ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯ ಗುರು ಘಾಸಿದಾಸ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಶಿಬಿರದ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ನಮಾಜ್ ಮಾಡಲು ಒತ್ತಾಯಿಸಿದ ಆರೋಪದ ಮೇಲೆ ಏಳು ಶಿಕ್ಷಕರು ಮತ್ತು ಒಬ್ಬ ವಿದ್ಯಾರ್ಥಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಮಾರ್ಚ್ 31, 2025ರಂದು ಸುಮಾರು 159 ವಿದ್ಯಾರ್ಥಿಗಳನ್ನು ನಮಾಜ್ ಮಾಡುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ 159 ವಿದ್ಯಾರ್ಥಿಗಳ ಪೈಕಿ ಕೇವಲ ನಾಲ್ವರು ಮಾತ್ರ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಿಬಿರದಿಂದ ವಾಪಸಾದ ಬಳಿಕ, ವಿದ್ಯಾರ್ಥಿಗಳು ಈ ಘಟನೆಯ ವಿರುದ್ಧ ಪ್ರತಿಭಟನೆ ನಡೆಸಿದರು. ಬಲಪಂಥೀಯ ಸಂಘಟನೆಗಳು ಒತ್ತಾಯಿಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದವು. ಈ ಹಿನ್ನೆಲೆಯಲ್ಲಿ ಬಿಲಾಸ್‌ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಜನೇಶ್ ಸಿಂಗ್ ತನಿಖೆಗೆ ಆದೇಶಿಸಿದರು. ಕೊಟ್ವಾಲಿ (ನಗರ) ಎಸ್ಪಿ ಅಕ್ಷಯ್ ಸಬದ್ರ ನೇತೃತ್ವದಲ್ಲಿ ನಾಲ್ವರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಲಾಯಿತು.
ಎಫ್‌ಐಆರ್ ದಾಖಲು
ತನಿಖಾ ಸಮಿತಿಯ ವರದಿಯ ಆಧಾರದ ಮೇಲೆ, ಶಿಕ್ಷಕರಾದ ದಿಲೀಪ್ ಝಾ, ಮಧುಲಿಕಾ ಸಿಂಗ್, ಜ್ಯೋತಿ ವರ್ಮಾ, ನೀರಜ್ ಕುಮಾರಿ, ಪ್ರಶಾಂತ್ ವೈಷ್ಣವ್, ಸೂರ್ಯಭನ್ ಸಿಂಗ್, ಬಸಂತ್ ಕುಮಾರ್ ಮತ್ತು ವಿದ್ಯಾರ್ಥಿ ನಾಯಕ ಆಯುಷ್ಮಾನ್ ಚೌಧರಿ ವಿರುದ್ಧ ಶನಿವಾರ ಎಫ್‌ಐಆರ್ ದಾಖಲಿಸಲಾಗಿದೆ. ಈ ಪ್ರಕರಣವನ್ನು ಕೋಣಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಪ್ರಕರಣದ ವರದಿಯನ್ನು ಕೋಟ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಘಟನೆಯು ಧಾರ್ಮಿಕ ಸಂವೇದನೆಗಳಿಗೆ ಸಂಬಂಧಿಸಿದ ವಿವಾದವನ್ನು ಉಂಟುಮಾಡಿದೆ. ಎನ್‌ಎಸ್‌ಎಸ್ ಶಿಬಿರದಂತಹ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಧಾರ್ಮಿಕ ಚಟುವಟಿಕೆಗೆ ಒತ್ತಾಯಿಸಿರುವುದು ಗಂಭೀರ ಆರೋಪವಾಗಿದೆ. ವಿದ್ಯಾರ್ಥಿಗಳು ಮತ್ತು ಬಲಪಂಥೀಯ ಸಂಘಟನೆಗಳ ಪ್ರತಿಭಟನೆಯಿಂದ ಈ ವಿಷಯವು ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.