ವಿವಾದಾತ್ಮಕ ಹಾಗೂ ರಾಷ್ಟ್ರದಲ್ಲಿ ಭಾರೀ ಸಂಚಲನ ಮೂಡಿಸಿರುವ ವಕ್ಫ್ ತಿದ್ದುಪಡಿ ಮಸೂದೆ ಮಂಡನೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರ ಪ್ರಕಾರ, ನಾಳೆ ಮಧ್ಯಾಹ್ನ 12 ಗಂಟೆಗೆ ಲೋಕಸಭೆಯಲ್ಲಿ ಈ ಮಸೂದೆ ಮಂಡನೆಗೊಳ್ಳಲಿದೆ. ಏಪ್ರಿಲ್ 4ರವರೆಗೆ ನಡೆಯುವ ಸಂಸತ್ ಬಜೆಟ್ ಅಧಿವೇಶನದ ಒಳಗೆ ಮಸೂದೆಯನ್ನು ರಾಜ್ಯಸಭೆಯಲ್ಲಿಯೂ ಅಂಗೀಕರಿಸುವ ಉದ್ದೇಶ ಕೇಂದ್ರ ಸರ್ಕಾರದ್ದಾಗಿದೆ.
ಸಂಸತ್‌ನಲ್ಲಿ ಈ ಮಸೂದೆಯ ಕುರಿತು 8 ಗಂಟೆಗಳ ಚರ್ಚೆಗೆ ಅವಕಾಶ ನೀಡಲಾಗಿದ್ದು, ಎಲ್ಲ ರಾಜಕೀಯ ಪಕ್ಷಗಳಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಕಲ್ಪಿಸಲಾಗಿದೆ. ಏಪ್ರಿಲ್ 4ರೊಳಗೆ ಚರ್ಚೆ ಮುಕ್ತಾಯವಾಗದಿದ್ದರೆ, ಮಾನ್ಸೂನ್ ಅಧಿವೇಶನದ ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರಕ್ಕೆ ಪ್ರಸ್ತಾವನೆ ಇಡಲಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಲೋಕಸಭೆಯಲ್ಲಿ 293 ಸದಸ್ಯರ ಬೆಂಬಲವನ್ನು ಹೊಂದಿದೆ. ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ 236 ಮತಗಳು ಚಲಾಯಿಸುವ ಸಾಧ್ಯತೆ ಇದೆ. ಇಂದಿನ ಸಂಸತ್ ಕಾರ್ಯಕಲಾಪ ಸಲಹಾ ಸಮಿತಿ ಸಭೆಯಿಂದ ವಿಪಕ್ಷ ಸದಸ್ಯರು ಹೊರನಡೆದಿದ್ದು, ನಾಳಿನ ಚರ್ಚೆಗೆ ಕುತೂಹಲ ಹೆಚ್ಚಾಗಿದೆ.
ವಕ್ಫ್‌ಬೋರ್ಡ್ ಆ್ಯಕ್ಟ್ ಎನಿದು?
1947ರಲ್ಲಿ ಭಾರತ-ಪಾಕಿಸ್ತಾನ ವಿಭಜನೆಯ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಆಸ್ತಿಗಳನ್ನು ರಕ್ಷಿಸಲು 1954ರಲ್ಲಿ ಪ್ರಧಾನಿ ಜವಾಹರಲಾಲ್ ನೆಹರು ಅವರ ನೇತೃತ್ವದಲ್ಲಿ ವಕ್ಫ್ ಬೋರ್ಡ್ ಆ್ಯಕ್ಟ್ ಜಾರಿಗೆ ಬಂದಿತ್ತು. 1964ರಲ್ಲಿ ಕೇಂದ್ರ ವಕ್ಫ್ ಬೋರ್ಡ್ ರಚನೆಯಾಯಿತು. ಈ ಕಾಯ್ದೆಯ ಪ್ರಕಾರ, ಮುಸ್ಲಿಂರು ತಮ್ಮ ಆಸ್ತಿಯನ್ನು ದಾನ ಮಾಡಿದರೆ, ಅದು ವಕ್ಫ್ ಬೋರ್ಡ್ ನಿಯಂತ್ರಣಕ್ಕೆ ಒಳಪಟ್ಟು ಕೇವಲ ಧಾರ್ಮಿಕ ಹಾಗೂ ಪರೋಪಕಾರಿ ಉದ್ದೇಶಗಳಿಗೆ ಮಾತ್ರ ಬಳಸಲು ಅವಕಾಶವಿತ್ತು. ಧಾರ್ಮಿಕ ಕಾರಣಗಳಿಂದ ದಾನವಾದ ಆಸ್ತಿಯನ್ನು ಮಾರಾಟ ಮಾಡುವ ಅನುಮತಿ ಇರಲಿಲ್ಲ, ಆದ್ದರಿಂದ ಈ ಆಸ್ತಿಯ ನಿರ್ವಹಣೆಯ ಜವಾಬ್ದಾರಿ ವಕ್ಫ್ ಬೋರ್ಡ್‌ಗೆ ನೀಡಲಾಯಿತು.
