ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯಾನಕ ಭಯೋತ್ಪಾದಕ ದಾಳಿಯೊಂದು ನಡೆದಿದ್ದು, ಕಣಿವೆ ರಾಜ್ಯದ ಶಾಂತಿಯುತ ವಾತಾವರಣಕ್ಕೆ ಧಕ್ಕೆ ಉಂಟಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕಾಶ್ಮೀರದಲ್ಲಿ ನಡೆದ ಅತ್ಯಂತ ದೊಡ್ಡ ಉಗ್ರ ದಾಳಿಯಾಗಿರುವ ಈ ಘಟನೆಯು ಸಾಮಾನ್ಯ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
ಬೇಸಿಗೆ ರಜೆಯನ್ನು ಕಳೆಯಲು ಕಾಶ್ಮೀರಕ್ಕೆ ಆಗಮಿಸಿದ್ದ ಪ್ರವಾಸಿಗರನ್ನೇ ಗುರಿಯಾಗಿಸಿ ಈ ದಾಳಿಯನ್ನು ನಡೆಸಲಾಗಿದೆ. ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ಈ ದಾಳಿಯಲ್ಲಿ ಇಬ್ಬರು ವಿದೇಶಿಗರು ಸೇರಿದಂತೆ 27 ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದಾರೆ. ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ (LeT) ಉಗ್ರ ಸಂಘಟನೆಯ ಬೆಂಬಲದೊಂದಿಗೆ ಈ ಕೃತ್ಯವನ್ನು The Resistance Front (TRF) ಎಂಬ ಗುಂಪು ತನ್ನ ಹೊಣೆಯಾಗಿ ಒಪ್ಪಿಕೊಂಡಿದೆ.
ಮಧ್ಯಾಹ್ನ 3 ಗಂಟೆ ಸುಮಾರಿಗೆ ಬೈಸರನ್ ಕಣಿವೆಯಿಂದ ಇಳಿದುಬಂದ ಒಟ್ಟು ಎಂಟು ಉಗ್ರರು, ಪ್ರವಾಸಿಗರೊಂದಿಗೆ ಮಾತನಾಡುವ ನೆಪದಲ್ಲಿ ದಾಳಿಯನ್ನು ಆರಂಭಿಸಿದ್ದಾರೆ. ಈ ಗುಂಪಿನಲ್ಲಿ ಇಬ್ಬರು ಸ್ಥಳೀಯ ಉಗ್ರರು ಸೇರಿದ್ದರು. ಎಕೆ-47 ಗನ್‌ಗಳನ್ನು ಬಳಸಿ ದಾಳಿಯನ್ನು ನಡೆಸಿದ ಉಗ್ರರು, ವಿಶೇಷವಾಗಿ ಮುಸ್ಲಿಮೇತರರನ್ನು ಗುರಿಯಾಗಿಸಿದ್ದಾರೆ. “ನೀವು ಹಿಂದೂಗಳಾ?” ಎಂದು ಕೇಳಿ, ಗುರುತಿಸಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ಈ ದಾಳಿಯಲ್ಲಿ ಭಾಗಿಯಾಗಿದ್ದ ಒಬ್ಬ ಭಯೋತ್ಪಾದಕನ ಫೋಟೋ ಇದೀಗ ಬಿಡುಗಡೆಯಾಗಿದೆ. ಆತ ಗನ್ ಹಿಡಿದು ಭೀಕರ ಕೃತ್ಯವೆಸಗುತ್ತಿರುವ ದೃಶ್ಯವನ್ನು ಈ ಚಿತ್ರವು ತೋರಿಸುತ್ತದೆ.