ಅಮೆರಿಕದ ಮಹಾಪತನ.. ಮುಂದೇನು..?

ಷೇರು ಮಾರುಕಟ್ಟೆಯ ಮೌಲ್ಯ 4 ಟ್ರಿಲಿಯನ್ ಡಾಲರ್ ಕುಸಿತ..! ಟೆಕ್ ದೈತ್ಯರಿಗೆ ‘ಮಂಡೆ’ ಬಿಸಿ..!

Befunky collage 2025 03 12t073813.300

ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾದ ಬಳಿಕ ಅಮೆರಿಕದ ಷೇರು ಮಾರುಕಟ್ಟೆ ಮೌಲ್ಯ 4 ಟ್ರಿಲಿಯನ್ ಡಾಲರ್ ಕುಸಿತ ಕಂಡಿದೆ. ತಂತ್ರಜ್ಞಾನ ದೈತ್ಯ ಕಂಪನಿಗಳಾದ ಆ್ಯಪಲ್, ಮೈಕ್ರೋಸಾಫ್ಟ್, ಟೆಸ್ಲಾ, ಎನ್‌ವಿಡಿಯಾ, ಗೂಗಲ್ ಮಾಲೀಕ ಆಲ್ಪಾಬೆಟ್, ಫೇಸ್ಬುಕ್ ಮಾಲೀಕ ಮೆಟಾ, ಅಮೆಜಾನ್ ಕಂಪನಿಗಳ ಮೌಲ್ಯ 750 ಬಿಲಿಯನ್ ಡಾಲರ್ ಕುಸಿತವಾಗಿದೆ. ಆ್ಯಪಲ್ ಮೌಲ್ಯದಲ್ಲಿ ಅತಿ ಹೆಚ್ಚು ಕುಸಿತವಾಗಿದೆ. ಹೀಗಾಗಿ ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಭೀತಿ ಎದುರಾಗಿದ್ದು, ಇದ್ರಿಂದ ಜಗತ್ತಿನಲ್ಲಿ ಮತ್ತೊಮ್ಮೆ ಆರ್ಥಿಕ ಹಿಂಜರಿತವಾಗುವ ಭಯ ಶುರುವಾಗಿದೆ. ಕ್ರಿಪ್ಟೋ ಕರೆನ್ಸಿಯಲ್ಲೂ ಭಾರಿ ಕುಸಿತ ಕಂಡಿದ್ದು, ಟ್ರಂಪ್ ಕುರಿತು ಇಟ್ಟಿದ್ದ ನಿರೀಕ್ಷೆಗಳೆಲ್ಲಾ ಹುಸಿಯಾಗಿವೆ.

ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಸೋಮವಾರ ಅಕ್ಷರಶಃ ರಕ್ತಪಾತವಾಗಿದೆ. ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ ಜೋರಾಗಿದ್ದು, ಗೂಳಿಯನ್ನ ಹಿಮ್ಮೆಟ್ಟಿಸಿದೆ. ಫೆಬ್ರವರಿ 19 ರಿಂದ ಇದುವರೆಗೆ ಅಮೆರಿಕದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಡೌ ಜೋನ್ಸ್ ಮಾರುಕಟ್ಟೆ ಸೂಚ್ಯಂಕ, ಸ್ಟಾಂಡರ್ಡ್ ಅಂಡ್ ಪೂರ್ ಫೈವ್ ಹಂಡ್ರೆಡ್, ನಾಸ್ಡಾಕ್‌‌ಗಳ ಮೌಲ್ಯ 4 ಟ್ರಿಲಿಯನ್ ಡಾಲರ್ ಕುಸಿತ ಕಂಡಿದೆ. ಇದು ಭಾರತದ ಒಟ್ಟು ಆರ್ಥಿಕತೆ ಮೌಲ್ಯಕ್ಕಿಂತಲೂ ಹೆಚ್ಚಾಗಿದೆ. ಭಾರತದ ಆರ್ಥಿಕತೆ ಪ್ರಸ್ತುತ 3.8 ಟ್ರಿಲಿಯನ್ ಡಾಲರ್‌ನಷ್ಟಿದೆ. ಅದ್ರಲ್ಲೂ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಬಳಿಕ ಶುರುವಾದ ಟ್ರೇಡ್ ವಾರ್‌ನಿಂದ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಲ್ಲಿ ವಿಶ್ವಾಸವನ್ನೇ ಉಡುಗಿಸಿಬಿಟ್ಟಿದೆ. ಷೇರು ಮಾರುಕಟ್ಟೆಯಲ್ಲಿ ಆಗಿರೋ ತಲ್ಲಣಗಳಿಂದ ಅಮೆರಿಕದ ಮ್ಯಾಗ್ನಿಫಿಷಿಯೆಂಟ್ ಸೆವೆನ್ ಅಂತಾ ಕರೆಸಿಕೊಳ್ಳೋ ಆ್ಯಪಲ್, ಮೈಕ್ರೋಸಾಫ್ಟ್, ಟೆಸ್ಲಾ, ಎನ್‌ವಿಡಿಯಾ, ಗೂಗಲ್‌‌ ಒಡೆಯ ಆಲ್ಫಾಬೆಟ್, ಫೇಸ್ಬುಕ್ ಒಡೆಯ ಮೆಟಾ, ಅಮೆಜಾನ್ ಕಂಪನಿಗಳು ಸೋಮವಾರ ಒಂದೇ ದಿನ ತಮ್ಮ ಮಾರುಕಟ್ಟೆ ಮೌಲ್ಯದಲ್ಲಿ 750 ಬಿಲಿಯನ್ ಡಾಲರ್ ಕುಸಿತ ಕಂಡಿವೆ.

