ಆಸ್ಪತ್ರೆಗಳು ಎಂದರೆ ಪವಿತ್ರ ಸ್ಥಾನ. ವೈದ್ಯರು ಎಂದರೆ ದೇವರು ಅನ್ನೋದು ನಂಬಿಕೆ. ಆದರೆ, ಅಂತಾದ್ದೊಂದು ಆಸ್ಪತ್ರೆಯೇ ಮಾಟ, ಮಂತ್ರ, ವಾಮಾಚಾರಗಳ ತಾಣವಾಗುತ್ತಿದೆ.. ಎಂದರೆ.. ಅಂತಾದ್ದೊಂದು ಆರೋಪ ಕೇಳಿ ಬಂದಿರೋದು ಮುಂಬೈನ ಲೀಲಾವತಿ ಆಸ್ಪತ್ರೆಯ ವಿರುದ್ಧ. ಲೀಲಾವತಿ ಆಸ್ಪತ್ರೆ ಹೆಸರು ಇಡೀ ದೇಶದ ಜನರಿಗೆ ಗೊತ್ತಿರೋ ಹೆಸರು.
ಏಕೆಂದರೆ ಈ ಆಸ್ಪತ್ರೆ ಬಾಲಿವುಡ್ ಸೆಲಬ್ರಿಟಿಗಳು ಟ್ರೀಟ್‌ಮೆಂಟ್ ತಗೊಳ್ತಾರೆ. ಅಮಿತಾಭ್ ಬಚ್ಚನ್, ದಿಲೀಪ್ ಕುಮಾರ್, ಲತಾ ಮಂಗೇಶ್ಕರ್, ಹೃತಿಕ್ ರೋಷನ್, ಕರೀನಾ ಕಪೂರ್ ಖಾನ್, ರಣಬೀರ್ ಕಪೂರ್, ಅಲಿಯಾ ಭಟ್, ಸಂಜಯ್ ದತ್, ಬಾಳ್ ಠಾಕ್ರೆ, ಸಲ್ಮಾನ್, ಶಾರೂಕ್… ಮೊದಲಾದವರೆಲ್ಲ ಚಿಕಿತ್ಸೆ ಪಡೆಯುತ್ತಾ ಇದ್ದದ್ದು ಇಲ್ಲೇ. ಇತ್ತೀಚೆಗೆ ನಟ ಸೈಫ್ ಅಲಿ ಖಾನ್ ಕೊಲೆಯತ್ನ ಕೇಸಿನಲ್ಲಿ ಇದೇ ಆಸ್ಪತ್ರೆ ದೇಶಾದ್ಯಂತ ಸುದ್ದಿಯಾಗಿತ್ತು. ಅಂತಹ ಆಸ್ಪತ್ರೆಯ ಮೇಲೀಗ ಬ್ಲಾಕ್ ಮ್ಯಾಜಿಕ್ ಆರೋಪ ಕೇಳಿ ಬಂದಿದೆ.
ನಟಿ ಕರೀನಾ ಕಪೂರ್, ಇಬ್ಬರು ಮಕ್ಕಳ ಹೆರಿಗೆಯಾಗಿದ್ದು ಇದೇ ಆಸ್ಪತ್ರೆಯಲ್ಲಿ. ಲತಾ ಮಂಗೇಶ್ಕರ್, ದಿಲೀಪ್ ಕುಮಾರ್ ಚಿಕಿತ್ಸೆ ನಡೆದಿದ್ದು ಇದೇ ಆಸ್ಪತ್ರೆಯಲ್ಲಿ. ಹೃತಿಕ್ ರೋಷನ್ ಸರ್ಜರಿಯಾಗಿದ್ದು ಕೂಡಾ ಇದೇ ಆಸ್ಪತ್ರೆಯಲ್ಲಿ. ಅಮಿತಾಭ್ ಬಚ್ಚನ್, ಆರೋಗ್ಯ ಹದಗೆಟ್ಟಾಗ ಅಡ್ಮಿಟ್ ಆಗುವುದು ಕೂಡಾ ಇದೇ ಆಸ್ಪತ್ರೆಗೆ. ಇವರಷ್ಟೇ ಅಲ್ಲ, ಮುಂಬೈನ ಕೋಟ್ಯಧಿಪತಿಗಳೆಲ್ಲ ಚಿಕಿತ್ಸೆಪಡೆಯುವುದು ಇದೇ ಆಸ್ಪತ್ರೆಯಲ್ಲಿ. ಇಂತಹ ಆಸ್ಪತ್ರೆಯಲ್ಲಿ ಬ್ಲಾಕ್ ಮ್ಯಾಜಿಕ್ ನಡೆಯುತ್ತಿತ್ತು ಎಂಬ ಆರೋಪ, ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.