ಭಾರತದಲ್ಲಿ ಸೇನೆ ಮತ್ತು ರೈಲ್ವೆ ಇಲಾಖೆಯನ್ನು ಹೊರತುಪಡಿಸಿ, ಅತಿ ಹೆಚ್ಚು ಭೂಮಿಯನ್ನು ಹೊಂದಿರುವ ಸಂಸ್ಥೆ ವಕ್ಫ್ ಬೋರ್ಡ್ ಆಗಿದ್ದು, ಇದಕ್ಕೆ 1995ರಲ್ಲಿ ಒಂದಿಷ್ಟು ತಿದ್ದುಪಡಿಯನ್ನು ತರಲಾಯಿತು. ಈ ತಿದ್ದುಪಡಿಯ ಮೂಲಕ ದೇಶದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಕ್ಫ್ ಬೋರ್ಡ್ ಸ್ಥಾಪನೆಗೆ ಅವಕಾಶ ನೀಡಲಾಯಿತು. ದೇಶದಲ್ಲಿ 30 ರಿಂದ 40 ವಕ್ಫ್ ಬೋರ್ಡ್‌ಗಳಿದ್ದು, ಒಟ್ಟು 9.40 ಲಕ್ಷ ಎಕರೆ ಜಾಗ ಹಾಗೂ 1.2 ಲಕ್ಷ ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ವಕ್ಫ್ ಬೋರ್ಡ್ ಹೊಂದಿದೆ ಎಂಬ ಅಂದಾಜಿಸಲಾಗಿದೆ.
ಈ ಸಂಪತ್ತು ಮತ್ತು ಭೂಮಿಯ ಸುತ್ತ ಹಲವಾರು ಅವ್ಯವಹಾರಗಳ ಆರೋಪಗಳು ಕೇಳಿ ಬಂದಿವೆ. ಇದರ ಮೌಲ್ಯ ಟ್ರಿಲಿಯನ್ ಲೆಕ್ಕದಲ್ಲಿ ಇದೆ ಎಂದು ಆರೋಪಗಳು ಕೇಳಿ ಬಂದಿವೆ. ಈ ಒಂದು ವಕ್ಫ್ಬೋರ್ಡ್ಗಿರುವ ಸ್ವತಂತ್ರ ಶಕ್ತಿಗೆ ಕೊಕ್ಕೆ ಹಾಕಲು ಕೇಂದ್ರ ಸರ್ಕಾರ ತಿದ್ದುಪಡಿ ಮಸೂದೆ ತರಲು ನಿರ್ಧರಿಸಿದೆ.
ವಿವಾದ ಏನು?
ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ವಕ್ಫ್ ತಿದ್ದುಪಡಿ ಮಸೂದೆ ಹಲವು ಕಾರಣಗಳಿಗೆ ವಿವಾದಕ್ಕೀಡಾಗಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ರೈತರ ಭೂಮಿಯನ್ನು ವಕ್ಫ್ ಬೋರ್ಡ್ ಸ್ವಾಧೀನಪಡಿಸಿಕೊಂಡಿರುವ ಆರೋಪಗಳು ಕೇಳಿ ಬಂದಿವೆ. ಕೆಲವು ಹಿಂದೂ ದೇವಾಲಯಗಳ ಭೂಮಿಯನ್ನು ವಕ್ಫ್ ಬೋರ್ಡ್ ಸ್ವತ್ತು ಎಂದು ಪರಿಗಣಿಸಿರುವುದರಿಂದ ವಿವಾದ ಉಂಟಾಗಿದೆ. ಈ ಕಾರಣಗಳಿಂದ ವಕ್ಫ್ ಬೋರ್ಡ್‌ಗಳ ಅಹಂಕಾರ ಮತ್ತು ಏಕಪಕ್ಷೀಯ ನಿರ್ಧಾರಗಳಿಗೆ ಬ್ರೇಕ್ ಹಾಕುವ ಉದ್ದೇಶದಿಂದ ತಿದ್ದುಪಡಿ ಮಸೂದೆ ತರಲಾಗುತ್ತಿದೆ.
ಈ ಮಸೂದೆ ಮೂಲಕ ವಕ್ಫ್ ಬೋರ್ಡ್‌ಗೆ ಕಡಿವಾಣ ಹಾಕಲು ಹಾಗೂ ಭೂಸ್ವಾಮ್ಯದ ಹಕ್ಕುಗಳಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ, ಈ ತಿದ್ದುಪಡಿ ವಿರೋಧಕ್ಕೆ ವಿಪಕ್ಷಗಳು ಮುಂದಾಗಿದೆ. ವಕ್ಫ್ ಬೋರ್ಡ್ ಸ್ವಾಧೀನಕ್ಕೆ ಒಳಗಾದ ಭೂಮಿಗಳನ್ನು ಹಿಂದಿನ ಮಾಲೀಕರಿಗೆ ಮರಳಿಸುವ ಪ್ರಸ್ತಾವನೆಯೂ ಈ ಮಸೂದೆಯಲ್ಲಿ ಇರಬಹುದು ಎಂಬ ಅಂದಾಜಿನ ಕಾರಣದಿಂದಲೇ ವಿವಾದ ಮತ್ತಷ್ಟು ಹೆಚ್ಚಾಗಿದೆ.
ನಾಳಿನ ಲೋಕಸಭಾ ಚರ್ಚೆಯ ಬಳಿಕ ಈ ಮಸೂದೆಗೆ ಹಂಗಾಮಿ ನಿರ್ಧಾರ ಬರಬಹುದು. ಏಪ್ರಿಲ್ 4ರೊಳಗೆ ರಾಜ್ಯಸಭೆಯಲ್ಲಿ ತಲುಪಿದರೆ ಈ ಮಸೂದೆ ಶೀಘ್ರವೇ ಕಾನೂನಾಗಿ ಜಾರಿಗೆ ಬರುವ ಸಾಧ್ಯತೆ ಇದೆ.