ದೇಶದಲ್ಲಿ ಲೋಕಸಭಾ ಚುನಾವಣಾ ಫೀವರ್ ಜೋರಾಗಿದೆ. ರಾಜ್ಯದಿಂದ ಹೆಚ್ಚಿನ ಸೀಟ್ ಫಸಲು ತೆಗೆಯಲು ಮುಂದಾಗಿರುವ ಮೈತ್ರಿ ಪಕ್ಷಗಳು, ಅದಕ್ಕೆ ಬೇಕಾದ ಸರ್ವಪ್ರಯತ್ನ ಮುಂದುವರೆಸಿದೆ. ಹೀಗಾಗಿ ಮೈತ್ರಿ ನಾಯಕರ ಸಮನ್ವಯಕ್ಕಾಗಿ ದೆಹಲಿಯಿಂದ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಗೆಲುವಿಗೆ ಬೇಕಾದ ಇನ್ ಪುಟ್ಗಳನ್ನ ನೀಡಿದ್ದಾರೆ ಎನ್ನಲಾಗಿದೆ. ಯಾವುದೇ ಗೊಂದಲಗಳಿಗೆ ಅವಕಾಶ ಕೊಡದಂತೆ ತಾಕೀತು ಮಾಡಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ವಿಫಲ ಆಗಲು ಕಾರಣ ಏನು ಅನ್ನೋದರ ಬಗ್ಗೆಯೂ ತಿಳಿಸಿದ್ದಾರೆ. ಇನ್ನು ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಹೆಚ್.ಡಿ. ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್, ಸಿಟಿ ರವಿ, ಬಂಡೆಪ್ಪ ಕಾಶಂಪೂರ, ಸಾರಾ ಮಹೇಶ್, ಜಿಟಿ ದೇವೇಗೌಡ ಸೇರಿ ಅನೇಕ ನಾಯಕರು ಭಾಗಿಯಾಗಿದ್ದಾರೆ.