ಬೆಂಗಳೂರು (ಏಪ್ರಿಲ್ 28): ದೇಶದ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ನೆರವೇರಿದ್ದು, ಸಿಬಿಎಸ್‌ಇ (CBSE) ಪಠ್ಯದಲ್ಲಿ ಮೊಘಲರು ಹಾಗೂ ದೆಹಲಿ ಸುಲ್ತಾನರ ಕುರಿತ ಅಧ್ಯಾಯಗಳನ್ನು ತೆಗೆದುಹಾಕಲಾಗಿದೆ. ಪರ್ಯಾಯವಾಗಿ, ಭಾರತೀಯ ಸಂಸ್ಕೃತಿಯ ಪ್ರಾಚೀನ ಆಚರಣೆ ಮಹಾಕುಂಭ ಮೇಳ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಮೇಕ್ ಇನ್ ಇಂಡಿಯಾ ಮತ್ತು ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ರೂಪಿಸಲಾದ ಬೇಟಿ ಬಚಾವೋ-ಬೇಟಿ ಪಢಾವೋ ಆಂದೋಲನದ ವಿಷಯಗಳನ್ನು ಪಠ್ಯದಲ್ಲಿ ಸೇರಿಸಲಾಗಿದೆ.
ಇದುವರೆಗೆ ಭಾರತದ ಇತಿಹಾಸವನ್ನು ಮೊಘಲರು ಹಾಗೂ ದೆಹಲಿ ಸುಲ್ತಾನರ ಆಡಳಿತ ಕೇಂದ್ರೀಕೃತವಾಗಿ ಬೋಧಿಸಲಾಗುತ್ತಿತ್ತು. ಆದರೆ ನೂತನ ಬದಲಾವಣೆಯ ಮೂಲಕ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ತಾಜಾ ಸಾಮಾಜಿಕ ಹಾಗೂ ಆರ್ಥಿಕ ಚಟುವಟಿಕೆಗಳ ಪರಿಚಯವನ್ನು ನೀಡುವ ಪ್ರಯತ್ನ ಕೈಗೊಳ್ಳಲಾಗಿದೆ.
ನೂತನ ರಾಷ್ಟ್ರೀಯ ಶಿಕ್ಷಣ ನೀತಿ (NEP 2020)ನ ಅಡಿಯಲ್ಲಿ ಈ ಬದಲಾವಣೆಗಳನ್ನೂ ಮಾಡಿದಂತೆ NCERT (National Council of Educational Research and Training) ತಿಳಿಸಿದೆ. ಭಾರತೀಯ ಸಂಸ್ಕೃತಿ, ಜ್ಞಾನ ವ್ಯವಸ್ಥೆ ಮತ್ತು ಸ್ಥಳೀಯ ಪರಿಕಲ್ಪನೆಗಳನ್ನು ಶಾಲಾ ಶಿಕ್ಷಣದ ಮೂಲ ಭಾಗವಾಗಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಇದರಿಂದಾಗಿ 7ನೇ ತರಗತಿಯ ಪಠ್ಯಪುಸ್ತಕಗಳಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಇದುವರೆಗೆ ಇದ್ದ ಮೊಘಲರ ಅಧ್ಯಾಯಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದ್ದು, ಅದರ ಬದಲಿಗೆ ಮಹಾಕುಂಭ ಮೇಳದ ವೈಶಿಷ್ಟ್ಯತೆ ಮತ್ತು ಅದರ ಆಧ್ಯಾತ್ಮಿಕ ಮಹತ್ವವನ್ನು ದಾಖಲಿಸಲಾಗಿದೆ. ಮಹಾಕುಂಭ ಮೇಳವು ಭಾರತದ ಪವಿತ್ರ ಆಚರಣೆಗಳಲ್ಲಿ ಪ್ರಮುಖವಾದದ್ದು. ಸಾವಿರಾರು ವರ್ಷಗಳ ಹಿಂದಿನಿಂದಲೂ ನಡೆಯುತ್ತಿರುವ ಈ ಮೇಳದಲ್ಲಿ ಕೋಟಿ ಕೋಟಿ ಭಕ್ತರು ಹಾಜರಾಗಿ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವ ಮೂಲಕ ಪವಿತ್ರತೆಯನ್ನು ಅನುಭವಿಸುತ್ತಾರೆ.
ಇದಲ್ಲದೆ, ಮೇಕ್ ಇನ್ ಇಂಡಿಯಾ ಯೋಜನೆಯ ಬಗ್ಗೆ ಪಠ್ಯದಲ್ಲಿ ಮಾಹಿತಿ ನೀಡಲಾಗಿದ್ದು, ಭಾರತದ ಉತ್ಪಾದನಾ ಕ್ಷೇತ್ರದಲ್ಲಿ ಸ್ವಾವಲಂಬಿತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಆಧುನಿಕ ಭಾರತದ ಆರ್ಥಿಕ ಪ್ರಗತಿ ಹಾಗೂ ಉದ್ಯಮಶೀಲತೆಯ ಪ್ರೇರಣೆಯನ್ನು ನೀಡಲಾಗುತ್ತಿದೆ.
ಅದೇ ರೀತಿ, ಬೇಟಿ ಬಚಾವೋ-ಬೇಟಿ ಪಢಾವೋ ಆಂದೋಲನದ ವಿವರಣೆ ಕೂಡ ಪಠ್ಯದಲ್ಲಿ ಸೇರಿಸಲಾಗಿದೆ. ಹೆಣ್ಣು ಮಕ್ಕಳ ರಕ್ಷಣೆ, ಶಿಕ್ಷಣ ಮತ್ತು ಸಬಲೀಕರಣಕ್ಕೆ ಈ ಯೋಜನೆಯು ಪ್ರಮುಖ ಪಾತ್ರ ವಹಿಸಿತೆಂದು ಈ ಪಾಠದಲ್ಲಿ ತಿಳಿಸಲಾಗುತ್ತದೆ. ಬೇಟಿ ಬಚಾವೋ-ಬೇಟಿ ಪಢಾವೋ ಅಭಿಯಾನವು 2015ರಲ್ಲಿ ಆರಂಭಗೊಂಡಿದ್ದು, ಮಹಿಳಾ ಶಕ್ತೀಕರಣದ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.