಬಸನಗೌಡ ಬಾದರ್ಲಿ ಅವರು ತುಂಗಭದ್ರಾ ಅಣೆಕಟ್ಟಿನಲ್ಲಿ ಹೂಳು ತುಂಬಿದೆ ಆದ ಕಾರಣಕ್ಕೆ ನವಲಿ ಜಲಾಶಯ ನಿರ್ಮಾಣಕ್ಕೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಗುರುವಾರ ಪ್ರಶ್ನೆ ಕೇಳಿದರು.

ADVERTISEMENT
ADVERTISEMENT

ಇದಕ್ಕೆ ಉತ್ತರ ನೀಡಿದ ಜಲಸಂಪನ್ಮೂಲ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು “ನಮ್ಮ ಅಧಿಕಾರಿಗಳು ಸಮತೋಲಿತ ಅಣೆಕಟ್ಟು ನಿರ್ಮಾಣ ಮಾಡದೆ ಪರ್ಯಾಯವಾದ ಆಲೋಚನೆ ತಿಳಿಸಿದ್ದಾರೆ. ನಮ್ಮ ಪಾಲಿನ ನೀರನ್ನು ಪಂಪ್ ಮಾಡಿಕೊಂಡು ಬಳಸಿಕೊಳ್ಳುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ಇದರಿಂದ ಮೂರು ರಾಜ್ಯಗಳಿಗೆ ಉಪಯೋಗವಾಗಲಿದೆ. ನಮಗೆ ಶೇ.65 ಅವರಿಗೆ ಶೇ.35 ರಷ್ಟು ಉಪಯೋಗವಾಗಲಿದೆ. ಸಮತೋಲಿತ ಅಣೆಕಟ್ಟು ನಿರ್ಮಾಣ ಹಾಗೂ ಹೊಸ ಪ್ರಸ್ತಾವನೆಗಳನ್ನು ಕೇಂದ್ರಕ್ಕೆ ಸಲ್ಲಿಸುತ್ತೇವೆ. ನಾವು ನಮ್ಮ ಪಾಲಿನ ನೀರು ಉಳಿಸಿಕೊಳ್ಳಲು ಬದ್ಧವಾಗಿದ್ದೇವೆ” ಎಂದರು.

ಮಾ.18 ಕ್ಕೆ ಪೆನ್ನಾರ್ ಕುರಿತು ಚರ್ಚೆ

“ಇದೇ 18 ರಂದು ಕೇಂದ್ರ ಜಲಶಕ್ತಿ ಸಚಿವರು ಪೆನ್ನಾರ್ ನದಿ ವಿಚಾರವಾಗಿ ನಮ್ಮನ್ನು ಹಾಗೂ ತಮಿಳುನಾಡಿನವರನ್ನು ಚರ್ಚೆಗೆ ಕರೆದಿದ್ದಾರೆ. ಅಂದು ನವಲಿ ಅಣೆಕಟ್ಟು ನಿರ್ಮಾಣ ಹಾಗೂ ಪರ್ಯಾಯ ಪರಿಹಾರಗಳ ಬಗ್ಗೆ ಕೇಂದ್ರ ಸಚಿವರ ಬಳಿ ಚರ್ಚೆ ಮಾಡಲಾಗುವುದು” ಎಂದರು.

“ಈ ವಿಚಾರವಾಗಿ ಆಂದ್ರ ಮತ್ತು ತೆಲಂಗಾಣ ಮುಖ್ಯಮಂತ್ರಿಗಳ ಬಳಿ ಮಾತನಾಡಿ, ಪತ್ರ ಕೂಡ ಬರೆದಿದ್ದೇನೆ. ರಾಜಸ್ಥಾನದ ಉದಯಪುರಲ್ಲಿ ನಡೆದ ಸಮಾವೇಶದಲ್ಲಿ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಜಲಸಂಪನ್ಮೂಲ ಸಚಿವರ ಜತೆ ಚರ್ಚೆ ಮಾಡಿದ್ದು, ಆಂಧ್ರ ಪ್ರದೇಶ ಮುಖ್ಯಮಂತ್ರಿಗಳಿಗೆ ದೂರವಾಣಿ ಕರೆ ಮಾಡಿ ಈ ಯೋಜನೆ ಬಗ್ಗೆ ಪ್ರಾತ್ಯಕ್ಷಿಕೆ ತೋರಿಸಿ ಚರ್ಚೆ ಮಾಡಲು ಸಮಯ ನೀಡಿ ಎಂದು ಕೇಳಿದ್ದೆ. ಎರಡು ರಾಜ್ಯಗಳ ಜತೆ ಚರ್ಚೆ ಮಾಡಿದ ನಂತರ ತುಂಗಭದ್ರಾ ಮಂಡಳಿ ಮುಂದೆ ಈ ಯೋಜನೆಗಳ ವರದಿ ಸಲ್ಲಿಸಲಾಗುವುದು ಎಂದು ಹೇಳಿದ್ದೆ. ಆಂಧ್ರಪ್ರದೇಶ ಸಿಎಂ ಅವರು ಈ ವಿಚಾರವಾಗಿ ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ” ಎಂದು ಹೇಳಿದರು.

