ನವದೆಹಲಿ, ಏಪ್ರಿಲ್ 24: ಜಮ್ಮು ಮತ್ತು ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ 48 ಗಂಟೆಗಳ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಕಠಿಣ ಪ್ರತಿಕ್ರಿಯೆ ನೀಡಿದ್ದಾರೆ. ಬಿಹಾರದ ಮಧುಬಾನಿಯಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಉಗ್ರರು ಹಾಗೂ ಅವರಿಗೆ ಬೆಂಬಲ ನೀಡುವವರ ವಿರುದ್ಧ ಭಾರತ ಉಗ್ರ ತೀರ್ಮಾನ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.
ಮೋದಿ ತಮ್ಮ ಭಾಷಣದಲ್ಲಿ ಹಿಂದಿಯ ಜೊತೆಗೆ ಇಂಗ್ಲಿಷ್ ಬಳಸಿ ಉಗ್ರರಿಗೆ ಬಲವಾದ ಸಂದೇಶವನ್ನೂ ನೀಡಿದ್ದಾರೆ. “Standing on the land of Bihar, I assure the country – India will punish every terrorist. They will face consequences beyond their imagination,” ಎಂಬ ಪದಗಳ ಮೂಲಕ ಸಂದೇಶ ರವಾನಿಸಿದ್ದಾರೆ.
ಪ್ರಧಾನಿ ಮೋದಿ ಪೆಹಲ್ಗಾಮ್ ದಾಳಿಯನ್ನು ಭಾರತದ ಏಕತೆ, ಸಾಮರಸ್ಯ, ಮತ್ತು ಧೈರ್ಯವನ್ನು ಹಿಮ್ಮೆಟ್ಟಿಸಲು ಮಾಡಿದ ಪ್ರಯತ್ನ ಎಂದು ಹೇಳಿದರು. “ಭಾರತ ಒಗ್ಗಟ್ಟಾಗಿರುವ ರಾಷ್ಟ್ರ. ಈ ದಾಳಿಯ ಮೂಲಕ ನಮ್ಮ ಆತ್ಮಸಾಕ್ಷಿಯನ್ನು ಮುರಿಯಲು ಸಾಧ್ಯವಿಲ್ಲ. ಉಗ್ರರಿಗೆ ತಕ್ಕ ಶಿಕ್ಷೆ ನೀಡಲಾಗುತ್ತದೆ,” ಎಂದು ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಪ್ರಧಾನಿ ಮೋದಿ ವೇದಿಕೆ ಯಾವುದು ಇರಲಿ, ಸಾಮಾನ್ಯವಾಗಿ ಹಿಂದಿಯಲ್ಲೇ ಭಾಷಣ ಮಾಡುವವರು. ಆದರೆ ಈ ಬಾರಿ ಭಿನ್ನವಾಗಿ, ತಮ್ಮ ಹಿಂದಿ ಭಾಷಣದ ನಡುವೆ ಇಂಗ್ಲಿಷ್ ಬಳಸಿ, ಉಗ್ರರಿಗೆ ಸಂದೇಶವನ್ನೇ ವಿಶ್ವದ ಮುಖಂಡರಿಗೆ ಕೇಳಿಸುವ ರೀತಿಯಲ್ಲಿ ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ ಆತಂಕ: ಮಿಲಿಟರಿ ತಾಲೀಮು ಆರಂಭ
ಪೆಹಲ್ಗಾಮ್ ದಾಳಿಗೆ ಪ್ರತಿಕ್ರಿಯೆಯ ಭಾಗವಾಗಿ ಭಾರತದಿಂದ ತೀವ್ರ ಕ್ರಮಗಳ ನಿರೀಕ್ಷೆಯಿದೆ. ವರದಿಗಳ ಪ್ರಕಾರ, ಪಾಕಿಸ್ತಾನ ಈಗಾಗಲೇ ಮಿಲಿಟರಿ ತಾಲೀಮು ಆರಂಭಿಸಿದ್ದು, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ 42ಕ್ಕೂ ಹೆಚ್ಚು ಉಗ್ರ ಶಿಬಿರಗಳನ್ನು ಭಾರತೀಯ ಸೇನೆ ಗುರುತಿಸಿದೆ. ಇವುಗಳ ಮೇಲೆ ದಾಳಿ ನಡೆಯುವ ಸಾಧ್ಯತೆ ಹತ್ತಿರದಲ್ಲಿದೆ ಎನ್ನಲಾಗಿದೆ. ಭಾರತದ ಭದ್ರತಾ ಸಂಸ್ಥೆಗಳು ಈಗ ಉಗ್ರರ ತರಬೇತಿ ಕೇಂದ್ರಗಳನ್ನು ನಿಗಾ ಇಟ್ಟುಕೊಂಡಿದ್ದು, ಶೀಘ್ರದಲ್ಲಿಯೇ ಕ್ರಮಕ್ಕೆ ಮುಂದಾಗುವ ನಿರೀಕ್ಷೆಯಿದೆ.
ಪೆಹಲ್ಗಾಮ್ ದಾಳಿಯ ಹಿನ್ನೆಲೆ
ಪೆಹಲ್ಗಾಮ್, ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದೂ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿಗೆ ಸಾಕ್ಷಿಯಾಗಿದೆ. ಭಯೋತ್ಪಾದಕರು ಹಿಂದೂ ಪ್ರಯಾಣಿಕರನ್ನು ಗುರುತಿಸಿ ದಾಳಿ ನಡೆಸಿದ ರೀತಿ ದೇಶವ್ಯಾಪಿ ಆಕ್ರೋಶ ಹುಟ್ಟಿಸಿದೆ. ಈ ಘಟನೆಯಿಂದಾಗಿ ಕೇಂದ್ರ ಸರ್ಕಾರ ಮತ್ತು ಭದ್ರತಾ ದಳಗಳು ಉಗ್ರವಿರೋಧಿ ಕಾರ್ಯಾಚರಣೆಗೆ ಮುಂದಾಗಿವೆ.