ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು, ಮೈಕ್ರೋ ಫೈನಾನ್ಸ್ ಕಾಟಕ್ಕೆ ಬೇಸತ್ತಿದ್ದ ಮತ್ತೊಂದು ಕುಟುಂಬಕ್ಕೆ ನೆರವಾಗಿದ್ದಾರೆ.
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಸರಿಕಟ್ಟಿಯ ಬಸವರಾಜ ಮಾರುತಿ ಕೊಂಡಸ್ಕೊಪ್ಪ ಅವರು ಖಾಸಗಿ ಹಣಕಾಸು ಸಂಸ್ಥೆಯಿಂದ 7 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದರು.
ಸಾಲ ಮರುಪಾವತಿಸಲು ವಿಫಲರಾದ ಹಿನ್ನೆಲೆಯಲ್ಲಿ ಖಾಸಗಿ ಹಣಕಾಸು ಸಂಸ್ಥೆಯವರು 3 ತಿಂಗಳ ಹಿಂದೆ ಬಸವರಾಜ ಅವರ ಮನೆಗೆ ಬೀಗ ಹಾಕಿದ್ದರು.
ಮೈಕ್ರೋ ಫೈನಾನ್ಸ್ ಅವರ ಕಾಟಕ್ಕೆ ಬೇಸತ್ತ ಬಸವರಾಜ ಸಚಿವರ ಬಳಿಕ ತಮ್ಮ ಅಳಲು ತೋಡಿಕೊಂಡಿದ್ದರು. ನೊಂದ ರೈತನ ಮನವಿ ಸ್ವೀಕರಿಸಿದ ಸಚಿವರು, ತಮ್ಮ ಆಪ್ತ ಸಹಾಯಕ ಮಹಾಂತೇಶ್ ಹಿರೇಮಠ ಮೂಲಕ ಖಾಸಗಿ ಹಣಕಾಸು ಸಂಸ್ಥೆ ಸಿಬ್ಬಂದಿ ಜೊತೆ ಮಾತುಕತೆ ನಡೆಸಿ, ಸಾಲ ಮರು ಪಾವತಿಸಲು ಎರಡು ತಿಂಗಳ ಸಮಯಾವಕಾಶ ಕೊಡಿಸಿದರು. ಜೊತೆಗೆ ಅನಾವಶ್ಯಕವಾಗಿ ಸಾಲಗಾರರಿಗೆ ಕಾಟ ನೀಡದಂತೆ ಖಾಸಗಿ ಹಣಕಾಸು ಸಂಸ್ಥೆಯವರಿಗೆ ಸಚಿವರು ತಾಕೀತು ಮಾಡಿದರು.
ಕಳೆದ ವಾರವಷ್ಟೇ ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದ ಮಾಧುರಿ ಲೋಹಾರ್ ಎನ್ನುವ ಬಾಣಂತಿ ಮತ್ತು ಅವರ ಕುಟುಂಬದವರು ಸಾಲ ತೀರಿಸಿಲ್ಲ ಎಂದು ಆರೋಪಿಸಿ ಖಾಸಗಿ ಹಣಕಾಸು ಸಂಸ್ಥೆಯವರು ಹಸಿ ಬಾಣಂತಿ ಸೇರಿದಂತೆ ಕುಟುಂಬ ಸದಸ್ಯರನ್ನು ಮನೆಯಿಂದ ಹೊರಹಾಕಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ ಸಚಿವರು, ಸಾಲ ಮರುಪಾವತಿಸಲು ಸಮಯಾವಕಾಶ ಕೊಡಿಸಿದ್ದಲ್ಲದೆ, ಮನೆಯ ಬೀಗ ತೆರವು ಮಾಡಿಸಿದ್ದರು.
- ಸಚಿವರ ಕಾರ್ಯಕ್ಕೆ ಸಾರ್ವಜನಿಕರ ಪ್ರಶಂಸೆ
ಅಪಘಾತದಿಂದ ಗಾಯಗೊಂಡು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ವಿಶ್ರಾಂತಿಯಲ್ಲಿದ್ದರೂ ಮೈಕ್ರೋ ಫೈನಾನ್ಸ್ ಕಾಟದಿಂದ ಬಳಲುತ್ತಿರುವ ಜನರಿಗೆ ನೆರವಾಗಿದ್ದಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಜನವರಿ 14 ರಂದು ಬೆಳಗಾವಿಯ ಕಿತ್ತೂರು ಬಳಿ ಸಚಿವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. 13 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ವೈದ್ಯರು ಸಚಿವರಿಗೆ ಒಂದು ತಿಂಗಳ ಕಾಲ ವಿಶ್ರಾಂತಿ ಸೂಚಿಸಿದರೂ ಸಚಿವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯವೈಖರಿ ಬಗ್ಗೆ ನಿಗಾವಹಿಸುತ್ತಿದ್ದಾರೆ. ಜೊತೆಗೆ ಮೈಕ್ರೋ ಫೈನಾನ್ಸ್ ಕಾಟದಿಂದ ಬೇಸತ್ತಿರುವ ಜನರ ನೆರವಿಗೂ ಬರುತ್ತಿದ್ದಾರೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc