ಲೋಕಸಭೆಯಲ್ಲಿ ಏಪ್ರಿಲ್ 2ರಂದು ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸಿದೆ. ಈ ಮಸೂದೆ ಹಲವು ದಿನಗಳಿಂದ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಕೇಂದ್ರ ಸಚಿವ ಕಿರೆಣ್ ರಿಜಿಜು ಈ ಮಸೂದೆಯನ್ನು ಮಂಡಿಸಿದ ಸಂದರ್ಭದಲ್ಲಿ ವಿರೋಧ ಪಕ್ಷಗಳು ಗದ್ದಲ ಎಬ್ಬಿಸಿದರೂ, ಎನ್‌ಡಿಎ ಸಂಸದರು ಬೆಂಚ್ ತಟ್ಟುವ ಮೂಲಕ ಮಸೂದೆಯನ್ನು ಬೆಂಬಲಿಸಿದರು. ಈ ತಿದ್ದುಪಡಿ ಮಸೂದೆಯ ಮುಖ್ಯ ಅಂಶವೆಂದರೆ, ಸರ್ಕಾರದ ಯಾವುದೇ ಆಸ್ತಿಯನ್ನೂ ವಕ್ಫ್ ಆಸ್ತಿ ಎಂದು ಪರಿಗಣಿಸುವುದಿಲ್ಲ ಎಂದು ಹೇಳಿದೆ. ಇದನ್ನು ಅನುಷ್ಠಾನಕ್ಕೆ ತರಲು ಸರ್ಕಾರ ಹಲವು ನಿರ್ಧಾರಗಳನ್ನು ತೆಗೆದುಕೊಂಡಿದೆ.
1. ಸರ್ಕಾರಿ ಆಸ್ತಿ ವಕ್ಫ್‌ಗೆ ಸೇರಿಸುವುದಿಲ್ಲ:
ಮಸೂದೆ ಅನುಸಾರ, ಈ ಕಾಯ್ದೆ ಜಾರಿಗೆ ಬರುವ ಮೊದಲು ಅಥವಾ ನಂತರ ಸರ್ಕಾರದ ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಲಾಗದು. ಇದರಿಂದಾಗಿ, ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಆಸ್ತಿಗಳನ್ನು ವಕ್ಫ್ ಆಸ್ತಿ ಎಂದು ಗುರುತಿಸುವ ವಿವಾದಗಳಿಗೆ ಅಂತ್ಯವಾಗಲಿದೆ.
2. ಆಸ್ತಿ ವಿವಾದಗಳ ತೀರ್ಮಾನ:
ಸರ್ಕಾರದ ಆಸ್ತಿಯು ವಕ್ಫ್ ಆಸ್ತಿಯೇ ಅಥವಾ ಅಲ್ಲವೇ ಎಂಬ ಪ್ರಶ್ನೆ ಉದ್ಭವಿಸಿದರೆ, ಅದನ್ನು ಸ್ಥಳೀಯ ಕಲೆಕ್ಟರ್ ಪರಿಶೀಲಿಸುತ್ತಾರೆ. ಅವರು ಸೂಕ್ತ ತನಿಖೆ ನಡೆಸಿ, ಆಸ್ತಿಯ ಮಾಲಿಕತ್ವದ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ. ನಂತರ, ಅವರ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ.
3. ಕಲೆಕ್ಟರ್ ಅಧಿಕಾರ ಮತ್ತು ನಿರ್ಧಾರ:
ಕಲೆಕ್ಟರ್ ತನಿಖೆಯ ನಂತರ ಆಸ್ತಿಯನ್ನು ಸರ್ಕಾರಿ ಆಸ್ತಿಯೆಂದು ಘೋಷಿಸಿದರೆ, ಅದನ್ನು ಕಂದಾಯ ದಾಖಲೆಗಳಲ್ಲಿ ತಿದ್ದುಪಡಿ ಮಾಡಲಾಗುತ್ತದೆ. ಈ ತಿದ್ದುಪಡಿ ಮಾಹಿತಿಯನ್ನು ರಾಜ್ಯ ಸರ್ಕಾರಕ್ಕೆ ತಿಳಿಸಲಾಗುತ್ತದೆ.
4. ರಾಜ್ಯ ಸರ್ಕಾರದ ನಿರ್ಧಾರ:
ರಾಜ್ಯ ಸರ್ಕಾರ, ಕಲೆಕ್ಟರ್ ವರದಿಯನ್ನು ಪರಿಶೀಲಿಸಿದ ನಂತರ, ಅದನ್ನು ಅಧಿಕೃತವಾಗಿ ದಾಖಲಾತಿಗಳಲ್ಲಿ ತಿದ್ದುಪಡಿ ಮಾಡಲು ನಿರ್ದೇಶಿಸುತ್ತದೆ. ಈ ಮೂಲಕ ಯಾವುದೇ ಸರಕಾರಿ ಆಸ್ತಿಯು ವಕ್ಫ್ ಆಸ್ತಿಯಾಗಿ ಪರಿಗಣಿಸಬಾರದು ಎಂಬ ನಿಟ್ಟಿನಲ್ಲಿ ಸ್ಪಷ್ಟತೆ ತರಲಾಗುತ್ತದೆ.
ಈ ಮಸೂದೆ ಅಂಗೀಕಾರವಾದರೆ, ಸರಕಾರಿ ಆಸ್ತಿಗಳನ್ನು ವಕ್ಫ್ ಆಸ್ತಿಗಳೆಂದು ಪರಿಗಣಿಸುವ ಹಳೆಯ ವಿವಾದಗಳಿಗೆ ಅಂತ್ಯವಾಗುತ್ತದೆ. ಇದರಿಂದ ಸರ್ಕಾರದ ಆಸ್ತಿಗಳ ಮೇಲಿನ ಹಕ್ಕು ಸ್ಪಷ್ಟವಾಗಿ ನಿರ್ಧಾರವಾಗಲಿದೆ ಮತ್ತು ಮಾಲಿಕತ್ವ ಸಂಬಂಧಿತ ಗೊಂದಲಗಳು ಕಡಿಮೆಯಾಗಲಿವೆ. ಸರ್ಕಾರದ ಈ ನಿರ್ಧಾರಕ್ಕೆ ಹಲವು ಪಕ್ಷಗಳು ಬೆಂಬಲ ಸೂಚಿಸಿದರೆ, ಇನ್ನು ಕೆಲವು ವಿರೋಧ ವ್ಯಕ್ತಪಡಿಸುತ್ತಿವೆ. ದೇಶದ ಕಾನೂನು ವ್ಯವಸ್ಥೆಯಲ್ಲಿ ಇದು ಮಹತ್ವದ ಬದಲಾವಣೆ ತರಲಿದೆ.