“ತುಂಗಾಭದ್ರ ಅಣೆಕಟ್ಟಿನಲ್ಲಿ ಹೂಳು ತುಂಬಿರುವ ಕಾರಣಕ್ಕೆ ಸುಮಾರು 25 ರಿಂದ 30 ಟಿಎಂಸಿ ನೀರು ನಮಗೆ ಸಿಗದೆ ವ್ಯರ್ಥವಾಗುತ್ತಿದೆ. ಸಮತೋಲಿತ ಅನೆಕಟ್ಟು ನಿರ್ಮಾಣಕ್ಕೆ ಸುಮಾರು 15 ಸಾವಿರ ಎಕರೆ ಭೂಮಿ ಬೇಕಾಗಿದೆ. ಈ ಬಗ್ಗೆ ಈಗಾಗಲೇ ತಾಂತ್ರಿಕ ವರದಿಗಳನ್ನು ತಯಾರಿಸಲಾಗಿದೆ. ಈ ಬಗ್ಗೆ ಡಿಪಿಆರ್ ಕೂಡ ತಯಾರಾಗಿದೆ. ಇದನ್ನು ತುಂಗಭದ್ರಾ ಬೋರ್ಡ್ ಹಾಗೂ ಆಂಧ್ರ, ತೆಲಂಗಾಣ ರಾಜ್ಯಗಳಿಗೂ ಕಳಿಸಲಾಗಿದೆ” ಎಂದರು.

“ಆಂಧ್ರ ಪ್ರದೇಶ ಮುಖ್ಯಮಂತ್ರಿಗಳು ಸಮಯಾವಕಾಶ ನೀಡಿದ ತಕ್ಷಣ ನಾನೇ ಖುದ್ದಾಗಿ ಹೋಗಿ ಮಾತನಾಡುವೆ. ಸಚಿವ ಬೋಸ್ ರಾಜು, ಆ ಭಾಗದ ಇತರೆ ಸಚಿವರು ಹಾಗೂ ಶಾಸಕರು ಈ ಕೆಲಸ ಆಗಲೇಬೇಕು ಎಂದು ಬೆನ್ನು ಹತ್ತಿದ್ದಾರೆ. ಈಗಾಗಲೇ ನಾನು, ಬೋಸರಾಜು ಹಾಗೂ ಸಚಿವ ಸೋಮಣ್ಣ ಅವರು ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇವೆ” ಎಂದು ತಿಳಿಸಿದರು.

“ಈ ಹಿಂದಿನ ಸರ್ಕಾರಗಳು ಸಹ ಹೂಳು ತೆಗೆಯಲು ಕ್ರಮ ತೆಗೆದುಕೊಂಡಿದ್ದವು. ಈ ಬಗ್ಗೆ ನಾವು ಪ್ರಯತ್ನ ಮಾಡಿದ್ದೇವೆ. ಆದರೆ 30 ಟಿಎಂಸಿಯಷ್ಟು ನೀರು ಹಿಡಿಯುವ ಹೂಳನ್ನು ತೆಗೆದು ಎಲ್ಲಿ ಹಾಕುವುದು ಎನ್ನುವುದು ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ” ಎಂದರು.

“ಕಳೆದ ವರ್ಷ ತುಂಗಾಭದ್ರಾ ಅಣೆಕಟ್ಟಿನ ಗೇಟ್ ಕಿತ್ತು ಹೋದಾಗ, ನಾನು ಅಣೆಕಟ್ಟು ಉಳಿಯುವುದಿಲ್ಲ ಎಂದು ಆತಂಕಗೊಂಡಿದ್ದೆ. ನಾನು ಅಲ್ಲಿಗೆ ಭೇಟಿ ನೀಡಿದಾಗ ಇಡೀ ಡ್ಯಾಂ ಅಲ್ಲಾಡುತ್ತಿತ್ತು. ರಾತ್ರೋ ರಾತ್ರಿ ಅಲ್ಲಿಗೆ ತೆರಳಿ ಗೇಟ್ ದುರಸ್ಥಿಗೊಳಿಸಲು ಕ್ರಮ ತೆಗೆದುಕೊಳ್ಳಲಾಯಿತು. ತಾಂತ್ರಿಕ ತಜ್ಞರಾದ ಕನ್ನಯ್ಯ ನಾಯ್ಡು, ಜೆಎಸ್ ಡ್ಬ್ಯೂ ಹಾಗೂ ಇತರೇ ಸಂಸ್ಥೆಗಳ ಜತೆ ಮಾಡನಾಡಿ ಎಲ್ಲರ ಪರಿಶ್ರಮದಿಂದ ಒಂದು ವಾರಕ್ಕೆ ಗೇಟ್ ದುರಸ್ಥಿ ಮಾಡಿ ನೀರು ನಿಲ್ಲಿಸಲಾಯಿತು” ಎಂದು ಹೇಳಿದರು.

Exit mobile version