ಪತ್ರಿಕೋದ್ಯಮ. ಪ್ರಜಾಪ್ರಭುತ್ವದ ನಾಲ್ಕನೇ ಅಂಗ. ಸ್ವತಂತ್ರ ಪತ್ರಿಕೋದ್ಯಮವೇ ಪ್ರಜಾಪ್ರಭುತ್ವದ ಜೀವಾಳ. ಪತ್ರಕರ್ತನಾದವನಿಗೆ ಸಾಮಾಜಿಕ ಕಳಕಳಿ, ಸಮಾಜದ ಬಗ್ಗೆ ಬದ್ಧತೆ ಇರಬೇಕು. ಪತ್ರಕರ್ತನಾದವನಿಗೆ ಸಮಾಜದ ಸ್ವಾಸ್ಥ್ಯದ ಬಗ್ಗೆ ಅರಿವಿರಬೇಕು. ಆಗ ಮಾತ್ರ ಆತ “ಜವಾಬ್ದಾರಿಯುತ ಪತ್ರಕರ್ತ” ಅಂತ ಅನ್ನಿಸಿಕೊಳ್ತಾನೆ. ಹೇಳಿಕೇಳಿ ಇದು ಸವಾಲುಗಳ ಸಾಮ್ರಾಜ್ಯ. ಈ ಪೈಪೋಟಿಯ ಯುಗದಲ್ಲಿ ನಮ್ಮದೇ ಛಾಪು ಮೂಡಿಸಬೇಕು ಅಂದರೆ, ಅದಕ್ಕೆ ಧೈರ್ಯ ತುಸು ಹೆಚ್ಚೇ ಬೇಕು. ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಎಲ್ಲವೂ ಸುಲಭ ಅಂತ ತಿಳಿದುಕೊಂಡು ಬಿಡ್ತೀವಿ. ಆದರೆ ಒಳಗೆ ಹೋದಾಗಷ್ಟೇ ಗೊತ್ತಾಗೋದು ಅದೆಷ್ಟು ಚಾಲೆಂಜಿಂಗ್ ಅಂತ. ಯೆಸ್, ಅಂತದ್ದೇ ಚಾಲೆಂಜ್ ಅನ್ನ ನಾವು ತೆಗೆದುಕೊಂಡಿದ್ದೇವೆ. ಕರ್ನಾಟಕದಲ್ಲಿ ಹೊಸ ಸಂಚಲನ ಮೂಡಿಸಲು. ನೈಜ ಪತ್ರಿಕೋದ್ಯಮದ ಘಮ ಉಣಬಡಿಸಲು.. ವಿಶಿಷ್ಟ, ವಿನೂತನ ಹಾಗೂ ಅರ್ಥಗರ್ಭಿತ ವಿಷಯಗಳನ್ನ ಮುಂದಿಟ್ಟುಕೊಂಡು ಪತ್ರಿಕೋದ್ಯಮದ ನೈಜ ಧ್ಯೇಯದೊಂದಿಗೆ ಬರುತ್ತಿದೆ, ನಿಮ್ಮ ಹೆಮ್ಮೆಯ “ಗ್ಯಾರಂಟಿ ನ್ಯೂಸ್”..
ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಗುರಿ ಇರುತ್ತೆ. ಆ ಗುರಿಯ ಬೆನ್ನತ್ತಿ ಹೋದಾಗ ಅಂದುಕೊಂಡಿದ್ದನ್ನ ಸಾಧಿಸಿದಾಗ ಆಗುವ ಸಾರ್ಥಕ ಭಾವ ಎಲ್ಲರಿಗೂ ಸಿಗೋದಿಲ್ಲ. ಅದು ಸಿಗಬೇಕು ಅಂದ್ರೆ ಅಲ್ಲಿ ಅವಿರತವಾದ ಶ್ರಮ ಇರಬೇಕು.. ಧೃತಿಗೆಡದ ಮನಸ್ಸಿರಬೇಕು. ಸಾಧಿಸುವ ಛಲ ಇರಬೇಕು. ಆಗ ಮಾತ್ರ ನಮ್ಮ ಗುರಿ ನಮ್ಮ ಅಂಗೈಯಲ್ಲಿರುತ್ತೆ. ಆ ಅವಿರತ ಶ್ರಮ, ಆ ವಿರಾಮವಿಲ್ಲದ ಕೆಲಸ, ಅಡೆತಡೆ ಬಂದರೂ ಮುನ್ನುಗುವ ಮನಸ್ಸಿನ ಪ್ರತೀಕವೇ “ಗ್ಯಾರಂಟಿ ನ್ಯೂಸ್”.
