ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣವಾದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ದಾಳಿ ನಡೆಸಿದಿದೆ. ಈ ದುರ್ಘಟನೆಯಲ್ಲಿ ಒಬ್ಬ ಪ್ರವಾಸಿಗ ಮೃತಪಟ್ಟು, 10 ಮಂದಿ ಪ್ರವಾಸಿಗರು ಹಾಗೂ ಇಬ್ಬರು ಸ್ಥಳೀಯರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಇಬ್ಬರು ಕರ್ನಾಟಕದವರು ಎಂಬ ಮಾಹಿತಿ ದೊರಕಿದೆ.
ಪ್ರವಾಸಿಗರ ಗುಂಪು ಪಹಲ್ಗಾಮ್ ಹತ್ತಿರದ ಅರಣ್ಯ ಪ್ರದೇಶದಲ್ಲಿ ಚಾರಣ ನಡೆಸುತ್ತಿದ್ದಾಗ ಅಪರಿಚಿತ ಬಂದೂಕುಧಾರಿಗಳು ಗುಂಡು ಹಾರಿಸಿದ್ದಾರೆ. ಈ ದಾಳಿಯಿಂದ ಪ್ರವಾಸಿಗರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಭದ್ರತಾ ಸಿಬ್ಬಂದಿ ನೀಡಿದ ಮಾಹಿತಿಯ ಪ್ರಕಾರ, ಗಾಯಗೊಂಡವರಲ್ಲಿ ಇಬ್ಬರು ಕರ್ನಾಟಕದವರು ಎಂದು ದೃಢಪಟ್ಟಿದೆ. ಇವರಲ್ಲಿ ಅಭಿಜಾವನ್ ರಾವ್ ಎಂಬವರು ಪ್ರಮುಖರಾಗಿದ್ದು, ಮತ್ತೊಬ್ಬರ ವಿವರಗಳನ್ನು ವೈದ್ಯಕೀಯ ವರದಿ ನಂತರ ಬಹಿರಂಗಪಡಿಸಲಾಗುತ್ತದೆ.
ಮಾಹಿತಿಗಳ ಪ್ರಕಾರ, ಈ ದಾಳಿಯನ್ನು ನಡೆಸಿದ ಮೂವರು ಭಯೋತ್ಪಾದಕರು ಪೊಲೀಸ್ ಸಮವಸ್ತ್ರ ಧರಿಸಿಕೊಂಡು ಬಂದಿದ್ದರು. ಇದರಿಂದ ಸ್ಥಳೀಯರು ಅವರನ್ನು ಭದ್ರತಾ ಸಿಬ್ಬಂದಿ ಎಂದು ಭಾವಿಸಿ ಯಾವುದೇ ಅನುಮಾನ ವ್ಯಕ್ತಪಡಿಸಲಿಲ್ಲ. ಈ ರೀತಿಯ ಯುಕ್ತಿಯಿಂದ ಭಯೋತ್ಪಾದಕರು ದಾಳಿಗೆ ಮುಂದಾಗಿರುವುದು ಭದ್ರತಾ ವ್ಯವಸ್ಥೆಯ ಮೇಲೆ ಗಂಭೀರ ಪ್ರಶ್ನೆ ಎಬ್ಬಿಸಿದೆ.
ದಾಳಿ ನಡೆದ ತಕ್ಷಣವೇ ಭದ್ರತಾ ಪಡೆಗಳು ಸುತ್ತಮುತ್ತಲ ಪ್ರದೇಶವನ್ನು ಮುತ್ತಿಗೆ ಹಾಕಿ ಭಯೋತ್ಪಾದಕರ ಶೋಧ ಕಾರ್ಯಾಚರಣೆ ಆರಂಭಿಸಿವೆ. ಹೆಚ್ಚಿನ ಭದ್ರತಾ ಸಿಬ್ಬಂದಿಗಳನ್ನು ನೆಲೆಯಲ್ಲಿ ನಿಯೋಜಿಸಲಾಗಿದೆ. ತ್ವರಿತ ಪ್ರತಿಕ್ರಿಯೆ ತಂಡ (QRT) ಕೂಡ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸುತ್ತಿದೆ.
ಈ ದಾಳಿಗೆ ದೇಶದ ವಿವಿಧ ಭಾಗಗಳಿಂದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ರವೀಂದ್ರ ರೈನಾ ಮಾತನಾಡುತ್ತಾ, “ಭಯೋತ್ಪಾದಕರು ಈ ಹೀನ ಕಾರ್ಯಕ್ಕೆ ತಕ್ಷಣವೇ ಬೆಲೆ ತೀರಿಸಬೇಕು. ದಕ್ಷಿಣ ಕಾಶ್ಮೀರವನ್ನು ಶುದ್ಧೀಕರಿಸಲು ನಾವು ಬದ್ಧರಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಈ ದುಷ್ಕೃತ್ಯದಲ್ಲಿ ಭಾಗಿಯಾದ ಭಯೋತ್ಪಾದಕರನ್ನು ಶೀಘ್ರದಲ್ಲಿ ಪತ್ತೆಹಚ್ಚಿ ಬಂಧಿಸಲಾಗುವುದು,” ಎಂದು ಹೇಳಿದರು.