ಹಿಂದೂಗಳ ಪವಿತ್ರಕ್ಷೇತ್ರವಾದ ಉತ್ತರಾಖಂಡದ ಬದ್ರಿನಾಥ ಬಳಿ ಹಿಮಕುಸಿತದಿಂದ 8 ಕಾರ್ಮಿಕರು ಸಾವನ್ನಪ್ಪಿರುವ ಹಿನ್ನೆಲೆ ಬದ್ರಿನಾಥ ಪಟ್ಟಣ, ದೇಗುಲದ ಸುತ್ತಮುತ್ತ ಶಂಖನಾದವನ್ನು ನಿಷೇಧಿಸಲಾಗಿದೆ. ಇದಕ್ಕೆ ಕಾರಣ ಏನಪ್ಪಾ ಅಂದ್ರೆ ಅಖಂಡ ಶಂಖನಾದದ ಕಂಪನದಿಂದ ಹಿಮಕುಸಿತವಾಗಬಹುದೆಂಬ ಆತಂಕ. ಇದಕ್ಕೆ ಪುಷ್ಠಿ ನೀಡುವಂತೆ ಬದ್ರಿನಾಥ ದೇಗುಲದ ಮುಖ್ಯ ಅರ್ಚಕರಾಗಿರುವ ಚಂಡಿ ಪ್ರಸಾದ್ ಭಟ್ಟರು ಕೂಡಾ ಶಂಖನಾದ ಮಾಡಬೇಡಿ ಎಂದು ಭಕ್ತರಲ್ಲಿ ಮನವಿ ಮಾಡಿದ್ದಾರೆ.
ಧಾರ್ಮಿಕ ಹಾಗೂ ವೈಜ್ಞಾನಿಕ ಹಿನ್ನೆಲೆಯನ್ನಿಟ್ಟುಕೊಂಡು ಬದ್ರಿನಾಥ ದೇವಾಲಯದಲ್ಲಿ ಶಂಖನಾದವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಅರ್ಚಕರು ಹೇಳಿದ್ದಾರೆ. ಶಂಖನಾದದಿಂದ ಹೊಮ್ಮುವ ಕಂಪನ ಹಿಮಪಾತದಂತಹ ಘಟನೆಗಳಿಗೆ ಮೂಲವಾಗುತ್ತದೆಯಂತೆ. ಶಂಖನಾದವು ಸುತ್ತಮುತ್ತಲಿನ ಸ್ಥಳಗಳ ಮೇಲೆ ಪ್ರಭಾವ ಬೀರುವುದರಿಂದ ಹಿಮಪಾತವಾಗುತ್ತದೆ ಎಂದಿದ್ದಾರೆ.
ಹಿರಿಯ ವಿಜ್ಞಾನಿಗಳು ಹೇಳುವಂತೆ ಬದರಿನಾಥ ಪ್ರದೇಶವು ಪರಿಸರ ಸೂಕ್ಷ್ಮ ವಲಯವಾಗಿದ್ದು, ಇಲ್ಲಿ ಮಾನವನ ಸಂಚಾರ ದಿನೇ ದಿನೇ ಹೆಚ್ಚಾಗಿದೆ. ಕಂಪನದ ಆತಂಕದಿಂದಾಗಿ ಶಂಖನಾದಕ್ಕೆ ನಿಷೇಧ ಹೇರಲಾಗಿದೆ. ಆದರೆ ಹೆಚ್ಚುತ್ತಿರುವ ಕಟ್ಟಡ ನಿರ್ಮಾಣ ಕಾಮಗಾರಿಯೂ ಕಂಪನ ಸೃಷ್ಟಿಸಿ ಹಿಮಪಾತಕ್ಕೆ ಕಾರಣವಾಗುತ್ತಿವೆ ಎಂದಿದ್ದಾರೆ.
