ಹಿಂದೂ ಮುಸ್ಲಿಂ ವಿವಾದ ರಾಜ್ಯ ರಾಜಕಾರಣದಲ್ಲಷ್ಟೇ ಅಲ್ಲ, ದೇಶ ರಾಜಕಾರಣದಲ್ಲೂ ಬೆಂಕಿಯಾಗಿದೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಏಟು ಎದಿರೇಟಿಗೆ ಸಾಕ್ಷಿಯಾಗಿದೆ. ಇತ್ತೀಚೆಗೆ ಯೋಗಿ ಆದಿತ್ಯನಾಥ್ ಅವರನ್ನುದ್ದೇಶಿಸಿ ಮಾತನಾಡಿದ್ದ ಖರ್ಗೆ ಯೋಗಿ ಧರಿಸುವ ಕೇಸರಿ ಬಟ್ಟೆ ಹಾಗೂ ಯೋಗಿ ಆದಿತ್ಯನಾಥ್ ಅವರ ಹೇಳಿಕೆ ಉಲ್ಲೇಖಿಸಿ ಒಬ್ಬ ಭಯೋತ್ಪಾದಕ ಮಾತ್ರ ಈ ರೀತಿ ಹೇಳಿಕೆ ನೀಡಲು ಸಾಧ್ಯ ಎಂದು ಟೀಕಿಸಿದ್ದರು.
ಇದಕ್ಕೆ ಉತ್ತರ ನೀಡಿರುವ ಯೋಗಿ ಆದಿತ್ಯನಾಥ್ ‘ನಾನೊಬ್ಬ ಯೋಗಿ, ಯೋಗಿಗೆ ದೇಶವೇ ಮೊದಲು‘ ಎಂದು ಹೇಳಿದ್ದಾರೆ. ಅಲ್ಲದೆ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದಲ್ಲಿ ನಡೆದ ದುರಂತವನ್ನೂ ಪ್ರಸ್ತಾಪಿಸಿದ್ದಾರೆ.ಭಾರತ ಬ್ರಿಟಿಷರ ಅಧೀನದಲ್ಲಿದ್ದಾಗ, ಮುಸ್ಲಿಂ ಲೀಗ್ ಸಹಯೋಗದ ಬಗ್ಗೆ ಕಾಂಗ್ರೆಸ್ ಮೌನವಾಗಿತ್ತು ಎಂದರು. ಆದ್ದರಿಂದಲೇ ಆ ಸಮಯದಲ್ಲಿ ಮುಸ್ಲಿಂ ಲೀಗ್ ಹಿಂದೂಗಳನ್ನು ಸಿಕ್ಕ ಸಿಕ್ಕಲ್ಲಿ ಕೊಲ್ಲುತ್ತಿತ್ತು. ಇದೇ ಘಟನೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಗ್ರಾಮವೂ ಸುಟ್ಟು ಕರಕಲಾಗಿದ್ದು, ಈ ಪರಿಣಾಮ ಅವರ ತಾಯಿ ಹಾಗೂ ಕುಟುಂಬದವರು ಸಾವನ್ನಪ್ಪಿದ್ದಾರೆ. ಆದರೆ ಖರ್ಗೆಯವರು ಇದನ್ನು ಹೇಳದೆ ಮೌನವಾಗಿದ್ದಾರೆ. ಏಕೆಂದರೆ ಒಂದು ವೇಳೆ ಹೇಳಿದರೆ ಮುಸ್ಲಿಂ ಮತಗಳು ಕಡಿಮೆಯಾಗುತ್ತವೆ ಎಂದು ಅವರಿಗೆ ತಿಳಿದಿದೆ. ವೋಟ್ ಬ್ಯಾಂಕ್ಗಾಗಿ ಕುಟುಂಬದವರ ತ್ಯಾಗವನ್ನೂ ಖರ್ಗೆಯವರು ಮರೆತಿದ್ದಾರೆ ಎಂದು ಹೇಳಿದ್ದಾರೆ ಯೋಗಿ ಆದಿತ್ಯನಾಥ್.
