ನವದೆಹಲಿ (ಮಾ.22): ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯೋಗದಲ್ಲಿ ಆರ್ಹತೆ ಆಧರಿಸಿ ಪ್ರವೇಶ ನೀಡುವ ಮೆರಿಟ್ ವ್ಯವಸ್ಥೆಯೇ ಸರಿ ಇಲ್ಲ. ಇದು ಕೇವಲ ಮೇಲ್ವರ್ಗದವರಿಗೆ ಮಾತ್ರ ಅನುಕೂಲ ಆಗುವಂತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ರಾಹುಲ್ ಗಾಂಧಿ, ದಲಿತರು, ಹಿಂದುಳಿದವರು ಹಾಗೂ ಆದಿವಾಸಿ ಸಮುದಾಯದವರು ನ್ಯಾಯಸಮ್ಮತವಾಗಿ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳನ್ನು ಪಡೆಯಲು ಇರುವ ವ್ಯವಸ್ಥೆ ಇದೆ ಎನ್ನುವುದು ಭ್ರಮೆ ಎಂದರು. “ಮೆರಿಟ್ ವ್ಯವಸ್ಥೆ ಎಡವಟ್ಟಾಗಿದೆ, ಏಕೆಂದರೆ ಅದು ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದವರ ಪ್ರಗತಿಗೆ ಅನುಕೂಲವಾಗುವುದಿಲ್ಲ. ಮೇಲ್ವರ್ಗದವರಿಗೆ ಮಾತ್ರ ಅನುಕೂಲಕರವಾಗಿದೆ,” ಎಂದು ಅಭಿಪ್ರಾಯಪಟ್ಟರು.
ಜಾತಿ ಗಣತಿಯ ಅಗತ್ಯತೆ:
ಇದೇ ಸಂದರ್ಭದಲ್ಲಿ, ಸಮಾಜದ ಅಸಮಾನತೆಗಳನ್ನು ಬಯಲಿಗೆಳೆಯಲು ಜಾತಿ ಗಣತಿ ಅಗತ್ಯವಿದೆ. ಜಾತಿ ಗಣತಿ ವಿರೋಧಿಸುವವರು ಸತ್ಯವನ್ನು ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. “ಜನಸಂಖ್ಯೆಯ ಆಧಾರದಲ್ಲಿ ಜಾತಿಗಳ ಪ್ರಾತಿನಿಧ್ಯ ತೋರಿಸಲು ಜಾತಿ ಗಣತಿ ಸಹಾಯಕ. ಇದರಿಂದ ಅಸಮಾನತೆಗೆ ತಕ್ಕ ಪ್ರತಿಕ್ರಿಯೆ ನೀಡಲು ಸಾಧ್ಯ,” ಎಂದು ಹೇಳಿದರು.
ಅಂಬೇಡ್ಕರ್ ಮತ್ತು ಸಮಾನತೆಗಾಗಿ ಹೋರಾಟ:
ಅಸ್ಪೃಶ್ಯರಿಗೆ ಸಾರ್ವಜನಿಕ ನೀರಿನ ಮೂಲಗಳನ್ನು ಬಳಸಲು ಅವಕಾಶ ನೀಡಲು ಡಾ. ಬಿ.ಆರ್. ಅಂಬೇಡ್ಕರ್ ಅವರು 1927ರ ಮಾರ್ಚ್ 20 ರಂದು ಕೈಗೊಂಡ ಮಹದ ಸತ್ಯಾಗ್ರಹವನ್ನು ಉಲ್ಲೇಖಿಸಿದ ರಾಹುಲ್, “ಅದು ಸಮಾನತೆ ಮತ್ತು ಗೌರವಕ್ಕಾಗಿ ನಡೆದ ಹೋರಾಟವಾಗಿತ್ತು. 98 ವರ್ಷಗಳ ಹಿಂದೆ ಆರಂಭವಾದ ಈ ಸಮರವು ಇನ್ನೂ ಮುಂದುವರಿಯುತ್ತಿದೆ,” ಎಂದು ತಿಳಿಸಿದರು.
ಬಿಜೆಪಿಯಿಂದ ವಾಗ್ದಾಳಿ:
ರಾಹುಲ್ ಗಾಂಧಿಯವರ ಹೇಳಿಕೆಗೆ ಬಿಜೆಪಿ ತೀವ್ರ ಪ್ರತಿಕ್ರಿಯೆ ನೀಡಿದ್ದು, ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು, “ತಾನೇನು ಮಾತನಾಡುತ್ತಿದ್ದಾರೆ ಎಂಬುದರ ಅರಿವಿದೆಯೆ ರಾಹುಲ್ ಗಾಂಧಿಗೆ? ಬಡ ಮತ್ತು ಹಿಂದುಳಿದ ವರ್ಗಗಳಿಂದ ಬಂದವರಿಗೆ ಮೆರಿಟ್ ಆಧಾರದ ಮೇಲೆ ಬೆಳೆವ ಅವಕಾಶವಿದೆ. ಲಕ್ಷಾಂತರ ಜನ ಈ ಮೂಲಕ ಪ್ರಗತಿ ಸಾಧಿಸಿದ್ದಾರೆ. ಆದರೆ ರಾಜವಂಶದವರಿಗೆ ಇದರ ಅರ್ಥ ಆಗುವುದಿಲ್ಲ,” ಎಂದು ವಾಗ್ದಾಳಿ ನಡೆಸಿದ್ದಾರೆ.