₹ ಚಿಹ್ನೆಗೆ ತಮಿಳುನಾಡು ಟಾಟಾ..!

ತಮ್ಮದೇ ವಿನ್ಯಾಸಕ್ಕೆ ಗುಡ್‌‌ ಬೈ ಹೇಳಿದ ಸ್ಟಾಲಿನ್‌..! ಬಜೆಟ್ ಪ್ರತಿಯಲ್ಲಿ ರೂಪಾಯಿ ಚಿಹ್ನೆಗೆ ಬೈ..!

Untitled design (39)

ಕೇಂದ್ರ ಸರ್ಕಾರದ ಜೊತೆಗೆ ಪದೇಪದೆ ಕಿರಿಕ್ ಮಾಡಿಕೊಳ್ಳುವ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್‌ ಈಗ ಹೊಸ ತಗಾದೆ ತೆಗೆದಿದ್ದಾರೆ. ತಮಿಳುನಾಡಿನಲ್ಲಿ ಶುಕ್ರವಾರ ಬಜೆಟ್ ಮಂಡನೆಯಾಗಲಿದೆ. ಬಜೆಟ್ ಪುಸ್ತಕದಲ್ಲಿ ₹ ಚಿಹ್ನೆ ಬದಲಿಗೆ ತಮಿಳಿನಲ್ಲಿ ‘ರೂ’ ಎಂದು ಮುದ್ರಿಸಲಾಗಿದೆ. ಈ ಹಿಂದಿನ ಬಜೆಟ್‌ ಪುಸ್ತಕಗಳಲ್ಲಿ ₹ ಚಿಹ್ನೆಯನ್ನು ಮುದ್ರಿಸಲಾಗಿತ್ತು. ತ್ರಿಭಾಷಾ ಸೂತ್ರ ಜಾರಿಗೆ, ಲೋಕಸಭೆ ಕ್ಷೇತ್ರಗಳ ಮರುವಿಂಗಡಣೆಗೆ ಸ್ಟಾಲಿನ್ ವಿರೋಧ ವ್ಯಕ್ತಪಡಿಸಿದ್ದರು. ಈಗ ₹ ಚಿಹ್ನೆ ಕೈ ಬಿಡುವ ಮೂಲಕ ಹೊಸ ಕ್ಯಾತೆ ತೆಗೆದಿದ್ದಾರೆ. ವಿಪರ್ಯಾಸ ಎಂದರೆ ಸ್ಟಾಲಿನ್ ಪ್ರತಿನಿಧಿಸುವ ಡಿಎಂಕೆಯ ಮಾಜಿ ಶಾಸಕರ ಮಗ ₹ ಚಿಹ್ನೆಯನ್ನು ವಿನ್ಯಾಸ ಮಾಡಿದ್ದರು.