ಮುಂಬೈನ ಈ ಲೀಲಾವತಿ ಆಸ್ಪತ್ರೆ ನಡೆಸುತ್ತಿರುವುದು ಒಂದು ಟ್ರಸ್ಟ್. ಲೀಲಾವತಿ ಕೀರ್ತಿಲಾಲ್ ಮೆಹ್ತಾ ಮೆಡಿಕಲ್ ಟ್ರಸ್ಟ್ ಹೆಸರಲ್ಲಿ ನಡೆಯುತ್ತಿದೆ. ವಜ್ರದ ವ್ಯಾಪಾರಿ ಕೀರ್ತಿಲಾಲ್ ಮೆಹ್ತಾ ಅವರು 1997ರಲ್ಲಿ ಸ್ಥಾಪಿಸಿದ್ದ ಈ ಆಸ್ಪತ್ರೆಯಲ್ಲಿ ಈ ಮೊದಲು ಇದ್ದ ಟ್ರಸ್ಟಿಗಳು ಬ್ಲಾಕ್ ಮ್ಯಾಜಿಕ್ ಮಾಡ್ತಿದ್ದರಂತೆ.
ಸದ್ಯ ಲೀಲಾವತಿ ಆಸ್ಪತ್ರೆಯಲ್ಲಿ ಹಾಲಿ ಟ್ರಸ್ಟಿಯಾಗಿರುವ ಪ್ರಶಾಂತ್ ಮೆಹ್ತಾ , ದುಬೈ ಮತ್ತು ಬೆಲ್ಜಿಯಂ ಮೂಲದ ಮಾಜಿ ಟ್ರಸ್ಟಿಗಳ ವಿರುದ್ಧ ಈ ಆರೋಪ ಮಾಡಿದ್ದಾರಷ್ಟೇ ಅಲ್ಲ, ಕೇಸ್ ಕೂಡಾ ದಾಖಲಿಸಿದ್ದಾರೆ. 17 ಮಂದಿಯ ವಿರುದ್ಧ 3 ಎಫ್‌ಐಆರ್ ರಿಜಿಸ್ಟರ್ ಆಗಿದೆ. ಲೀಲಾವತಿ ಆಸ್ಪತ್ರೆಯ ಆಫೀಸ್‌ನ 8 ಕಡೆ ಚಿತಾಭಸ್ಮ, ಮಾನವನ ತಲೆಬುರುಡೆ, ಕೂದಲು ಹಾಗೂ ಅಕ್ಕಿಯನ್ನು ತುಂಬಿದ್ದು ಪತ್ತೆಯಾಗಿವೆ.
ಆಸ್ಪತ್ರೆಯಲ್ಲಿ ಮಾಟ ಮಂತ್ರ ಮಾಡ್ತಿದ್ದಕ್ಕೆ ಕಾರಣ, ಸುಮಾರು 20 ವರ್ಷಗಳಿಂದ ಟ್ರಸ್ಟ್‌ಗೆ ಬಂದ ಸುಮಾರು 1250 ಕೋಟಿ ರೂಪಾಯಿಯ ದುರುಪಯೋಗ ಅನ್ನೋದು ಅವರ ಆರೋಪ. ಆಸ್ಪತ್ರೆಗೆ ಬಂದಾಗ ಒಂದು ನೆಗೆಟಿವ್ ವೈಬ್ರೇಷನ್ ಇರ್ತಿತ್ತು. ಗೊತ್ತಾಗ್ತಾ ಇರಲಿಲ್ಲ. ಆಗ ಆಸ್ಪತ್ರೆಯ ಕೆಲವರು ನನಗೆ ಮಾಹಿತಿ ಕೊಟ್ಟರು.
ಅವರು ಕೊಟ್ಟ ಮಾಹಿತಿಯಂತೆ ಆಸ್ಪತ್ರೆಯ ನೆಲವನ್ನು ಕೆಲವು ಕಡೆ ಅಗೆಸಿ ನೋಡಿದಾಗ ಇದಕ್ಕೆಲ್ಲವೂ ಸಾಕ್ಷಿ ಸಿಕ್ಕಿತು. 8 ಕಡೆ ಚಿತಾಭಸ್ಮ, ಮಾನವನ ತಲೆಬುರುಡೆ, ಕೂದಲು ಪತ್ತೆಯಾದವು. ಇದನ್ನೆಲ್ಲ ವಿಡಿಯೋ ಕೂಡಾ ಮಾಡಿದ್ದೇವೆ ಅನ್ನೋದು ಪ್ರಶಾಂತ್ ಮೆಹ್ತಾ ಅವರ ವಾದ. ಆಸ್ಪತ್ರೆಯಲ್ಲಿಯೇ ಬ್ಲಾಕ್ ಮ್ಯಾಜಿಕ್, ಮಾಟ, ಮಂತ್ರ, ವಾಮಾಚಾರ.. ಎಂದರೆ.. ಆಸ್ಪತ್ರೆಯನ್ನ ನಂಬೋದು ಹ್ಯಾಗೆ ಅನ್ನೋ ಪ್ರಶ್ನೆ ಮೂಡಿ ಬಂದಿರುವುದಂತೂ ಸತ್ಯ.