ಈಗಾಗಲೇ ಹಲವು ಸುದ್ದಿ ಸಂಸ್ಥೆಗಳನ್ನ ಕಟ್ಟಿ ಬೆಳೆಸಿದ, ಅನುಭವಿ, ನುರಿತ ಪತ್ರಕರ್ತರ ತಂಡವೇ ಈಗ ಗ್ಯಾರಂಟಿ ನ್ಯೂಸ್ ಮೂಲಕ ನಿಮ್ಮ ಮುಂದೆ ಬಂದಿದೆ. ಮಾಧ್ಯಮ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಹಿರಿಯ ಪತ್ರಕರ್ತ ಟಿ.ಎಂ. ಶಿವಸ್ವಾಮಿ ನೇತೃತ್ವದಲ್ಲಿ ತಂಡ ರೆಡಿಯಾಗಿದೆ. ಫೈರ್ ಬ್ರಾಂಡ್ ರಾಧಾ ಹಿರೇಗೌಡರ್, ಹಿರಿಯ ಪತ್ರಕರ್ತ, ಅನುಭವಿ ಅರವಿಂದ್ ಸಾಗರ, ಸತೀಶ್ ಆಂಜಿನಪ್ಪ, ಕಿರಿಕ್ ಕೀರ್ತಿ, ಕೆ.ಎಂ. ಶಿವಕುಮಾರ್, ಮಂಜುನಾಥ್, ರಾಕೇಶ್, ಸುರೇಶ್, ಡಾ. ಕೃಷ್ಣ, ಸಂತೋಷ್ ಶೀಲವಂತ ಸೇರಿ “ಅಪ್ಪಟ್ಟ ಪತ್ರಕರ್ತ”ರೆ ಆರಂಭಿಸುತ್ತಿರುವ ವಾಹಿನಿಯೇ ನಿಮ್ಮ “ಗ್ಯಾರಂಟಿ ನ್ಯೂಸ್”.
ಯಾವುದೇ ವಿಷಯ ಆಗಿರಲಿ.. ಅದರಲ್ಲಿ ತರ್ಕ ಇರಬೇಕು.. ತರ್ಕದಲ್ಲಿ ಅರ್ಥ ಇರಬೇಕು.. ಅರ್ಥದಲ್ಲಿ ಸ್ಪಷ್ಟತೆ ಇರಬೇಕು.. ಸ್ಪಷ್ಟತೆಯಲ್ಲಿ ಆತ್ಮವಿಶ್ವಾಸ ಇರಬೇಕು. ನಿಲುವಿನಲ್ಲಿ ನಿಖರತೆ ಇರಬೇಕು. ಆಗ ಮಾತ್ರ ಯಶಸ್ಸಿನೆಡೆಗೆ ಮುನ್ನಡೆಯಲು ಸಾಧ್ಯ. ಕನ್ನಡಿಗರ ವಿಶಾಲ ಹೃದಯದಲ್ಲಿ ನಮಗೂ ಸ್ಥಾನವಿದೆ ಎಂದು ನಂಬಿದ್ದೇವೆ. ನಿಮ್ಮ ಮೇಲಿನ ನಂಬಿಕೆಯಿಂದಲೇ ಈ ಸಾಹಸಕ್ಕೂ ಕೈಹಾಕಿದ್ದೇವೆ. ಇದು ಸುಲಭದ ಹಾದಿಯಲ್ಲ ಅಂತ ನಮಗೂ ಗೊತ್ತು. ಹಾಗಂತ ಬೆನ್ನು ತೋರಿಸಿ ಓಡಿ ಹೋಗುವ ಜಾಯಮಾನ ನಮ್ಮದಲ್ಲ. ನಾವು ಹೋರಾಟಕ್ಕೆ ಸಿದ್ಧರಾಗಿದ್ದೇವೆ. ನೀರಿಗೆ ಬಣ್ಣ ಇಲ್ಲ.. ಹಾಗೆ ನಮ್ಮ ಸುದ್ದಿಗಳಿಗೂ ಯಾವುದೇ ಬಣ್ಣ ಇಲ್ಲ..
ಸವಾಲುಗಳನ್ನ ಸ್ವೀಕರಿಸಲು ಸಜ್ಜಾಗಿದ್ದೇವೆ. ನಿಮ್ಮ ಮಡಿಲಿಗೆ “ಗ್ಯಾರಂಟಿ ನ್ಯೂಸ್” ಕೂಸನ್ನ ಹಾಕಿದ್ದೇವೆ. ಸಾಕಿ.. ಸಲಹಿ.. ಹಾರೈಸಿ.. ಆಶೀರ್ವದಿಸಿ. ನೀವಿಟ್ಟಿರುವ ನಂಬಿಕೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇವೆ. ನಿಮ್ಮ ವಿಶ್ವಾಸಕ್ಕೆ ಘಾಸಿ ಆಗದಂತೆ ನೋಡಿಕೊಳ್ಳುತ್ತೇವೆ. ತಪ್ಪಿದ್ದರೆ ತಿದ್ದಿಕೊಳ್ಳಲು ಸಿದ್ಧರಿದ್ದೇವೆ.