ತಮಿಳುನಾಡಿನಲ್ಲಿ ಯಾವುದೇ ಕಾರಣಕ್ಕೂ ಹೊಸ ಶಿಕ್ಷಣ ನೀತಿ ಜಾರಿಯಾಗಲು ಬಿಡುವುದಿಲ್ಲ. ಈ ಮೂಲಕ ತಮಿಳುನಾಡಿನಲ್ಲಿ ತ್ರಿಭಾಷಾ ಸೂತ್ರ ಹೇರಿಕೆಗೆ ಆಸ್ಪದ ಮಾಡಿಕೊಡುವುದಿಲ್ಲ ಎಂದು ಹೇಳುವ ಮೂಲಕ ತಮಿಳುನಾಡು ಸಿಎಂ ಮುತ್ತುವೇಲ್ ಕರುಣಾನಿಧಿ ಸ್ಟಾಲಿನ್ ಕೇಂದ್ರದ ವಿರುದ್ಧ ಕ್ಯಾತೆ ತೆಗೆದಿದ್ದರು. ಇದು ಸಾಲದು ಎಂಬ ರೀತಿ ಜನಸಂಖ್ಯೆ ಆಧರಿಸಿ ಲೋಕಸಭೆ ಕ್ಷೇತ್ರಗಳ ಮರು ವಿಂಗಡಣೆಗೆ ವಿರೋಧ ವ್ಯಕ್ತಪಡಿಸಿದ್ದರು. ಮುಂದಿನ 30 ವರ್ಷ ಈಗಿರುವ ರೀತಿಯೇ ಲೋಕಸಭಾ ಕ್ಷೇತ್ರಗಳನ್ನು ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದರು. ಇದಾಗಿ ಕೆಲವೇ ದಿನಗಳಲ್ಲಿ ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದವರು ಹೆಚ್ಚು ಹೆಚ್ಚು ಮಕ್ಕಳನ್ನು ಹೆರಬೇಕು ಎಂಬ ಸಲಹೆ ನೀಡಿ ವಿವಾದಕ್ಕೆ ಕಾರಣವಾಗಿದ್ದರು.
ದಕ್ಷಿಣ ಭಾರತಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ. ತೆರಿಗೆ ಹಂಚಿಕೆ, ಅನುದಾನ ಹಂಚಿಕೆ ಸೇರಿ ಹಲವು ವಿಚಾರಗಳಲ್ಲಿ ತಮಿಳುನಾಡಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ. ತಮ್ಮ ರಾಜ್ಯದ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಸ್ಟಾಲಿನ್‌ ಆರೋಪಿಸಿದ್ದರು. ಒಂದು ವೇಳೆ ಕೇಂದ್ರ ಸರ್ಕಾರ ಇದೇ ರೀತಿಯ ಧೋರಣೆ ಮುಂದುವರಿಸಿದರೆ, ದಕ್ಷಿಣ ಭಾರತೀಯರು ಪ್ರತ್ಯೇಕ ದೇಶಕ್ಕಾಗಿ ಹೋರಾಟ ಆರಂಭಿಸುವ ದಿನಗಳು ದೂರವಿಲ್ಲ ಎಂದು ಎಚ್ಚರಿಕೆ ನೀಡಿದ್ದರು. ಇದಕ್ಕೆ ಮಾಜಿ ಸಂಸದ ಡಿ.ಕೆ.ಸುರೇಶ್ ಕೂಡ ದನಿಗೂಡಿಸಿದ್ದರು. ಇಷ್ಟೆಲ್ಲಾ ವಿವಾದಗಳು ತೆರೆಮರೆಗೆ ಸರಿಯುವ ಮುನ್ನವೇ ಮತ್ತೊಂದು ವಿವಾದ ಹುಟ್ಟು ಹಾಕಿದ್ದಾರೆ. ಶುಕ್ರವಾರ ಮಂಡನೆಯಾಗಲಿರುವ ತಮಿಳುನಾಡು ಬಜೆಟ್ ಪ್ರತಿಯಲ್ಲಿ ರೂಪಾಯಿ ಚಿಹ್ನೆಯ ಬದಲು ತಮಿಳಿನಲ್ಲಿ ರೂ ಎಂದು ಮುದ್ರಿಸಲಾಗಿದೆ.

ADVERTISEMENT
ADVERTISEMENT

ವಿರೋಧ ಮಾಡಲಿಕ್ಕಾಗಿಯೇ ವಿರೋಧ ಮಾಡಬೇಕು ಎಂದು ಹೊರಟರೆ ಕಾಮನ್ ಸೆನ್ಸ್‌ ಕೈ ಕೊಡುತ್ತದೆ ಎಂಬುದು ಹಳೆಯ ಮಾತು. ಸ್ಟಾಲಿನ್‌ ಮತ್ತು ತಮಿಳುನಾಡು ಸರ್ಕಾರದ ವಿಚಾರದಲ್ಲಿ ಇದು ನಿಜವಾಗಿದೆ. ಏಕೆಂದರೆ, ಬಜೆಟ್‌ನಲ್ಲಿ ಕೈ ಬಿಡಲಾಗಿರುವ ರೂಪಾಯಿ ಚಿಹ್ನೆಯನ್ನು ವಿನ್ಯಾಸ ಮಾಡಿದ್ದೇ ತಮಿಳುನಾಡಿನವರು. ತಮಿಳುನಾಡಿನ ಕಲ್ಲಕುರುಚ್ಚಿಯಲ್ಲಿ ಜನಿಸಿರುವ ಡಿ.ಉದಯ್‌ ಕುಮಾರ್‌. ಉದಯ್‌ ಕುಮಾರ್‌ ಅವರ ತಂದೆ ಧರ್ಮಲಿಂಗಂ ಡಿಎಂಕೆಯ ಮಾಜಿ ಶಾಸಕರಾಗಿದ್ದಾರೆ. ರಿಷಿವಂದಿಯಂ ಶಾಸಕರಾಗಿ ಧರ್ಮಲಿಂಗಂ ಆಯ್ಕೆಯಾಗಿದ್ದರು.

