ಜಮ್ಮು-ಕಾಶ್ಮೀರದ ಅಕ್ರಮ ಶಸ್ತ್ರಾಸ್ತ್ರಗಳು ಮಾರಾಟ ಬಾಲ ಕರ್ನಾಟಕದಲ್ಲಿಯೂ ಸಕ್ರಿಯವಾಗಿರುವ ಬಗ್ಗೆ ಸದರ್ನ್ ಕಮಾಂಡ್ ಮಿಲಿಟರಿ ಇಂಟೆಲಿಜೆನ್ಸ್ ಆತಂಕ ವ್ಯಕ್ತಪಡಿಸಿದ್ದು, ಈ ಸಂಬಂಧ ಕಟ್ಟೆಚ್ಚಿದ ವಹಿಸುವಂತೆ ಸಲಹೆ ನೀಡಿದೆ. ದಕ್ಷಿಣ ಭಾರತದಲ್ಲಿ ಜಮ್ಮು ಕಾಶ್ಮೀರದ 25 ಜನ ಶಂಕಿತರು ಅಕ್ರಮವಾಗಿ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿರುವ ಮಾಹಿತಿ ಮೇರೆಗೆ ಮಿಲಿಟರಿ ಇಂಟಲಿಜೆನ್ಸ್ ಮಾಹಾರಾಷ್ಟ್ರದ ಪೊಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸುತ್ತಿದೆ. ಇದರ ಪರಿಣಾಮ, ಮಹಾರಾಷ್ಟ್ರದಲ್ಲಿ ನ.15ರಂದು 9 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಇನ್ನುಳಿದ ಶಂಕಿತರು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳದಲ್ಲಿ ಹರಡಿಕೊಂಡಿದ್ದು, ಅಲ್ಲಿಯೂ ಅಕ್ರಮ ಶಸ್ತಾಸ್ತ್ರ ಪೂರೈಕೆ ದಂಧೆ ನಡೆಸುತ್ತಿರುವ ಸಾಧ್ಯತೆಯಿದೆ. ಈ ಸಂದೇಹದ ,ಮೇರೆಗೆ ಮಿಲಿಟರಿ ಇಂಟಲಿಜೆನ್ಸ್ ಕಾರ್ಯಾಚರಣೆಗೆ ಅಣಿಯಾಗುತ್ತಿದೆ ಎಂದು ತಿಳಿದುಬಂದಿದೆ.
ಮೊದಲ ಪ್ರಕರಣ:
ಇದುವರೆಗೂ ಬೆಳಕಿಗೆ ಬಂದಿರುವ ಇಂತಹ ಪ್ರಕರಣಗಳಲ್ಲಿ ಮಧ್ಯಪ್ರದೇಶ ಮತ್ತು ಬಿಹಾರದಿಂದಲೇ ಅಕ್ರಮ ಶಸ್ತ್ರಾಸ್ತ್ರ ಪೂರೈಕೆಯಾಗುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಜಮ್ಮು ಕಾಶ್ಮೀರದಿಂದ ಪೂರೈಕೆಯಾಗಿರುವ ಬಂದೂಕುಗಳು ಲಭಿಸಿರುವದರಿಂದ ಪ್ರಕರಣ ಗಂಭೀರತೆ ಪಡೆದಿದೆ.
ಈ ಅಕ್ರಮ ಶಸ್ತ್ರಾಸ್ತ್ರ ಜಾಲದ ಮಾಸ್ಟರ್ ಮೈಂಡ್, ಬಂಧಿತ ಶೇರ್ ಅಹ್ಮದ್ ಗುಲಾಮ್ ಹಸನ್ನ ವಿಚಾರಣೆ ತೀವ್ರಗೊಳಿಸಿರುವ ಪೊಲೀಸರು, ವಿಧ್ವಂಸಕ ಕೃತ್ಯಗಳಿಗೆ ವ್ಯವಸ್ಥಿತ ಸಂಚು ರೂಪಿಸಿರುವ ಸಾಧ್ಯತೆ ಸೇರಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.ಬಂಧಿತರೆಲ್ಲರೂ ಜಮ್ಮುಕಾಶ್ಮೀರದ ರಾಜೇರಿ ಜಿಲ್ಲೆಯವರಾಗಿದ್ದು, ಮಹಾರಾಷ್ಟ್ರದ ಪುಣೆ, “ನಾಗುರ, ಶ್ರೀಗೊಂಡ ಮತ್ತು ಅಹಲ್ಯಾನಗರ ‘ಸೇರಿದಂತೆ ವಿವಿಧ ನಗರಗಳಲ್ಲಿ ವಾಸವಾಗಿದ್ದರು. ಬ್ಯಾಂಕ್, ಎಟಿಎಂ. ಹಣಕಾಸು ಸಂಸ್ಥೆ ಸೇರಿದಂತೆ ವಿಐಪಿಗಳಿಗೆ ಖಾಸಗಿ ಸೆಕ್ಯುರಿಟಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಇವರು, ಐಷಾರಾಮಿ ಜೀವನ ಸಾಗಿಸುತ್ತಿದ್ದರು. ಇವರಿಂದ ಜಪ್ತಿ ಪಡಿಸಿಕೊಂಡಿ ರುವ ಒಂಬತ್ತು 12-ಬೋರ್ ಬಂದೂಕುಗಳು ಹಾಗೂ 58 ಜೀವಂತ ಕಾಟ್ರಿಡ್ಜ್ಗಳು ಮಿಲಿಟರಿ ದರ್ಜೆಯವುಗಳಲ್ಲ, ಆದರೆ, ಜಮ್ಮು ಕಾಶ್ಮೀರದಿಂದ ಪೂರೈಕೆಯಾಗಿರುವುದು ಹಲವು ಅನುಮಾನ ಹುಟ್ಟಿಸಿದೆ.
