ರಿಲಾಯನ್ಸ್ ಇಂಡಸ್ಟ್ರೀಯಲ್ ಲಿಮಿಟೆಡ್ನ ನಿರ್ದೇಶಕ ಹಾಗೂ ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಮುಖೇಶ್ ಅಂಬಾನಿಯ ಪುತ್ರ ಅನಂತ್ ಅಂಬಾನಿ, 140 ಕಿಲೋಮೀಟರ್ ಪಾದಯಾತ್ರೆಯನ್ನು ಕೈಗೊಂಡಿದ್ದಾರೆ. ಜಾಮ್ನಗರದಿಂದ ದ್ವಾರಕೆಯವರೆಗೆ ನಡೆಯುತ್ತಿರುವ ಈ ಪಾದಯಾತ್ರೆ, ಭಗವಾನ್ ಶ್ರೀಕೃಷ್ಣನ ದರ್ಶನ ಪಡೆದು, ಅವರು ತಮ್ಮ 30 ನೇ ಹುಟ್ಟುಹಬ್ಬವನ್ನು ಅದ್ದೂರಿ ಕಾರ್ಯಕ್ರಮದೊಂದಿಗೆ ಆಚರಿಸುವ ಬದಲು ಆಧ್ಯಾತ್ಮಿಕವಾಗಿ ಆಚರಿಸಲು ಆಯ್ಕೆ ಮಾಡಿಕೊಂಡಿದ್ದಾರೆ. ರಾಧಿಕಾ ಮರ್ಚೆಂಟ್ ದ್ವಾರಕಾದಲ್ಲಿ ಅವರೊಂದಿಗೆ ಸೇರಲಿದ್ದಾರೆ ಮತ್ತು ಏಪ್ರಿಲ್ 10 ರಂದು ದಂಪತಿಗಳು ವಿಶೇಷ ಪೂಜೆಯಲ್ಲಿ ಭಾಗವಹಿಸಲಿದ್ದಾರೆ.
ಇತ್ತೀಚೆಗೆ ಕುಂಭಮೇಳದಲ್ಲಿ ಭಾಗವಹಿಸಿ, ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ ಧಾರ್ಮಿಕ ಆಚರಣೆಗಳನ್ನು ಪಾಲಿಸಿದ್ದರು. ಇದೀಗ ಅನಂತ್ ಅಂಬಾನಿ ತನ್ನ ಹುಟ್ಟುಹಬ್ಬದ ಪ್ರಯುಕ್ತ ಜಾಮ್ನಗರದಿಂದ ದ್ವಾರಕೆಯವರೆಗೆ ಪಾದಯಾತ್ರೆ ನಡೆಸುತ್ತಿದ್ದಾರೆ. ಐದು ದಿನಗಳ ಹಿಂದೆ ಆರಂಭವಾದ ಈ ಯಾತ್ರೆ ಇನ್ನೂ 2 ರಿಂದ 4 ದಿನಗಳಲ್ಲಿ ದ್ವಾರಕೆಯನ್ನು ತಲುಪುವ ನಿರೀಕ್ಷೆಯಿದೆ.
ರಾತ್ರಿ ವೇಳೆ ಪಾದಯಾತ್ರೆ
ಪಾದಯಾತ್ರೆ ನಡೆಸುವ ಸಮಯವನ್ನು ಬೆಳಗ್ಗೆ ಹಿಂಬಾಲಿಸಿದರೆ ಟ್ರಾಫಿಕ್ ತೊಂದರೆ ಹಾಗೂ ಜನಜಂಗಳಿಯ ಸಮಸ್ಯೆ ಎದುರಾಗಬಹುದೆಂದು ಪರಿಗಣಿಸಿ, ಅನಂತ್ ಅಂಬಾನಿ ರಾತ್ರಿ ವೇಳೆಯಲ್ಲಿ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದಾರೆ. ಪ್ರತಿದಿನ ಸರಾಸರಿ 10 ರಿಂದ 12 ಕಿಲೋಮೀಟರ್ ನಡೆಯುತ್ತಾ ಮುಂದುವರಿಯುತ್ತಿರುವ ಈ ಯಾತ್ರೆಗೆ Z+ ಸೆಕ್ಯೂರಿಟಿ ನೀಡಲಾಗಿದೆ. ಪೊಲೀಸರು ಸಹ ಭದ್ರತೆಯನ್ನು ಒದಗಿಸುತ್ತಿದ್ದಾರೆ.