ಕಲ್ಲಕುರುಚ್ಚಿಯಲ್ಲಿ ಜನಿಸಿದ್ದ ಡಿ.ಉದಯ್‌ ಕುಮಾರ್‌, ಅಣ್ಣಾ ಯುನಿವರ್ಸಿಟಿಯಲ್ಲಿ ಆರ್ಕಿಟೆಕ್ಚರ್‌ ಪದವಿ ಪಡೆದಿದ್ದರು. ಐಐಟಿ ಬಾಂಬೆಯ ಕೈಗಾರಿಕಾ ವಿನ್ಯಾಸ ಕೇಂದ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಉದಯ್ ಕುಮಾರ್‌, ಅಲ್ಲಿಯೇ ಪಿಎಚ್‌ಡಿ ಕೂಡ ಮಾಡಿದ್ದರು. ಅವರು ಪಿಎಚ್‌ಡಿ ಮಾಡುತ್ತಿದ್ದಾಗ ಕೇಂದ್ರ ಸರ್ಕಾರ ಮಾರ್ಚ್‌ 5, 2009ರಲ್ಲಿ ರೂಪಾಯಿ ಚಿಹ್ನೆ ರೂಪಿಸಲು ಸ್ಪರ್ಧೆ ಏರ್ಪಡಿಸಿತ್ತು. ಸ್ಪರ್ಧೆಯ ಮೂಲಕ ಸುಮಾರು 3,331 ವಿನ್ಯಾಸಗಳು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದವು. ಇದರಲ್ಲಿ 5 ವಿನ್ಯಾಸಗಳನ್ನು ಕೇಂದ್ರ ಸರ್ಕಾರ ಅಂತಿಮಗೊಳಿಸಿತ್ತು. ನೊಂದಿತಾ ಕೊರಿಯಾ ಮೆಹ್ರೋತ್ರಾ, ಹಿತೇಶ್ ಪದ್ಮಶಾಲಿ, ಶಿಬಿನ್‌ ಕೆಕೆ, ಶಾರುಖ್ ಜೆ ಇರಾನಿ ಮತ್ತು ಡಿ.ಉದಯ್‌ ಕುಮಾರ್ ವಿನ್ಯಾಸಗೊಳಿಸಿದ್ದ ಐದು ವಿನ್ಯಾಸಗಳನ್ನು ಅಂತಿಮಗೊಳಿಸಲಾಗಿತ್ತು.

ಈ ಐದು ವಿನ್ಯಾಸಗಳಲ್ಲಿ ಡಿ.ಉದಯ್‌ ಕುಮಾರ್ ಮಾಡಿದ್ದ ವಿನ್ಯಾಸವನ್ನು ರೂಪಾಯಿ ಚಿಹ್ನೆಯಾಗಿ ಬಳಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಜುಲೈ 15, 2010ರಲ್ಲಿ ಕೇಂದ್ರ ಸರ್ಕಾರ ರೂಪಾಯಿ ಚಿಹ್ನೆಯನ್ನು ಬಳಸಲು ಆರಂಭಿಸಿತು. ಆಗ ಕೇಂದ್ರದಲ್ಲಿ ಯುಪಿಎ ಸರ್ಕಾರವಿತ್ತು. ಡಿಎಂಕೆ ಯುಪಿಎ ಸರ್ಕಾರದ ಭಾಗವಾಗಿತ್ತು. ಆಗ ಇಲ್ಲದ ವಿರೋಧ ಈಗ ಏಕೆ ಎಂಬ ಪ್ರಶ್ನೆ ಶುರುವಾಗಿದೆ. ಸ್ಟಾಲಿನ್ ಮಾಡಿರುವ ದೊಡ್ಡ ಎಡವಟ್ಟು ಪ್ರತಿಪಕ್ಷ ಬಿಜೆಪಿ ಪಾಲಿಗೆ ದೊಡ್ಡ ಅಸ್ತ್ರ ನೀಡಿದೆ. ಸ್ಟಾಲಿನ್ ಸರ್ಕಾರ ಮಾಡಿರುವ ಎಡವಟ್ಟಿನ ಕುರಿತು ಬಿಜೆಪಿ ತಮಿಳುನಾಡು ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ವ್ಯಂಗ್ಯವಾಡಿದ್ದಾರೆ. ಎಕ್ಸ್‌‌ನಲ್ಲಿ ಪೋಸ್ಟ್‌ ಮಾಡಿರುವ ಅಣ್ಣಾಮಲೈ ಸ್ಟಾಲಿನ್‌ ಕುರಿತು ವ್ಯಂಗ್ಯವಾಡಿದ್ದು, ‘‘ಇನ್ನೆಷ್ಟು ಕೆಳಮಟ್ಟಕ್ಕೆ ಇಳಿಯುತ್ತೀರಿ’’ ಎಂದು ಪ್ರಶ್ನಿಸಿದ್ದಾರೆ.

Exit mobile version