ಜಮ್ಮು ಮತ್ತು ಕಾಶ್ಮೀರ: ಭಯೋತ್ಪಾದಕರ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಿರುವ ಭಾರತೀಯ ಸೇನೆ, ಇದೀಗ ಉಗ್ರರ ಮನೆಗಳನ್ನು ಧ್ವಂಸ ಮಾಡಿದೆ. ನಿನ್ನೆ ಮೂವರು ಉಗ್ರರ ಮನೆಗಳನ್ನು ಸ್ಫೋಟಿಸಿದ ಸೇನೆ, ಇಂದು ಲಷ್ಕರ್-ಇ-ತೊಯ್ಬಾ ಸಂಘಟನೆಯ ಉಗ್ರ ಫಾರೂಕ್ ಅಹ್ಮದ್ ತೀದ್ವಾ ಮನೆಯನ್ನು ಸ್ಫೋಟಿಸಿದೆ.
ಫಾರೂಕ್ ಅಹ್ಮದ್ ತೀದ್ವಾ ಈಗ ಪಾಕಿಸ್ತಾನದಲ್ಲಿದ್ದು, ಅಲ್ಲಿ ಪಾಕಿಸ್ತಾನ ಸೇನೆಯ ಸಹಕಾರದೊಂದಿಗೆ ಕಾಶ್ಮೀರದಲ್ಲಿ ನಾಗರಿಕರ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸುತ್ತಿದ್ದಾನೆ. ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ನರಿಕೂತ್ ಕಲಾರೂಸ್ ಪ್ರದೇಶದಲ್ಲಿರುವ ಅವನ ಮನೆಗೆ ಭಾರತೀಯ ಸೇನೆ ಮಿಂಚಿನ ದಾಳಿ ನಡೆಸಿ ಸ್ಫೋಟಿಸಿದೆ.
#BREAKING: India has just blasted the house of Lashkar e Tayyiba terrorist Farooq Ahmed Teedwa r/o Narikoot Kalaroos, Kupwara of North Kashmir. Farooq is currently in Pakistan and involved in working with Pakistan Army to kill innocent civilians in Kashmir. pic.twitter.com/pAgpSYC1l0
— Aditya Raj Kaul (@AdityaRajKaul) April 26, 2025
ಇದಕ್ಕೂ ಮುನ್ನ ಏಪ್ರಿಲ್ 22, ರಂದು ಪಹಲ್ಗಾಮ್ ದಾಳಿ ನಡೆಸಿದ ಉಗ್ರ ಆಸೀಫ್ ಶೇಖ್‌ನ ಮನೆಯನ್ನೂ ಟ್ರಾಲ್‌ನಲ್ಲಿ ಸ್ಫೋಟಿಸಲಾಗಿದೆ. ಈ ಕಾರ್ಯಾಚರಣೆಯನ್ನು ಭದ್ರತಾ ಪಡೆಗಳು ಬಹಳ ಬಿಗಿ ಭದ್ರತೆಯಲ್ಲಿ ನೆರವೇರಿಸಿದವು. ಭಯೋತ್ಪಾದಕರಿಗೆ ನೆರವು ನೀಡುವ, ಯಾವುದೇ ವ್ಯಕ್ತಿಗೂ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಜಾಗತಿಕ ಮಟ್ಟದಲ್ಲಿ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದಾಳಿಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದು, “ನಾನು ಭಾರತ ಮತ್ತು ಪಾಕಿಸ್ತಾನ ಎರಡಕ್ಕೂ ಹತ್ತಿರವಾಗಿದ್ದೇನೆ. ಕಾಶ್ಮೀರದಲ್ಲಿ ಸಾವಿರಾರು ವರ್ಷಗಳಿಂದ ಉದ್ವಿಗ್ನತೆ ಮುಂದುವರಿದಿದೆ,” ಎಂದು ಹೇಳಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯೂ (UNSC) ಪಹಲ್ಗಾಮ್ ದಾಳಿಯನ್ನು ತೀವ್ರವಾಗಿ ಖಂಡಿಸಿದೆ. 15 ರಾಷ್ಟ್ರಗಳ ಸದಸ್ಯತ್ವ ಹೊಂದಿರುವ ಈ ಮಂಡಳಿ, ಏಪ್ರಿಲ್ 22 ರಂದು ನಡೆದ ದಾಳಿಯಲ್ಲಿ ಕನಿಷ್ಠ 26 ಜನರು ಬಲಿಯಾದ ಘಟನೆಗೆ ಆಘಾತ ವ್ಯಕ್ತಪಡಿಸಿದೆ. ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ, ಅಂತಾರಾಷ್ಟ್ರೀಯ ಸಮುದಾಯವು ಭಯೋತ್ಪಾದನೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವುದನ್ನು ಸ್ಪಷ್ಟಪಡಿಸಲಾಗಿದೆ.