ADVERTISEMENT
ADVERTISEMENT

ಇದರಲ್ಲಿ ಆ್ಯಪಲ್‌ಗೆ ಹೆಚ್ಚಿನ ಹೊಡೆತ ಬಿದ್ದಿದೆ. ಸೋಮವಾರ ಒಂದೇ ದಿನ ಆ್ಯಪಲ್ ಮೌಲ್ಯದಲ್ಲಿ 175 ಬಿಲಿಯನ್ ಡಾಲರ್ ಕುಸಿತ ಕಂಡಿದ್ದರೆ, ಎನ್‌ವಿಡಿಯಾ ಮೌಲ್ಯ 140 ಬಿಲಿಯನ್ ಡಾಲರ್ ಕುಸಿತ ಕಂಡಿದೆ. ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿ ಟೆಸ್ಲಾದ ಮೌಲ್ಯ 130 ಬಿಲಿಯನ್ ಡಾಲರ್ ಕುಸಿತ ಕಂಡಿದೆ. ಡಿಸೆಂಬರ್ ಮಧ್ಯಭಾಗಕ್ಕೆ ಹೋಲಿಸಿದರೆ, ಟೆಸ್ಲಾದ ಮಾರುಕಟ್ಟೆ ಮೌಲ್ಯ ಅರ್ಧದಷ್ಟು ಕುಸಿತ ಕಂಡಿದೆ. ಮೈಕ್ರೋಸಾಫ್ಟ್ ಮೌಲ್ಯ 98 ಬಿಲಿಯನ್ ಡಾಲರ್ ಕುಸಿತ ಕಂಡಿದ್ದರೆ, ಆಲ್ಫಾಬೆಟ್ 95 ಬಿಲಿಯನ್ ಡಾಲರ್ ಕುಸಿತ ಕಂಡಿದೆ. ಮೆಟಾದ ಮೌಲ್ಯ 70 ಬಿಲಿಯನ್ ಡಾಲರ್ ಕಡಿಮೆಯಾಗಿದ್ದರೆ, ಅಮೆಜಾನ್ ಮೌಲ್ಯ 50 ಬಿಲಿಯನ್ ಡಾಲರ್‌ನಷ್ಟು ಕಡಿಮೆಯಾಗಿದೆ. ಅಮೆರಿಕದ ಷೇರು ಮಾರುಕಟ್ಟೆ ಮೌಲ್ಯದ ಒಟ್ಟಾರೆ ಕುಸಿತದ ಪಾಲಿನಲ್ಲಿ ಶೇಕಡ 19ರಷ್ಟು ಈ ಏಳು ಕಂಪನಿಗಳ ಮೌಲ್ಯ ಕುಸಿತದಿಂದ ಆಗಿದೆ. ಇದರಿಂದಾಗಿ ಅಮೆರಿಕದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದ್ದು, ಯಾಕಾದರೂ ಡೊನಾಲ್ಡ್ ಟ್ರಂಪ್‌‌ಗೆ ಪಟ್ಟ ಕಟ್ಟಿದೆವೆಯೋ ಎಂದು ಅಮೆರಿಕದ ಜನ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.

ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಈ ಪರಿಯ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಲು ಮೂಲ ಕಾರಣ ಟ್ರಂಪ್ ಆರಂಭಿಸಿರುವ ವ್ಯಾಪಾರ ಯುದ್ಧ. ಇದರ ಜೊತೆಗೆ ಇನ್ನೂ ಹಲವು ಕಾರಣಗಳಿವೆ. ಮಾರುಕಟ್ಟೆ ತಜ್ಞರು ಹೇಳುವಂತೆ, ಈ ಏಳು ಕಂಪನಿಗಳ ಮೌಲ್ಯ ಕುಸಿಯಲು ಬೇರೆಯದ್ದೇ ಕಾರಣವಿದೆ. ಈ ಏಳು ಕಂಪನಿಗಳ ಒಟ್ಟಾರೆ ಮೌಲ್ಯಕ್ಕಿಂತಾ ಮಾರುಕಟ್ಟೆ ಮೌಲ್ಯ ಹಲವಾರು ಪಟ್ಟು ಹೆಚ್ಚಿತ್ತು. ಹೂಡಿಕೆದಾರರು ಹೆಚ್ಚು ನಂಬಿಕೆ ಇಟ್ಟು ಹೂಡಿಕೆ ಮಾಡಿದ್ದರು. ಈಗ ತಮ್ಮ ತಪ್ಪಿನ ಅರಿವಾಗಿದ್ದು, ಈ ಕಂಪನಿಗಳಲ್ಲಿ ಮಾಡಿದ್ದ ಹೂಡಿಕೆಯನ್ನ ಹಿಂತೆಗದುಕೊಂಡಿದ್ದಾರೆ. ಹೀಗಾಗಿ ಸೋಮವಾರ ಈ ಕಂಪನಿಗಳ ಒಟ್ಟಾರೆ ಮೌಲ್ಯದಲ್ಲಿ ಕುಸಿತ ಕಂಡಿದೆ ಅಂತಾ ಹೇಳುತ್ತಿದ್ದಾರೆ.

ಟ್ರಂಪ್ ಆರಂಭಿಸಿರುವ ಟ್ರೇಡ್ ವಾರ್‌ನಿಂದಾಗಿ ಕೆನಡಾ, ಮೆಕ್ಸಿಕೋ ಮತ್ತು ಯುರೋಪಿಯನ್ ರಾಷ್ಟ್ರಗಳು ಅಮೆರಿಕದ ಮೇಲೆ ಹೆಚ್ಚಿನ ಸುಂಕ ವಿಧಿಸಲು ಮುಂದಾಗಿವೆ. ಹೀಗಾಗಿ ವಿವಿಧ ಕಂಪನಿಗಳು ತಾವು ಈ ವರ್ಷ ಇಟ್ಟುಕೊಂಡಿದ್ದ ಗುರಿ ಮತ್ತು ಲಾಭಾಂಶ ಹೆಚ್ಚಳದ ಕುರಿತು ಮರು ಚಿಂತನೆ ಮಾಡಲು ಮುಂದಾಗಿವೆ. ಅಲ್ಲದೆ, ಟ್ಯಾರಿಫ್ ವಾರ್‌ನಿಂದ ಆಗುವ ಆರ್ಥಿಕ ಪಲ್ಲಟಗಳನ್ನು ನಿಭಾಯಿಸೋದು ಹೇಗೆ ಎಂಬ ಕುರಿತು ನಿರ್ದಿಷ್ಟ ದಿಗ್ಪಥ ಕಂಡು ಕೊಂಡಿಲ್ಲ. ಜೊತೆಗೆ ಟ್ಯಾರಿಫ್ ವಾರ್‌ನಿಂದ ಯಾವ ರೀತಿಯ ಪರಿಣಾಮಗಳು ಉಂಟಾಗಬಹುದು ಎಂಬುದು ಗೊತ್ತಿಲ್ಲ. ಹೀಗಾಗಿ ಹೂಡಿಕೆದಾರರು ಷೇರುಗಳಲ್ಲಿ ಹೂಡಿಕೆ ಮಾಡುವ ಬದಲು, ಬೇರೆಡೆ ಹೂಡಿಕೆ ಮಾಡುತ್ತಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡು ಬರುತ್ತಿದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ.

