ಮಹಾರಾಷ್ಟ್ರ ರಾಜ್ಯದ ನಾಗಪುರದ ರಸ್ತೆಗಳಲ್ಲಿ ಸೋಮವಾರ ಮಾರ್ಚ್ 17 ರಂದು ಉದ್ವಿಗ್ನ ಸ್ಥಿತಿ.. ಕಲ್ಲು ತೂರಾಟ, ಬೆಂಕಿ, ಆಕ್ರೋಶ, ಹಾಹಾಕಾರ.. “ಔರಂಗಜೇಬ್ ಸಮಾಧಿ ಕಿತ್ತೊಗೆಯಿರಿ!” ಅನ್ನೋ ಘೋಷಣೆ..! ಈ ಹಿಂಸಾತ್ಮಕ ಸಂಘರ್ಷಕ್ಕೆ ಕಾರಣವಾಗಿದ್ದು, ಐತಿಹಾಸಿಕ ಕರಿನೆರಳು..! ಮೊಘಲ್ ಚಕ್ರವರ್ತಿ ಔರಂಗಜೇಬ್ ಮತ್ತು ಮರಾಠಾ ವೀರ ಛತ್ರಪತಿ ಸಂಭಾಜಿ ಮಹಾರಾಜರ ನಡುವಿನ 300 ವರ್ಷಗಳ ಹಿಂದಿನ ಸಂಘರ್ಷ, ಇದೀಗ ಜನಸಾಮಾನ್ಯರು ರೊಚ್ಚಿಗೇಳುವಂತೆ ಮಾಡಿದೆ.. 3 ಶತಮಾನಗಳ ಹಿಂದಿನ ವಿವಾದ ಇಂದೇಕೆ? ಇದು ಕೇವಲ ಇತಿಹಾಸದ ಕರಾಳ ನೆನಪಿನ ವಿರುದ್ಧದ ಆಕ್ರೋಶವೇ? ಅಥವಾ ಸಿನಿಮಾ, ರಾಜಕೀಯ ಮತ್ತು ಜನ ಸಮೂಹದ ಉದ್ರೇಕಕಾರಿ ಭಾವನೆಗಳ ಸಂಗಮವೇ?
ಇತಿಹಾಸ-ವರ್ತಮಾನಗಳ ನಡುವಣ ಸಂಘರ್ಷ..!
ತನ್ನ ಕರ್ಮಠ ಇಸ್ಲಾಮಿಕ್ ನೀತಿಗಳಿಂದಲೇ ಕುಖ್ಯಾತನಾದ ಔರಂಗಜೇಬ್, 17ನೇ ಶತಮಾನದಲ್ಲಿ ಜಾರಿಗೆ ತಂದಿದ್ದ ನೀತಿಗಳು, ಆತ ಎಸಗಿದ ಕ್ರೌರ್ಯಗಳು ಇಂದು ಮಾರ್ದನಿಸುತ್ತಿವೆ. ಜಿಝಿಯಾ ತೆರಿಗೆ, ದೇವಾಲಯಗಳ ಧ್ವಂಸ ಮತ್ತು ಸಂಭಾಜಿ ಮಹಾರಾಜರಿಗೆ ನೀಡಿದ್ದ ಕ್ರೂರ ಹಿಂಸಾತ್ಮಕ ಮರಣ ಇದೀಗ ಹಿಂದೂ ಸಮುದಾಯದ ಕಹಿ ನೆನಪುಗಳನ್ನು ಕೆರಳಿಸಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಖುಲ್ದಾಬಾದ್‌ನಲ್ಲಿ ಇರುವ ಔರಂಗಜೇಬನ ಮಸೀದಿಯನ್ನು ತೆರವು ಮಾಡಬೇಕು ಎಂದು ಆಗ್ರಹಿಸಿ ಹಿಂದೂ ಪರ ಸಂಘಟನೆಗಳು, ಆತನ ಸಮಾಧಿಗೆ ಬೆಂಕಿ ಇಟ್ಟ ಘಟನೆ, ದೇಶಾದ್ಯಂತ ಹೊಸ ವಿವಾದದ ಸ್ವರೂಪವನ್ನೇ ಪಡೆದುಕೊಂಡಿದೆ.
“ಹಿಂದೂ ಸ್ವಾಭಿಮಾನ”ದ ಕಿಡಿ ಹೊತ್ತಿಸಿತಾ “ಛಾವಾ”..?
