ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಪ್ರಧಾನಿ ಮೋದಿ ಹಳೇಯ ಅಸ್ತ್ರವನ್ನೇ ಮತ್ತೆ ಪ್ರಯೋಗಿಸಿದ್ದಾರೆ. ತಮಿಳುನಾಡಿನ ಮತದಾರರನ್ನೇ ಗುರಿಯಾಗಿಸಿ ಬಿಟ್ಟಿರುವ ಬಾಣ, ಇಂಡಿಯಾ ಮೈತ್ರಿಕೂಟಕ್ಕೆ ಹಿನ್ನಡೆ ಆಗುವ ಭೀತಿ ಕಾಡುತ್ತಿದೆ. 1974ರಲ್ಲಿ ವಿವಾದಿತ ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಟ್ಟ ವಿಚಾರಕ್ಕೆ ಸಂಬಂಧಿಸಿ ಮೋದಿ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ನ್ನ ಟೀಕಿಸಿದ್ದಾರೆ. ಕಚ್ಚತೀವುವನ್ನು ಶ್ರೀಲಂಕಾಗೆ ಅಂದಿನ ಇಂದಿರಾ ಗಾಂಧಿ ಸರ್ಕಾರ ಹಸ್ತಾಂತರಿಸಿತ್ತು ಎಂದು ಇತ್ತೀಚೆಗೆ ಆರ್ ಟಿಐ ಮೂಲಕ ಬಹಿರಂಗವಾಗಿದ್ದು, ಇದಕ್ಕೆ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷದ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದಾರೆ. “Eye-opening and startling, “ಕಣ್ಣು ತೆರೆಸುವ ಮತ್ತು ಅಚ್ಚರಿಯ ವಿಷಯ” ಎಂದು ಬರೆದು ಕಾಂಗ್ರೆಸ್ ಪಕ್ಷವನ್ನು ನಂಬಲು ಸಾಧ್ಯವಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ದ್ವೀಪವನ್ನು ಹಸ್ತಾಂತರ ಮಾಡಿದ್ದು “ಕೆಟ್ಟ” ನಿರ್ಧಾರ. 1974 ರಲ್ಲಿ ಕಾಂಗ್ರೆಸ್ ಸರ್ಕಾರವು ಕಚ್ಚತೀವು ಹಸ್ತಾಂತರಿಸಿದ್ದು ಪ್ರತಿಯೊಬ್ಬ ಭಾರತೀಯನನ್ನೂ ಕೆರಳಿಸಿದೆ. ನಾವು ಕಾಂಗ್ರೆಸ್ ನ್ನು ಎಂದಿಗೂ ನಂಬಲು ಸಾಧ್ಯವಿಲ್ಲ. ಭಾರತದ ಏಕತೆ, ಸಮಗ್ರತೆ ಮತ್ತು ಹಿತಾಸಕ್ತಿಗಳನ್ನು ದುರ್ಬಲಗೊಳಿಸುವುದು ಕಾಂಗ್ರೆಸ್ 75 ವರ್ಷಗಳಿಂದ ಮಾಡಿಕೊಂಡು ಬಂದಿರುವ ಕೆಲಸ ಎಂದು ಮೋದಿ ಟೀಕಿಸಿದ್ದಾರೆ.