ಪಾದಯಾತ್ರೆಯ ಉದ್ದೇಶ
ಅನಂತ್ ಅಂಬಾನಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, “ನಾನು ಯಾವುದೇ ಕಾರ್ಯ ಆರಂಭಿಸುವ ಮುನ್ನ ದ್ವಾರಕಾಧೀಶ ಶ್ರೀಕೃಷ್ಣನನ್ನು ನೆನಪಿಸುತ್ತೇನೆ. ಇದರಿಂದ ಎಲ್ಲವೂ ಸರಾಗವಾಗಿ ನಡೆಯುತ್ತದೆ. ಯುವ ಜನತೆಗೆ ನಾನು ಹೇಳುವುದಾದರೆ, ಕೃಷ್ಣನ ಮೇಲೆ ನಂಬಿಕೆ ಇಡಿ. ಅವನ ಭಕ್ತಿಪಥದಲ್ಲಿ ನಡೆದರೆ, ಅವನು ನಿಮ್ಮ ಬದುಕಿನ ಅಡಚಣೆಗಳನ್ನು ನಿವಾರಿಸುತ್ತಾನೆ” ಎಂದು ಹೇಳಿದರು.
ಅನಂತ್ ಅಂಬಾನಿಯ ಈ ಪಾದಯಾತ್ರೆ ಜಾಮ್ನಗರದ ಮೋತಿ ಕ್ವಾಡಿಯಿಂದ ಪ್ರಾರಂಭಗೊಂಡಿದೆ. ಇದು ಅವರ ಶ್ರೀಕೃಷ್ಣನ ಮೇಲಿರುವ ಭಕ್ತಿ ಮತ್ತು ಶ್ರದ್ಧೆಯ ಸಂಕೇತವಾಗಿದೆ. ಜೊತೆಗೆ, ಸರ್ವಜನಾಂಗದ ಒಳ್ಳೆಯದಕ್ಕಾಗಿ ಹಾಗೂ ತಮ್ಮ ಹುಟ್ಟುಹಬ್ಬವನ್ನು ಆಧ್ಯಾತ್ಮಿಕ ರೀತಿಯಲ್ಲಿ ಆಚರಿಸಲು ಈ ಪಾದಯಾತ್ರೆ ಕೈಗೊಂಡಿದ್ದಾರೆ.
ಅನಂತ್ ಅಂಬಾನಿ ಸಮಾಜಮುಖಿ ಸೇವೆಗಳಲ್ಲಿಯೂ ಗುರುತಿಸಿಕೊಂಡಿದ್ದಾರೆ. ವನ್ಯಜೀವಿಗಳ ಸಂರಕ್ಷಣೆ, ಅವುಗಳ ಪುನರ್ವಸತಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅವರು, ವಿಶೇಷವಾಗಿ ಆನೆಗಳ ಬಗ್ಗೆ ಅಪಾರ ಕಾಳಜಿ ವಹಿಸಿದ್ದಾರೆ. ಇತ್ತೀಚೆಗೆ, ಫೆಬ್ರವರಿ 27ರಂದು, ಅವರಿಗೆ ಪ್ರಾಣಿ ಮಿತ್ರ ನ್ಯಾಷನಲ್ ಅವಾರ್ಡ್ ಪ್ರದಾನ ಮಾಡಲಾಯಿತು.