ಬಿಹಾರದ ಮಧುಬನಿಯಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ. ಈ ದಾಳಿಯಲ್ಲಿ 28 ಕ್ಕೂ ಹೆಚ್ಚು ಮಂದಿ ನಾಗರಿಕರು ಪ್ರಾಣ ಕಳೆದುಕೊಂಡಿದ್ದು, ಇದಕ್ಕೆ ತಕ್ಕ ಶಿಕ್ಷೆಯನ್ನು ಖಂಡಿತವಾಗಿಯೂ ಭಯೋತ್ಪಾದಕರಿಗೆ ನೀಡುವುದಾಗಿ ಅವರು ಘೋಷಿಸಿದ್ದಾರೆ.
ಮೋದಿ, ಸಭೆಯ ಆರಂಭದಲ್ಲಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿ, ದೇಶದ ಜನತೆಯ ಸಂಕಲ್ಪವನ್ನು ಒತ್ತಿಹೇಳಿದರು. “ಪಹಲ್ಗಾಮ್‌ನಲ್ಲಿ ನಡೆದ ಕ್ರೂರ ದಾಳಿಯಿಂದ ಇಡೀ ದೇಶವೇ ದುಃಖದಲ್ಲಿದೆ. ಆದರೆ, ಈ ದಾಳಿಯ ಹಿಂದಿರುವ ಉಗ್ರರಿಗೆ ಮತ್ತು ಅವರನ್ನು ಬೆಂಬಲಿಸುವವರಿಗೆ ಭಾರತ ತಕ್ಕ ಪಾಠ ಕಲಿಸಲಿದೆ,” ಎಂದು ಅವರು ಗುಡುಗಿದ್ದಾರೆ.
ಪಾಕಿಸ್ತಾನದ ಕಡೆಗೆ ತೀಕ್ಷ್ಣವಾದ ಎಚ್ಚರಿಕೆ ನೀಡಿರುವ ಮೋದಿ, “ನಮ್ಮ ಶತ್ರು ರಾಷ್ಟ್ರ ಭಾರತವನ್ನು ಅಸ್ಥಿರಗೊಳಿಸಲು ಯತ್ನಿಸಿದರೆ, ಅದಕ್ಕೆ ತಕ್ಕ ಉತ್ತರ ನೀಡಲು ಭಾರತ ಸಂಪೂರ್ಣವಾಗಿ ಸಿದ್ಧವಾಗಿದೆ. ಭಯೋತ್ಪಾದಕ ನಾಯಕರನ್ನು ಎಲ್ಲಿಯೇ ಇದ್ದರೂ ಬಿಡುವುದಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.
ಕಾಶ್ಮೀರದಲ್ಲಿ ಶಾಂತಿಯನ್ನು ಕದಡುವ ಯಾವುದೇ ಪ್ರಯತ್ನವನ್ನು ಭಾರತ ಸಹಿಸುವುದಿಲ್ಲ ಎಂದು ಒತ್ತಿ ಹೇಳಿದ ಪ್ರಧಾನಿ, ರಾಷ್ಟ್ರದ ಭದ್ರತೆ ಮತ್ತು ಸಾರ್ವಭೌಮತೆಯನ್ನು ಕಾಪಾಡಲು ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.