ಪ್ರಧಾನಿ ನರೇಂದ್ರ ಮೋದಿ ಆಹಾರ ವಿಚಾರದಲ್ಲಿ ಬಹಳ ಕಟ್ಟುನಿಟ್ಟು. ಶುದ್ಧ ಸಸ್ಯಾಹಾರಿಯಾಗಿರುವ ಮೋದಿ ವಿಶೇಷ ಆಹಾರಗಳನ್ನು ಸೇವಿಸುತ್ತಾರೆ. ಈ ಹಿಂದೆ ನರೇಂದ್ರ ಮೋದಿ ಕಾಸ್ಟ್ಲಿ ಮ್ಯಾಜಿಕ್ ಮಶ್ರೂಮ್ ಸೇವಿಸುತ್ತಾರೆ ಎಂಬ ವಿಚಾರ ಬಹಳ ಸದ್ದು ಮಾಡಿತ್ತು. ಈಗ ಪ್ರಧಾನಿ ನರೇಂದ್ರ ಮೋದಿ ವರ್ಷದ 300 ದಿನ ತಾವರೆ ಬೀಜಗಳಿಂದ ಮಾಡಿದ ಖಾದ್ಯಗಳನ್ನು ಸವಿಯುತ್ತಾರೆ ಎಂಬ ವಿಚಾರ ಬಯಲಾಗಿದೆ. ಹೀಗಾಗಿ ತಾವರೆ ಬೀಜಗಳಿಂದ ತಯಾರಿಸಿದ ಖಾದ್ಯಗಳನ್ನು ಸೇವಿಸಿದರೆ ಆಗುವ ಉಪಯೋಗಗಳೇನು ಎಂಬುದನ್ನು ವಿವರಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 2025ರ ಮನ್ ಕಿ ಬಾತ್‌ನಲ್ಲಿ ಸಾಧ್ಯವಾದಷ್ಟು ಬೊಜ್ಜು ಸಂಗ್ರಹವಾಗಲು ಕಾರಣವಾಗೋ ಖಾದ್ಯ ತೈಲಗಳಿಂದ ದೂರವಿರಿ ಅಂತಾ ಕರೆ ಕೊಟ್ಟಿದ್ರು.
ಇದಾದ ಮರುದಿನವೇ 10 ಫೇಮಸ್ ವ್ಯಕ್ತಿಗಳನ್ನ ಎಕ್ಸ್‌ನಲ್ಲಿ ಟ್ಯಾಗ್ ಮಾಡಿ ಫ್ಯಾಟ್ ಇಂಡಿಯಾ ಚಾಲೆಂಜ್ ಆರಂಭಿಸಿದ್ರು. ಇದಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಹೀಗೆ ಆರೋಗ್ಯ ಮತ್ತು ಆಹಾರದ ವಿಚಾರಗಳು ಸದ್ದು ಮಾಡ್ತಿರೋ ನಡುವೆ ಮೋದಿ ವರ್ಷ 300 ದಿನ ಸೇವಿಸೋ ಅದೊಂದು ಆಹಾರ ಪದಾರ್ಥ ಭಾರಿ ಸದ್ದು ಮಾಡಲು ಶುರು ಮಾಡಿದೆ.
ಮಖಾನಾ ಅಥವಾ ಫಾಕ್ಸ್ ನಟ್ ಅಂದ್ರೆ ಎಲ್ಲರಿಗೂ ಅರ್ಥವಾಗಲ್ಲ. ಆದ್ರೆ, ತಾವರೆ ಬೀಜ ಅಂದ್ರೆ ತಕ್ಷಣ ಎಲ್ಲರಿಗೂ ಅರ್ಥವಾಗಬಹುದು. ಪ್ರಧಾನಿ ನರೇಂದ್ರ ಮೋದಿ ತಾವರೆ ಬೀಜಗಳಿಂದ ಮಾಡಿರೋ ಖಾದ್ಯಗಳನ್ನ ಹೆಚ್ಚಾಗಿ ಸೇವಿಸುತ್ತಾರೆ. ವರ್ಷದ 300 ದಿನ ತಾವರೆ ಬೀಜಗಳಿಂದ ಮಾಡಿರೋ ಖಾದ್ಯಗಳೇ ಮೋದಿ ಫೇವರಿಟ್. ಹಲವಾರು ಶತಮಾನಗಳಿಂದ ತಾವರೆ ಬೀಜಗಳಿಂದ ಮಾಡಿರೋ ಖಾದ್ಯಗಳು ಭಾರತದಲ್ಲಿ ಫೇಮಸ್ ಆಗಿವೆ. ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸೋ ಗುಣವಿರೋ ತಾವರೆ ಬೀಜಗಳು ನಾರಿನಾಂಶ, ಕಾರ್ಬೊಹೈಡ್ರೇಟ್‌ಗಳು, ಪ್ರೋಟಿನ್‌ಗಳು, ಪ್ರತ್ಯಾಮ್ಲಿಯಗಳು ಮತ್ತು ದೇಹಕ್ಕೆ ಅವಶ್ಯವಿರೋ ಖನಿಜಾಂಶಗಳನ್ನು ಹೆಚ್ಚಾಗಿ ಹೊಂದಿವೆ.