ಅಮೆರಿಕದ 7 ತಂತ್ರಜ್ಞಾನ ಕಂಪನಿಗಳ ನೈಜ ಮಾರುಕಟ್ಟೆ ಮೌಲ್ಯಕ್ಕಿಂತಾ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿದ್ದವು. ಹೂಡಿಕೆದಾರರು ತಾವು ಮಾಡಿದ್ದ ತಪ್ಪನ್ನು ಸರಿಪಡಿಸಿಕೊಳ್ಳಲು ಈ ಕಂಪನಿಗಳ ಷೇರುಗಳನ್ನ ಮಾರಾಟ ಮಾಡಿದ್ದಾರೆ. ಒಂದು ರೀತಿಯಲ್ಲಿ ಇದು ಒಳ್ಳೆಯ ಬೆಳವಣಿಗೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಇದರ ಜೊತೆಗೆ ಅಮೆರಿಕದ ಪ್ರಮುಖ ವಿಮಾನಯಾನ ಕಂಪನಿಗಳಲ್ಲಿ ಒಂದಾದ ಡೆಲ್ಟಾ ಏರ್‌ಲೈನ್ಸ್‌‌‌‌ ಈ ತ್ರೈಮಾಸಿಕದ ಲಾಭಾಂಶದಲ್ಲಿ ಅರ್ಧದಷ್ಟು ಕಡಿತವಾಗಲಿದೆ ಎಂದು ಘೋಷಿಸಿದೆ. ಹೀಗಾಗಿ ಈ ಕಂಪನಿಯ ಷೇರುಗಳು ಶೇಕಡ 14ರಷ್ಟು ಕುಸಿತ ಕಂಡಿವೆ.