ಮರಾಠಾ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಮಗ ಛತ್ರಪತಿ ಸಂಭಾಜಿ ಮಹಾರಾಜರನ್ನು ಬಂಧಿಸಿದ್ದ ಔರಂಗಜೇಬ್, ಸಂಭಾಜಿ ಮಹಾರಾಜರಿಗೆ ಚಿತ್ರಹಿಂಸೆ ನೀಡಿ ಹತ್ಯೆಗೈದ ಸನ್ನಿವೇಶವನ್ನು “ಛಾವಾ” ಸಿನಿಮಾದಲ್ಲಿ ಚಿತ್ರಿಸಲಾಗಿದೆ. ಈ ಸಿನಿಮಾ ಯುವ ಜನರಲ್ಲಿ “ಹಿಂದೂ ಸ್ವಾಭಿಮಾನ”ದ ಕಿಡಿ ಹೊತ್ತಿಸಿದೆ. ಈ ಕಿಡಿ ಜ್ವಾಲೆಯ ರೂಪ ಪಡೆದುಕೊಂಡಿದೆ!
ಫೆಬ್ರವರಿ 2025ರಲ್ಲಿ ಬಿಡುಗಡೆಯಾದ “ಛಾವಾ” ಚಿತ್ರದಲ್ಲಿ ಔರಂಗಜೇಬ್‌ನನ್ನು “ಕ್ರೂರ ಸಾಮ್ರಾಟ”ನಾಗಿ ಬಿಂಬಿಸಲಾಗಿದೆ. ಸಂಭಾಜಿ ಅವರನ್ನು ಬಂಧಿಸಿ ಅವರ ನಾಲಿಗೆ ಕತ್ತರಿಸುವ ದೃಶ್ಯಗಳನ್ನು ನೋಡಿದ ಪ್ರೇಕ್ಷಕರಂತೂ ಸಿಡಿದೆದ್ದಿದ್ದಾರೆ. “ಇದು ನಮ್ಮ ಐತಿಹಾಸಿಕ ವೀರನಿಗೆ ಆದ ಅಪಮಾನ” ಎಂಬ ಆಕ್ರೋಶದ ನುಡಿಯಿಂದ ಹಿಡಿದು, ಹತ್ತು ಹಲವು ರೀತಿಯಲ್ಲಿ ಜನರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಔರಂಗಜೇಬ್ ಸಮಾಧಿಗೆ ಬೆಂಕಿ! “ಛಾವಾ” ಸಿನಿಮಾದ ಪರೋಕ್ಷ ಪಾತ್ರ..?
- “ಛಾವಾ” ಸಿನಿಮಾ ನೇರವಾಗಿ ಇಂಥಾದ್ದೊಂದು ಹಿಂಸಾತ್ಮಕ ಪ್ರತಿಭಟನೆಗೆ ಪ್ರೇರಣ ನೀಡಿಲ್ಲ. ಆದರೆ ಸಾಮೂಹಿಕ ಪ್ರಜ್ಞೆ ಕೆರಳಿಸಿದೆ ಅನ್ನೋದು ಸುಳ್ಳಲ್ಲ!
- ಯುವಕರು ಸಿನಿಮಾ ನಂತರ ತಮ್ಮೂರಿನಲ್ಲಿ ಇರುವ ಔರಂಗಜೇಬನ ಸಮಾಧಿಯ ಬಗ್ಗೆ ಪ್ರಶ್ನಿಸಲು ಪ್ರಾರಂಭಿಸಿದ್ದೇ ಈ ಘರ್ಷಣೆಯ ಮೂಲ!
- “ಸಂಭಾಜಿ ಮಹಾರಾಜರಿಗೆ ಹಿಂಸೆ ನೀಡಿದ ವ್ಯಕ್ತಿಯ ಸ್ಮಾರಕ ಮರಾಠಾ ನೆಲದಲ್ಲಿ ಏಕೆ?” ಎಂಬ ಪ್ರಶ್ನೆಯೇ ಉದ್ವಿಗ್ನತೆಗೆ ಮೂಲ ಕಾರಣ!
ಮಾರ್ಚ್ 17.. ಆಕ್ರೋಶದ ಕಟ್ಟೆ ಒಡೆದ ದಿನ!
