ಗುವಾಹಟಿ : ಅಸ್ಸಾಂ ವಿಧಾನಸಭೆಯಲ್ಲಿ ಪ್ರತಿ ಶುಕ್ರವಾರ ಮುಸ್ಲಿಂ ಶಾಸಕರಿಗೆ ನೀಡಲಾಗುತ್ತಿದ್ದ 2 ಗಂಟೆಗಳ ನಮಾಜ್ ವಿರಾಮವನ್ನು 88 ವರ್ಷಗಳ ಬಳಿಕ ಈ ಬಾರಿಯ ಅಧಿವೇಶನದಿಂದ ಸಂಪೂರ್ಣವಾಗಿ ರದ್ದು ಮಾಡಲಾಗಿದೆ.
ಈ ನಿರ್ಧಾರವನ್ನು ರಾಜ್ಯದ ಬಿಜೆಪಿ ಸರ್ಕಾರ ಕಳೆದ ಆಗಸ್ಟ್‌ನಲ್ಲಿಯೇ ತೆಗೆದುಕೊಂಡಿತ್ತು. ಆದರೆ ಈಗಿನಿಂದಲೇ ಅಧಿಕೃತವಾಗಿ ಜಾರಿಯಾಗಿದೆ. ಈ ಕ್ರಮವನ್ನು ಮುಸ್ಲಿಂ ಶಾಸಕರು ವಿರೋಧಿಸಿದ್ದಾರೆ. ವಿಧಾನಸಭೆಯಲ್ಲಿ 30ಕ್ಕೂ ಹೆಚ್ಚು ಮುಸ್ಲಿಂ ಶಾಸಕರು ಇದ್ದರೂ, ಬಿಜೆಪಿ ಬಹುಮತ ಹೊಂದಿರುವ ಕಾರಣ ಅವರ ವಿರೋಧವನ್ನು ನಿರ್ಲಕ್ಷಿಸಲಾಗಿದೆ ಎಂದು ವಿರೋಧ ಪಕ್ಷದ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಾತ್ಯತೀತ ತತ್ವದ ಅನ್ವಯ ನಿರ್ಧಾರ:
ವಿಧಾನಸಭಾ ಸ್ಪೀಕರ್ ಬಿಸ್ವಜಿತ್ ದೈಮಾರಿ ಈ ನಿರ್ಧಾರವನ್ನು ಸಮರ್ಥಿಸುತ್ತಾ, ‘ಸಂವಿಧಾನದ ಜಾತ್ಯತೀತ ತತ್ವವನ್ನು ಪೋಷಿಸುವ ದೃಷ್ಟಿಯಿಂದ ಶುಕ್ರವಾರ ವಿಶೇಷ ಬ್ರೇಕ್ ನೀಡುವ ಪದ್ಧತಿಯನ್ನು ಸ್ಥಗಿತಗೊಳಿಸಲಾಗಿದೆ. ಇತರ ದಿನಗಳಂತೆ ಶುಕ್ರವಾರವೂ ಸದನ ನಿರಂತರವಾಗಿ ನಡೆಯಲಿದೆ’ ಎಂದರು.
ಮುಖ್ಯಮಂತ್ರಿಯ ಪ್ರತಿಕ್ರಿಯೆ:
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಈ ನಿರ್ಧಾರವನ್ನು ಸ್ವಾಗತಿಸಿ, ‘1937ರಲ್ಲಿ ಮುಸ್ಲಿಂ ಲೀಗ್‌ನ ನಾಯಕ ಸಯ್ಯದ್ ಸಾದುಲ್ಲಾ ಈ ಪದ್ಧತಿಗೆ ನಾಂದಿ ಹಾಡಿದ್ದರು. ಆದರೆ, ಈಗ ಅದನ್ನು ರದ್ದು ಮಾಡುವುದು ಸಮಾನತೆ ಹಾಗೂ ಸಂವಿಧಾನದ ತತ್ವಗಳಿಗೆ ಅನುಗುಣವಾಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.