ಎಲ್ಲಕ್ಕಿಂತಲೂ ಮುಖ್ಯವಾಗಿ ಹೂಡಿಕೆದಾರರಲ್ಲಿ ಆರ್ಥಿಕ ಹಿಂಜರಿತದ ಭೀತಿ ಶುರುವಾಗಿದೆ. ಕಳೆದ ಹಲವು ವರ್ಷಗಳಿಂದ 2008ರಲ್ಲಿ ಸಂಭವಿಸಿದ್ದ ರೀತಿಯೇ ಮತ್ತೊಂದು ಆರ್ಥಿಕ ಹಿಂಜರಿತ ಸಂಭವಿಸಬಹುದು ಎಂದು ಹಲವಾರು ಆರ್ಥಿಕ ತಜ್ಞರು ಭವಿಷ್ಯ ನುಡಿದಿದ್ದರು. ಆದರೆ, 2025ರಲ್ಲಿ ಖಂಡಿತವಾಗಿಯೂ ಆರ್ಥಿಕ ಹಿಂಜರಿತ ಸಂಭವಿಸಬಹುದು ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಇದಕ್ಕೆ ಪೂರಕ ಎಂಬ ರೀತಿ, ಭಾನುವಾರ ಟ್ರಂಪ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಅಮೆರಿಕ ಈಗ ಬದಲಾವಣೆಯ ಯುಗದಲ್ಲಿದೆ ಎಂದು ಹೇಳಿದ್ದಾರೆ. ಅಲ್ಲದೇ, ಆರ್ಥಿಕ ಹಿಂಜರಿತ ಸಂಭವಿಸುವುದಿಲ್ಲ ಎಂದು ಹೇಳಲು ಅಸಾಧ್ಯ ಎಂದು ಹೇಳುವ ಮೂಲಕ ಹೂಡಿಕೆದಾರರು ಷೇರು ಮಾರುಕಟ್ಟೆ ಕುರಿತು ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡಿದ್ದಾರೆ. ಜೊತೆಗೆ ಆರ್ಥಿಕ ಹಿಂಜರಿತದಂತಹ ಸಂಗತಿಗಳನ್ನು ನಾನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದು, ಆರ್ಥಿಕ ಹಿಂಜರಿತ ಸಂಭವಿಸುವ ಸಾಧ್ಯತೆ ಇದೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಟ್ರಂಪ್ ನೀಡಿರುವ ಹೇಳಿಕೆಗಳನ್ನು ಆಧರಿಸಿ ಕೆಲವು ಆರ್ಥಿಕ ತಜ್ಞರು ಆರ್ಥಿಕ ಹಿಂಜರಿತ ಸಂಭವಿಸಬಹುದು ಎಂದು ಹೇಳುತ್ತಿದ್ದಾರೆ. ಮಾರುಕಟ್ಟೆ ಕುಸಿತ ಆಗುವುದು ಟ್ರಂಪ್ ಸರ್ಕಾರಕ್ಕೆ ಬೇಕಿತ್ತು. ಆರ್ಥಿಕ ಹಿಂಜರಿತ ಸಂಭವಿಸುವುದು ಸಹ ಟ್ರಂಪ್ ಸರ್ಕಾರಕ್ಕೆ ಬೇಕಿದೆ. ಇದ್ರಿಂದಾಗಿ ಟ್ರಂಪ್ ಸರ್ಕಾರ ಹಾಕಿಕೊಂಡಿರುವ ದೊಡ್ಡ ಗುರಿ ತಲುಪಲು ನೆರವಾಗಬಹುದು ಎಂದು ಹೇಳಿದ್ದಾರೆ. ಮಾರುಕಟ್ಟೆ ಕುಸಿತದ ಕುರಿತು ಅಮೆರಿಕದ ರಾಷ್ಟ್ರೀಯ ಆರ್ಥಿಕ ಸಮಿತಿಯ ಮುಖ್ಯಸ್ಥ ಕೆವಿನ ಹೆಸೆಟ್ ಪ್ರತಿಕ್ರಿಯೆ ನೀಡಿದ್ದಾರೆ. ‘ಮಾರುಕಟ್ಟೆ ಕುಸಿತ ಕಂಡಿದೆ ಎಂದ ಮಾತ್ರಕ್ಕೆ, ಅಮೆರಿಕದ ಆರ್ಥಿಕತೆ ಕುಸಿತ ಕಂಡಿದೆ ಎಂದು ಏಕೆ‌ ಭಾವಿಸುತ್ತೀರಿ..? ಈ ತ್ರೈಮಾಸಿಕದಲ್ಲಿ ಕೆಲವು ತಲ್ಲಣಗಳು ಸಂಭವಿಸಬಹುದು. ಜೊತೆಗೆ ಟ್ರಂಪ್ ಹೇರಿರುವ ಸುಂಕ ಹೆಚ್ಚಳ ಸದ್ಯಕ್ಕೆ ಕಡಿಮೆಯಾಗುವ ಲಕ್ಷಣಗಳು ಇಲ್ಲ. ಸದ್ಯಕ್ಕೆ ನೀಡಿರುವ ತೆರಿಗೆ ಕಡಿತದಿಂದ ಅಮೆರಿಕದಲ್ಲಿ ಹೂಡಿಕೆ ಹೆಚ್ಚಾಗುವ ಜೊತೆಗೆ, ಅಮೆರಿಕನ್ನರ ಆದಾಯ ಹೆಚ್ಚಳವಾಗುವ ಸಾಧ್ಯತೆಗಳು ಕಂಡು ಬರುತ್ತಿವೆ. ಆದರೆ, ಸದ್ಯಕ್ಕೆ ಮಾರುಕಟ್ಟೆಯಲ್ಲಿ ಆಗುತ್ತಿರುವ ತಲ್ಲಣಗಳಿಂದ ಹೂಡಿಕೆದಾರರು, ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಹಿಂದೆ ಮುಂದೆ ನೋಡುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡಿರುವುದರಿಂದ ಹೂಡಿಕೆದಾರರು ಅಲರ್ಟ್ ಆಗಿದ್ದಾರೆ. ಶೀಘ್ರದಲ್ಲೇ ಬಿಡುಗಡೆಯಾಗುವ ಹಣದುಬ್ಬರ ವರದಿ, ಅಮೆರಿಕದ ಫೆಡರಲ್ ರಿಸರ್ವ್ ಬಿಡುಗಡೆ ಮಾಡಲಿರುವ ಬಡ್ಡಿ ದರದ ನೀತಿ, ಅಮೆರಿಕದ ಆರ್ಥಿಕತೆಯನ್ನು ಸ್ಥಿರೀಕರಣಗೊಳಿಸಲು ಸರ್ಕಾರ ಯಾವ ಕ್ರಮಗಳನ್ನ ಕೈಗೊಳ್ಳುತ್ತದೆ ಎಂಬುದರ ಮೇಲೆ ಮಾರುಕಟ್ಟೆಯಲ್ಲಿ ಕರಡಿ ಕುಣಿತ ಮುಂದುವರಿಯಲಿದೆಯಾ ಇಲ್ಲವೇ ಗೂಳಿ ಮತ್ತೆ ಓಡಲು ಆರಂಭಿಸಲಿದೆಯಾ ಎಂಬುದು ನಿರ್ಧಾರವಾಗಲಿದೆ. ಏನೇ ಆಗಲಿ ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ಅಮೆರಿಕದಲ್ಲಿ ಮಹಾ ಕುಸಿತ ಶುರುವಾಗಿರುವುದು ಸುಳ್ಳಲ್ಲ.

ಚಂದ್ರಮೋಹನ್ ಕೋಲಾರ, ಸ್ಪೆಷಲ್ ಬ್ಯೂರೋ, ಗ್ಯಾರಂಟಿ ನ್ಯೂಸ್.

Exit mobile version