ವಿಶ್ವ ಹಿಂದೂ ಪರಿಷತ್ (VHP) ಮತ್ತು ಬಜರಂಗ ದಳದ ಕಾರ್ಯಕರ್ತರು ನಾಗಪುರದ ಮಹಲ್ ಪ್ರದೇಶದಲ್ಲಿ ಮೊದಲಿಗೆ ಧರಣಿ ನಡೆಸಿದರು. “ಔರಂಗಜೇಬ್ ಸಮಾಧಿ ಕಿತ್ತೊಗೆಯಿರಿ, ಇತಿಹಾಸ ಸರಿಪಡಿಸಿ!” ಎಂದು ಘೋಷಣೆ ಕೂಗಿದರು. ಈ ವೇಳೆ ಔರಂಗಜೇಬನ ಸಮಾಧಿ ಸ್ಮಾರಕ್ಕೆ ಬೆಂಕಿ ಇಟ್ಟರು. ಆದರೆ, ಸಂದರ್ಭದಲ್ಲಿ ಪವಿತ್ರ ಧರ್ಮ ಗ್ರಂಥ ಸುಡಲಾಯ್ತು ಎಂಬ ವದಂತಿ ಹರಡಿತು. ಈ ಸುಳ್ಳು ವದಂತಿ ಹರಡಿದ್ದೇ ತಡ, ಕೆಲವೇ ನಿಮಿಷಗಳಲ್ಲಿ ನಾಗಪುರ ರಣಾಂಗಣವಾಯ್ತು!
ಎಲ್ಲೆಲ್ಲೂ ಹಿಂಸಾಚಾರ.. ಆಕ್ರೋಶ.. ಏನೇನಾಯ್ತು?
- ವಾಹನಗಳ ಮೇಲೆ ಕಲ್ಲು ತೂರಾಟ..
- ಬಸ್ ನಿಲ್ದಾಣದಲ್ಲಿ ಬೆಂಕಿ
- ಪೊಲೀಸರಿಂದ ಲಾಠಿ ಚಾರ್ಜ್, ಅಶ್ರುವಾಯು ಪ್ರಯೋಗ
- 30ಕ್ಕೂ ಹೆಚ್ಚು ಜನರಿಗೆ ಗಾಯ
- ಸೋಮವಾರ ರಾತ್ರಿಯ ಹೊತ್ತಿಗೆ ನಾಗಪುರದಾಚೆಗೂ ಹರಡಿದ ಹಿಂಸೆ
ರಾಜಕೀಯ ನಾಯಕರು ಹೇಳಿದ್ದೇನು?
“ಶಾಂತಿಯನ್ನು ಕಾಪಾಡಲು ಎಲ್ಲರೂ ಸಹಕರಿಸಿ.”: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್
– “ಸಾಮಾಜಿಕ ಸಾಮರಸ್ಯವೇ ನಮ್ಮ ಮುಖ್ಯ ಧ್ಯೇಯ.”: ಕೇಂದ್ರ ಸಚಿವ ನಿತಿನ್ ಗಡ್ಕರಿ
ಪ್ರಧಾನಿ ಮೋದಿ ಭೇಟಿಗೆ ಕೆಲವೇ ದಿನ ಮುನ್ನ ಗಲಭೆ?
ಮಾರ್ಚ್ 30, 2025ರಂದು ಪ್ರಧಾನಿ ಮೋದಿ ನಾಗಪುರಕ್ಕೆ ಭೇಟಿ ನೀಡಲಿದ್ದಾರೆ. ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಆರ್ ಎಸ್ ಎಸ್ ಮುಖ್ಯ ಕಚೇರಿಗೆ ಭೇಟಿ ನೀಡುತ್ತಿದ್ದಾರೆ. ಇಂಥಾದ್ದೊಂದು ಮಹತ್ವದ ಸನ್ನಿವೇಶದಲ್ಲೇ ಈ ಗಲಭೆ ನಡೆದಿದೆ. ಆದರೆ, ಪ್ರಧಾನಿ ಭೇಟಿಗೂ ಈ ಹಿಂಸಾಚಾರಕ್ಕೂ ಯಾವುದೇ ಸಂಬಂಧವಿಲ್ಲ. ಆದಾಗ್ಯೂ ವಿಪಕ್ಷಗಳು ಮಾತ್ರ ಈ ಕುರಿತು ಬೊಟ್ಟು ಮಾಡುತ್ತಿವೆ.