ಮುಂಬೈ (ಏ.2): ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದ 45 ದಿನಗಳ ಮಹಾಕುಂಭಮೇಳದ ವೇಳೆ ಒಟ್ಟು 2.8 ಲಕ್ಷ ಕೋಟಿ ರೂಪಾಯಿ ಮೌಲ್ಯದ ಆರ್ಥಿಕ ಚಟುವಟಿಕೆಗಳು ನಡೆದಿವೆ ಎಂದು ಡನ್ ಮತ್ತು ಬ್ರಾಡ್ಸ್ಟ್ರೀಟ್ ವರದಿ ತಿಳಿಸಿದೆ. ಲಕ್ಷಾಂತರ ಯಾತ್ರಿಕರು ಈ ಪುಣ್ಯಮೇಳದಲ್ಲಿ ಭಾಗವಹಿಸಿದ್ದರಿಂದ ಹಲವು ವಲಯಗಳಲ್ಲಿ ವ್ಯಾಪಾರ ವೃದ್ಧಿಯಾಗಿದ್ದು, ಸಾರಿಗೆ, ವಸತಿ, ಆಹಾರ ಸೇವೆಗಳು ಮತ್ತು ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳು ಲಾಭ ಪಡೆದಿವೆ.
ಸಾರಿಗೆ ಮತ್ತು ಪ್ರವಾಸೋದ್ಯಮದ ಪ್ರಮುಖ ಕೊಡುಗೆ
ಕುಂಭಮೇಳದ ಅವಧಿಯಲ್ಲಿ ರಸ್ತೆ ಸಾರಿಗೆ ಕ್ಷೇತ್ರದಲ್ಲಿ 37,000 ಕೋಟಿ ರೂ. ಹಾಗೂ ರೈಲ್ವೆ ವಲಯದಲ್ಲಿ 17,700 ಕೋಟಿ ರೂ.ಗಳ ವಹಿವಾಟು ದಾಖಲಾಗಿದ್ದು, ಇದು ಈ ಮಹಾಕುಂಭಮೇಳದ ಆರ್ಥಿಕ ಮಹತ್ವವನ್ನು ಸ್ಪಷ್ಟಪಡಿಸುತ್ತದೆ.
ಯಾತ್ರಿಕರು ಮನರಂಜನೆಗಾಗಿ 10,000 ಕೋಟಿ ರೂ. ಖರ್ಚು ಮಾಡಿದ್ದು, ಇದರಲ್ಲಿ ಹೆಲಿಕಾಪ್ಟರ್ ಜಾಯ್ರೈಡ್ಗಳು, ಹಾಟ್ ಬಲೂನ್ ಸವಾರಿಗಳು, ಎಟಿವಿ ಸವಾರಿಗಳು, ಸಾಹಸ ಕ್ರೀಡೆಗಳು, ಯೋಗ ಶಿಬಿರಗಳು, ನಗರ ಪ್ರವಾಸಗಳು ಸೇರಿವೆ. ಈ ಎಲ್ಲ ಚಟುವಟಿಕೆಗಳು ಸ್ಥಳೀಯ ಆರ್ಥಿಕತೆಗೆ ದೊಡ್ಡ ಮಟ್ಟದ ಉತ್ತೇಜನ ನೀಡಿವೆ.
ಆಹಾರ ಸೇವೆಗಳು ಮತ್ತು ಚಿಲ್ಲರೆ ವ್ಯಾಪಾರ
ಕುಂಭಮೇಳದ ಅವಧಿಯಲ್ಲಿ ಚಿಲ್ಲರೆ ವ್ಯಾಪಾರಿಗಳ ವ್ಯವಹಾರ 7,000 ಕೋಟಿ ರೂ. ದಾಟಿದರೆ, ಆಹಾರ ಸೇವೆಗಳು 6,500 ಕೋಟಿ ರೂ.ಗಳ ವಹಿವಾಟು ನಡೆಸಿವೆ. ಚಹಾ ಅಂಗಡಿಗಳು ದಿನಕ್ಕೆ ಸರಾಸರಿ 30,000 ರೂ.ಗಳ ಆದಾಯವನ್ನು ಗಳಿಸಿದ್ದರೆ, ಪೂರಿ ಅಂಗಡಿಗಳು ಪ್ರತಿ ದಿನ 1,500 ರೂ.ಗಳ ಮಟ್ಟದಲ್ಲಿ ಲಾಭ ಗಳಿಸಿದವು.