ಇವರೆಲ್ಲ ಸೇರಿ ವ್ಯವಸ್ಥಿತ ಸಂಚು ರೂಪಿಸಿರುವ ಶಂಕೆ. ಈವರೆಗೂ ಯಾರಿಗೆಲ್ಲ ಶಸ್ತ್ರಾಸ್ತ್ರ ಪೂರೈಕೆ ಮಾಡಿದ್ದಾರೆ. ಭಯೋತ್ಪಾದನೆ ಅಥವಾ ದರೋಡೆಯಲ್ಲಿ ತೊಡಗಿಸಿಕೊಂಡಿದ್ದಾರೆಯೇ, ಜಮ್ಮು ಕಾಶ್ಮೀರದಿಂದ ಇಲ್ಲಿಯವರೆಗೆ ಶಸ್ತ್ರಾಸ್ತ್ರಗಳನ್ನು ಹೇಗೆ ತರಿಸಿಕೊಳ್ಳುತ್ತಿದ್ದರು ಎನ್ನುವುದರ ಬಗ್ಗೆ ತನಿಖೆ ಚುರುಕುಗೊಳಿಸಲಾಗಿದೆ ಎನ್ನುತ್ತಿವೆ ಮಹಾರಾಷ್ಟ್ರದ ಪೊಲೀಸ್ ಮೂಲಗಳು.
ಲೈಸೆನ್ಸ್ ಸಮೇತ ಬಂದೂಕು ಮಾರಾಟ:
ಖಾಸಗಿಯಾಗಿ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದರೂ ಐಶಾರಾಮಿ ಜೀವನ ನಡೆಸುವ ಈ ಜಾಲದ ಸದಸ್ಯರು, ಕೇವಲ 50 ಸಾವಿರ ರೂ.ಗಳಿಗೆ ಜಮ್ಮು ” ಕಾಶ್ಮೀರದಿಂದ ಬಂದೂಕು ಹಾಗೂ ನಕಲಿ ಲೈಸೆನ್ಸ್ ಆಮದು ಮಾಡಿಕೊಂಡು ಮಾರಾಟ ಮಾಡುತ್ತಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ‘ಆತ್ಮರಕ್ಷಣೆಗಾಗಿ ಅಲ್ಲಿನ ಸರಕಾರ ಲೈಸೆನ್ಸ್ ನೀಡಿದೆ’ ಎಂದು ನಂಬಿಸುತ್ತಿದ್ದ ಆರೋಪಿಗಳು, ಹಣಕಾಸು ಸಂಸ್ಥೆ ಹಾಗೂ ಬೃಹತ್ ಪ್ರಮಾಣದ ಹಣ ಸಾಗಾಟದ ಸೆಕ್ಯುರಿಟಿ ಸಿಬ್ಬಂದಿ, ಪ್ರಾಣಿಗಳ ಬೇಟೆ ಸೇರಿದಂತೆ ಇನ್ನಿತರ ಉದ್ದೇಶಕ್ಕೆ ಬಳಸುವವರಿಗೂ ಅಕ್ರಮ ಶಸ್ತ್ರಾಸ್ತ್ರ ಮತ್ತು ನಕಲಿ ಲೈಸೆನ್ಸ್ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾಡಳಿತ ಏನು ಮಾಡಬೇಕು?
ಶಂಕಿತರ ಕೃತ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶಗಳಲ್ಲಿ ಪೊಲೀಸರು ಹಾಗೂ ಆಯಾ ಜಿಲ್ಲಾಡಳಿತಗಳು ತಮ್ಮ ವ್ಯಾಪ್ತಿಯ ಎಲ್ಲ ಖಾಸಗಿ ಸೆಕ್ಯುರಿಟಿ ಸಿಬ್ಬಂದಿಯ ಲೈಸೆನ್ಸ್ ಮತ್ತು ಬಂದೂಕುಗಳನ್ನು ತಪಾಸಣೆಗೊಳಪಡಿಸುವುದು ಉತ್ತಮ ಎನ್ನುತ್ತಾರೆ. ಇಂಟಲಿಜೆನ್ಸ್ನ ಹೆಸರು ಬಹಿರಂಗ ಪಡಿಸಲಿಚ್ಛಿಸದ ಅಧಿಕಾರಿ. ಸಾರ್ವಜನಿಕರು ಸಹ ಶಾಂಕಾಸ್ಪದರ ಕುರಿತು ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂಬುದು ಅವರ ಸಲಹೆ.