ಲೋಕಸಭಾ ಚುನಾವಣೆಗೆ ಸಮುದಾಯ ಮತಗಳ ಕ್ರೊಢೀಕರಣಕ್ಕೆ ಕಾಂಗ್ರೆಸ್, ಬಿಜೆಪಿ ಮುಂದಾಗಿದೆ. ಅದರಲ್ಲೂ ಹಳೇ ಮೈಸೂರು ಭಾಗದಲ್ಲಿ ಪಾರುಪತ್ಯ ಸ್ಥಾಪಿಸಲು, ಒಕ್ಕಲಿಗ ಮತಗಳೇ ನಿರ್ಣಾಯಕ. ಹೀಗಾಗಿ ಒಕ್ಕಲಿಗ ಮತಗಳನ್ನ ಸೆಳೆಯುವ ನಿಟ್ಟಿನಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಮುಂದಾಗಿವೆ. ಬಿಜೆಪಿಯ ಈ ಪ್ರಯತ್ನಕ್ಕೆ ಸಾಥ್ ಕೊಡುತ್ತಿರುವ ಜೆಡಿಎಸ್, ಜಾತಿ ವೋಟ್ ಕ್ರೊಢೀಕರಿಸಲು ತನ್ನೆಲ್ಲ ಶಕ್ತಿಯನ್ನ ಧಾರೆ ಎರೆಯುತ್ತಿದೆ. ಒಕ್ಕಲಿಗ ಸಮುದಾಯವುಪ ಭಾವನಾತ್ಮಕವಾಗಿ ಬೆಸೆದುಕೊಂಡಿರುವ ಮಠ ಎಂದರೆ ಅದು ಆದಿಚುಂಚನಗಿರಿ ಮಠ.
ಹೀಗಾಗಿ ಆದಿಚುಂಚನಗಿರಿ ಮಠಕ್ಕೆ ಪದೇಪದೇ ಭೇಟಿ ನೀಡುವ ಮೂಲಕ ಒಕ್ಕಲಿಗ ಸಮುದಾಯಕ್ಕೆ ಸಂದೇಶ ರವಾನಿಸುತ್ತಿದ್ದಾರೆ ಉಭಯ ಪಕ್ಷಗಳ ನಾಯಕರು.ಕಳೆದ ವಾರವಷ್ಟೇ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್ ಅಭ್ಯರ್ಥಿಗಳು, ನಿರ್ಮಲಾನಂದನಾಥ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದರು. ಈಗ ಬಿಜೆಪಿ ನಾಯಕರ ಸರದಿ. ಹೌದು ವಿರೋಧ ಪಕ್ಷದ ನಾಯಕ ಆರ್. ಅಶೋಕ್, ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಮಂಡ್ಯ ಲೋಕಸಭಾ ಅಭ್ಯರ್ಥಿ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥನಾರಾಯಣ್, ಕೇಂದ್ರ ಸಚಿವರಾದ ಕು. ಶೋಭಾ ಕರಂದ್ಲಾಜೆ, ಮಾಜಿ ಸಚಿವ ಜಿ.ಟಿ. ದೇವೇಗೌಡ, ಬಿಜೆಪಿ ಮಾಜಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಮೊದಲ ಹಂತದ ಚುನಾವಣೆಗೆ ಸಂಬಂಧಿಸಿದ ಎನ್.ಡಿ.ಎ ಅಭ್ಯರ್ಥಿಗಳು ಇಂದು ವಿಜಯನಗರದ ಆದಿಚುಂಚನಗರಿ ಮಠಕ್ಕೆ ಭೇಟಿ ನೀಡಿ ಡಾ. ನಿರ್ಮಲಾನಂದ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಎರಡೂ ಪಕ್ಷಗಳ ಈ ಪ್ರಯತ್ನಕ್ಕೆ ಎಷ್ಟರ ಮಟ್ಟಿಗೆ ಫಲ ಸಿಗಲಿದೆ ಅನ್ನೋದಕ್ಕೆ ಚುನಾವಣೆ ಫಲಿತಾಂಶದಿಂದಲೇ ಉತ್ತರ ಸಿಗಲಿದೆ.