ಬಂಡವಾಳ ಹೂಡಿಕೆ ಮತ್ತು ಬಳಕೆ ವೆಚ್ಚ
ವರದಿಯ ಪ್ರಕಾರ, ಕುಂಭಮೇಳದ ಒಟ್ಟಾರೆ ಆರ್ಥಿಕ ಚಟುವಟಿಕೆಗಳಲ್ಲಿ 2.3 ಲಕ್ಷ ಕೋಟಿ ರೂ.ಗಳನ್ನು ಬಳಕೆ ವೆಚ್ಚದಂತೆ ವರ್ಗೀಕರಿಸಲಾಗಿದ್ದು, ಉಳಿದ 50,000 ಕೋಟಿ ರೂ.ಗಳನ್ನು ಮೂಲಸೌಕರ್ಯ ನಿರ್ಮಾಣಕ್ಕೆ ಬಂಡವಾಳ ವೆಚ್ಚವಾಗಿ ಹೂಡಲಾಗಿದೆ.
ಬಳಕೆ ವೆಚ್ಚದಲ್ಲಿ ಸಾರಿಗೆಯೇ ಮುಖ್ಯ ಪಾಲುದಾರನಾಗಿದ್ದು, ಇದರ ಒಟ್ಟು ಮೊತ್ತವು 37,000 ಕೋಟಿ ರೂ. ಆಗಿದೆ. ಈ ಪೈಕಿ ರೈಲ್ವೆಯ ಕೊಡುಗೆ 17,700 ಕೋಟಿ ರೂ. ಎಂದು ವರದಿ ತಿಳಿಸುತ್ತದೆ. ಈ ಸಂಖ್ಯೆಗಳಿಂದ ಪ್ರಯಾಣ ಮತ್ತು ತಲುಪುವಿಕೆ ವಲಯದಲ್ಲಿ ಕುಂಭಮೇಳವು ಹೇಗೆ ಭಾರಿ ಆರ್ಥಿಕ ಉತ್ತೇಜನವನ್ನು ಒದಗಿಸುತ್ತದೆ.
ಮಾರ್ಕೆಟಿಂಗ್ ಮತ್ತು ವಾಣಿಜ್ಯ
ಪ್ರಯಾಗ್ರಾಜ್ನಲ್ಲಿ ನಡೆದ ಈ ಕುಂಭಮೇಳವು ಸ್ಥಳೀಯ ವ್ಯಾಪಾರಿಗಳಿಗೆ, ಹೋಟೆಲ್ ಉದ್ಯಮಕ್ಕೆ ಮತ್ತು ಪೂರೈಕೆ ಸರಪಳಿಗೆ ಹೆಚ್ಚಿನ ಆದಾಯವನ್ನು ತರಲು ಕಾರಣವಾಯಿತು. ಹೋಟೆಲ್ ಬುಕಿಂಗ್ಗಳು ಹೆಚ್ಚಾದಂತೆ, ಹೋಟೆಲ್ಗಳ ಲಿನಿನ್ ಮತ್ತು ಬಟ್ಟೆ ಪೂರೈಕೆದಾರರಿಗೆ ಹೆಚ್ಚಿನ ಬೇಡಿಕೆ ಏರ್ಪಟ್ಟಿತು. ಇದರ ಪರಿಣಾಮವಾಗಿ ಪೂರೈಕೆ ಸರಪಳಿಯಲ್ಲಿ ಪರೋಕ್ಷವಾಗಿ 80,000 ಕೋಟಿ ರೂಪಾಯಿಗಳ ಆರ್ಥಿಕ ಚಟುವಟಿಕೆ ನಡೆಯಿತು.
ಈ ವರದಿಯ ಪ್ರಕಾರ, 2025ರ ಕುಂಭಮೇಳವೂ ಅದೇ ಮಟ್ಟದ ಅಥವಾ ಅದಕ್ಕಿಂತಲೂ ಹೆಚ್ಚು ಆರ್ಥಿಕ ಉತ್ಪಾದನೆಯನ್ನು ಉಂಟುಮಾಡುವ ನಿರೀಕ್ಷೆಯಿದೆ.