ಹೈದರಾಬಾದ್ ಕರ್ನಾಟಕದವರಾದ ಖರ್ಗೆ ಅವರು ಈಗ ಬೀದರ್ ಜಿಲ್ಲೆಯಲ್ಲಿರುವ ಬಾಲ್ಕಿ ತಾಲೂಕಿನ ವಾರ್ವಟ್ಟಿ ಗ್ರಾಮದವರು. ಹೈದರಾಬಾದ್ ವಿಮೋಚನಾ ಹೋರಾಟಕ್ಕೂ ಮುನ್ನ ನಡೆದ ರಜಾಕಾರರ ದಾಳಿಯಲ್ಲಿ ಹತ್ಯೆಗೀಡಾಗಿದ್ದವರಲ್ಲಿ ಖರ್ಗೆಯವರ ಕುಟುಂಬವೂ ಒಂದು. ರಜಾಕಾರರ ದಾಳಿಯಲ್ಲಿ ಖರ್ಗೆಯವರ ತಾಯಿ ಸಬವ್ವಾ ಕೂಡಾ ಹತರಾಗಿದ್ದರು. ಖರ್ಗೆ ಕುಟುಂಬ ಇದ್ದ ಗುಡಿಸಲಿಗೆ ಬೆಂಕಿ ಹಚ್ಚಿ ಕೊಂದಿದ್ದರು. ಆ ಘಟನೆ ವೇಳೆ ಮಗುವಾಗಿದ್ದ ಖರ್ಗೆಯವರನ್ನು ಪಕ್ಕದ ಮರದಲ್ಲಿ ಜೋಲಿ ಕಟ್ಟಿ ಮಲಗಿಸಿದ್ದರಂತೆ. ತಾಯಿಯನ್ನಷ್ಟೇ ಅಲ್ಲ, ಆ ಘಟನೆಯಲ್ಲಿ ಖರ್ಗೆಯವರ ಸಹೋದರಿಯೂ ಸಾವನ್ನಪ್ಪಿದ್ದರು. ಆಗ ಖರ್ಗೆ ಅವರಿಗೆ ಕೇವಲ 6 ವರ್ಷ.ಇನ್ನು ಖರ್ಗೆಯವರ ತಂದೆ ಮಾಪಣ್ಣ, ಊರಿನಲ್ಲಿ ಇರಲಿಲ್ಲ. ಹೀಗಾಗಿ ಮಗುವಾಗಿದ್ದ ಖರ್ಗೆ ಮತ್ತು ಅವರ ತಂದೆ ಬದುಕುಳಿದಿದ್ದರು. ಯೋಗಿ ಆದಿತ್ಯನಾಥ್ ಇದೇ ಘಟನೆಯನ್ನು ಪ್ರಸ್ತಾಪ ಮಾಡಿದ್ದಾರೆ.
ಇದನ್ನು ಓದಿ: EXPLAINER: ಗೃಹ ಜ್ಯೋತಿ ಬಿಲ್ ಗೊಂದಲ : ಝೀರೋ ಬಿಲ್, 200 ಯುನಿಟ್ಗೆ ಪೂರ್ತಿ ಬಿಲ್.. ಯಾಕೆ..?
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭಯೋತ್ಪಾದಕರಿಗೆ ಹೋಲಿಸಿದಕ್ಕೆ ತಿರುಗೇಟು ನೀಡಿರುವ ಯೋಗಿ, ಕಳೆದ ಮೂರು ದಿನಗಳಿಂದ ಕಾಂಗ್ರೆಸ್ ಅಧ್ಯಕ್ಷ ಖರ್ಗೆ ನನ್ನ ಮೇಲೆ ತುಂಬಾನೇ ಕೋಪಗೊಂಡಿದ್ದಾರೆ. ನಾನು ಖರ್ಗೆ ಜೀ ಹೇಳುತ್ತಿದ್ದೇನೆ, ‘ಒಬ್ಬ ಯೋಗಿಗೆ ದೇಶವೇ ಮೊದಲು ಬರುತ್ತದೆ. ನನ್ನ ನಾಯಕ ಮೋದಿಯವರಿಗೂ ದೇಶವೇ ಮೊದಲು. ಆದರೆ ನಿಮಗೆ ಕಾಂಗ್ರೆಸ್ ತುಷ್ಟೀಕರಣವೇ ಪ್ರಧಾನವಾಗಿದೆ.ನನಗಾಗಲೀ, ನಮ್ಮ ನಾಯಕ ಮೋದಿ ಅವರಿಗಾಗಲೀ ದೇಶವೇ ಮೊದಲು ಎಂದು ಹೇಳಿದ್ದಾರೆ.
ಜಾರ್ಖಂಡ್ ಚುನಾವಣೆ ಹಿನ್ನೆಲೆಯಲ್ಲಿ ಪಲಮುವಿನಲ್ಲಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಖರ್ಗೆ, ಯೋಗಿ ಆದಿತ್ಯನಾಥ್ ಒಡೆದರೆ ಕತ್ತರಿಸುತ್ತೇವೆ ಎಂದು ಜನರಿಗೆ ಹೇಳುತ್ತಾರೆ. ಇದು ಪುಣ್ಯಾತ್ಮ ಮಾಡುವ ಕೆಲಸವೇ? ಒಬ್ಬ ಭಯೋತ್ಪಾದಕ ಮಾತ್ರ ಈ ರೀತಿ ಹೇಳಿಕೆ ನೀಡಲು ಸಾಧ್ಯ ಎಂದು ಟೀಕಿಸಿದ್ದರು.