ದೇವ ದಾನವರು ಸೇರಿ ಅಮೃತಕ್ಕಾಗಿ ಸಮುದ್ರ ಮಂಥನ ಮಾಡುವಾಗ ಶಂಖ ಹುಟ್ಟಿ ಬಂದಿದೆ. ಹೀಗಾಗಿ ಶಿವ ಹಾಗೂ ವಿಷ್ಣುವಿಗೆ ಶಂಖನಾದ ಎಂದರೆ ಅತ್ಯಂತ ಪ್ರಿಯ. ಸಾಮಾನ್ಯವಾಗಿ ಕೇದಾರ, ಬದ್ರಿನಾಥಕ್ಕೆ ತೆರಳೋ ಯಾತ್ರಿಕರು ಶಂಖನಾದ ಮಾಡಿಕೊಂಡೇ ಮಂದಿರಕ್ಕೆ ತೆರಳುತ್ತಾರೆ. ಆದರೆ ಈ ಅಖಂಡ ಶಂಖನಾದದ ತರಂಗಗಳಿಂದ ಹಿಮಪಾತದಂತಹ ಮಹಾ ದುರಂತಗಳು ನಡೆಯುತ್ತವೆ ಅನ್ನೋದು 92 ವರ್ಷದ ಅರ್ಚಕರಾದ ಚಂಡಿ ಪ್ರಸಾದ್ ಭಟ್ಟರ ಆತಂಕವಾಗಿದೆ. ಪದ್ಮವಿಭೂಷಣ, ಪದ್ಮಶ್ರೀ, ಗಾಂಧಿ ಶಾಂತಿ ಪ್ರಶಸ್ತಿ ಹಾಗೂ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಪಡೆದಿರೋ ಬ್ರದಿನಾಥ ದೇಗುಲದ ಮುಖ್ಯ ಅರ್ಚಕರು ಆದೇಶವನ್ನು ಈಗ ಬದ್ರಿನಾಥ ಮಂದಿರದಲ್ಲಿ ಪಾಲಿಸಲಾಗುತ್ತಿದ್ದು ಪೂಜೆಯ ವೇಳೆಯಲ್ಲೂ ಕೂಡಾ ಶಂಖನಾದ ಮಾಡುತ್ತಿಲ್ಲ ಎಂದು ವರದಿಯಾಗಿದೆ.
ಉತ್ತರಾಖಂಡದ ಬದ್ರಿನಾಥ ಕಣಿವೆಯಿಂದ ಮನಾದವರೆಗೂ ಇರುವ ಪ್ರದೇಶ ತುಂಬಾ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲಾಗಿದೆ. ಈ ಮೊದಲು ಇಲ್ಲಿ ಈಗೀನಷ್ಟು ಜನಸಂಚಾರ, ವಾಹನ ಸಂಚಾರಗಳು ಇರಲಿಲ್ಲ. ಮಂದಿರದಲ್ಲಿ ಶಂಖನಾದವನ್ನು ನಿಷೇಧ ಮಾಡಿದ್ದರ ಹಿಂದೆ ಶಂಖನಾದದಿಂದ ಹೊರಹೊಮ್ಮುವ ಶಬ್ದ ಹಿಮಪರ್ವತಗಳಲ್ಲಿ ಕಂಪನ ಸೃಷ್ಟಿಸುತ್ತದೆ ಅನ್ನೋದನ್ನು ಈಗ ವಿಜ್ಞಾನಿಗಳೂ ಕೂಡ ಒಪ್ಪಿದ್ದಾರೆ. ಅದರ ಜೊತೆಗೆ ಪ್ರವಾಸೋದ್ಯಮ ಹೆಸರಲ್ಲಿ ಸುತ್ತಮುತ್ತಲಿನ ಕಾಡು, ಬೆಟ್ಟಗಳಿಗೂ ಕೊಡಲಿ ಪೆಟ್ಟು ಬಿದ್ದಿದೆ. ಹೆಚ್ಚು ಕಟ್ಟಡ ಕಾಮಗಾರಿಗಳೂ ಹೆಚ್ಚಾಗಿ ನಡೆಯುತ್ತಿದೆ. ಇವೆಲ್ಲವೂ ಒಟ್ಟಾಗಿ ಸೇರಿ ಹಿಮಪಾತದಂತ ಭೀಕರ ಘಟನೆಗಳು ಸಂಭವಿಸುವ ಅಪಾಯವನ್ನು ತಂದಿಟ್ಟಿವೆ ಎನ್ನಲಾಗಿದೆ.