ತಾವರೆ ಬೀಜಗಳಿಂದ ಮಾಡಿರೋ ಖಾದ್ಯಗಳನ್ನ ಸೇವಿಸಿದ್ರೆ, ಭಾರತೀಯರು ಮಾರಕ ಕಾಯಿಲೆಗಳಿಂದ ದೂರವಿರಬಹುದು ಅಂತಾ ಆರೋಗ್ಯ ತಜ್ಞರು ಹೇಳ್ತಾರೆ. ಇವುಗಳಲ್ಲಿ ಕೊಬ್ಬಿನಾಂಶ ಇರಲ್ಲ, ಜೊತೆಗೆ ಕಡಿಮೆ ಪ್ರಮಾಣದ ಸೋಡಿಯಂ ಹೊಂದಿರುತ್ತದೆ. ಹೀಗಾಗಿ ಹೃದಯದ ಆರೋಗ್ಯಕ್ಕೆ ಹೆಚ್ಚು ಸೂಕ್ತವಾದ ಆಹಾರವಾಗಿದೆ. ಹೆಚ್ಚಿನ ಪ್ರಮಾಣದ ಪೊಟಾಷಿಯಂ ಮತ್ತು ಕಡಿಮೆ ಪ್ರಮಾಣದ ಸೋಡಿಯಂ ಹೊಂದಿರೋದ್ರಿಂದ ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ.
ಇದರಲ್ಲಿರುವ ಪ್ರತ್ಯಾಮ್ಲೀಯಗಳು ಹೃದಯದಲ್ಲಿರೋ ಜೀವಕೋಶಗಳಿಗೆ ಆಗೋ ಹಾನಿಯನ್ನು ಕಡಿಮೆ ಮಾಡಿ ಹೃದಯ ಸೂಕ್ತವಾಗಿ ಕಾರ್ಯ ನಿರ್ವಹಿಸಲು ನೆರವಾಗುತ್ತದೆ. ಹೆಚ್ಚಿನ ಪ್ರಮಾಣದ ನಾರಿನಾಂಶ ಮತ್ತು ಪ್ರೋಟಿನ್‌ಗಳನ್ನು ಒಳಗೊಂಡಿದ್ದು, ಕಡಿಮೆ ಕ್ಯಾಲೋರಿಗಳನ್ನು ದೇಹಕ್ಕೆ ಒದಗಿಸುತ್ತದೆ. ಹೀಗಾಗಿ ತೂಕ ಕಡಿಮೆ ಮಾಡಲು ಪ್ರಯತ್ನಿಸುತ್ತಿರುವವರು ಹೆಚ್ಚಿನ ಪ್ರಮಾಣದಲ್ಲಿ ತಾವರೆ ಬೀಜಗಳನ್ನು ಸೇವಿಸಿದರೆ ಒಳ್ಳೆಯದು ಅಂತಾ ಆರೋಗ್ಯ ತಜ್ಞರು ಹೇಳ್ತಾರೆ.
ಪ್ರತಿನಿತ್ಯ ಹುರಿದ ಕಾಳುಗಳ ಜೊತೆಗೆ 30 ರಿಂದ 50 ಗ್ರಾಂ ತಾವರೆ ಬೀಜಗಳನ್ನು ತಿಂದರೆ ಹೆಚ್ಚಿನ ಪ್ರಮಾಣದ ಪ್ರೋಟಿನ್ ಒದಗಿಸುತ್ತದೆ ಮತ್ತು ಅಮೈನೋ ಆಮ್ಲಗಳ ನಡುವಿನ ಸಮತೋಲನ ಕಾಪಾಡಿಕೊಳ್ಳಬಹುದು. ಒಂದು ಹಿಡಿಯಷ್ಟು ತಾವರೆ ಬೀಜಗಳ ಜೊತೆಗೆ ಇತರ ಹುರಿದ ಬೀಜಗಳು ಅಥವಾ ಕಾಳುಗಳು ಆರೋಗ್ಯಕ್ಕೆ ಒಳ್ಳೆಯದು. ಪ್ರೋಟಿನ್‌ಗಳನ್ನು ಹೆಚ್ಚಿಸಿಕೊಳ್ಳಲು ಬಯಸಿರುವವರು, ತಾವರೆ ಬೀಜಗಳನ್ನು ಹೆಚ್ಚಾಗಿ ಸೇವಿಸಬಹುದು.
ತಾವರೆ ಬೀಜಗಳು ಬಹುತೇಕ ಎಲ್ಲರ ದೇಹಕ್ಕೂ ಒಳ್ಳೆಯದ್ದೇ ಆದ್ರೂ, ಹೆಚ್ಚಿನ ಪ್ರಮಾಣದ ನಾರಿನಾಂಶ ಹೊಂದಿರೋದ್ರಿಂದ ಚಯಾಪಚಯ ಕ್ರಿಯೆಗಳಿಗೆ ತೊಂದರೆ ಉಂಟು ಮಾಡಬಹುದು. ಹೆಚ್ಚಿನ ಪ್ರಮಾಣದ ಪೊಟಾಷಿಯಂ ಹೊಂದಿರೋದ್ರಿಂದ, ದೇಹದಲ್ಲಿ ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಹೀಗಾಗಿ ಕಿಡ್ನಿ ಸಮಸ್ಯೆ ಇರೋರು ಹೆಚ್ಚಾಗಿ ತಾವರೆ ಬೀಜಗಳನ್ನು ಬಳಸುವುದು ಒಳ್ಳೆಯದಲ್ಲ. ದಿನದ ಯಾವುದೇ ಸಮಯದಲ್ಲಾದರೂ ತಾವರೆ ಬೀಜಗಳ ಖಾದ್ಯಗಳನ್ನು ಸವಿಯಬಹುದು.