ಭೋಪಾಲ್: ಮಿಂದೋರಿ ಕಾಡಿನಲ್ಲಿ ನಿಂತಿದ್ದ ಕಾಲಿನಲ್ಲಿ ಬರೋಬ್ಬರಿ 40 ಕೋಟಿ ರೂ. ಮೌಲ್ಯದ 52 ಕೆಜಿ ಚಿನ್ನವನ್ನು ಕಾರ್ಯಾಚರಣೆ ನಡೆಸಿ ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಸಾಮಾನ್ಯವಾಗಿ ಐಟಿ ರೈಡ್ಆಗಾಗ ನಡೆಯುತ್ತಿರುತ್ತೆ. ಇನ್ನು ಚುನಾವಣೆ ಸಂದರ್ಭದಲ್ಲಿ ಈ ಆದಾಯ ತೆರಿಗೆ ಇಲಾಖೆ ದಾಳಿ ನಡೆಸುತ್ತಲೇ ಇರುತ್ತದೆ. ಇನ್ನು ಭೋಪಾಲ್ನಲ್ಲಿ ಕಳೆದ ಮೂರು ದಿನಗಳಿಂದ ಆದಾಯ ತೆರಿಗೆ ಇಲಾಖೆಯಿಂದ ದಾಳಿ ನಡೆಯುತ್ತಲೇ ಇದೆ. ಇದೀಗ ಭೋಪಾಲ್ನ ರಾತಿಬಾದ್ ಪ್ರದೇಶದ ಮೆಂಡೋರಾ ಅರಣ್ಯದಲ್ಲಿ ಅಧಿಕಾರಿಗಳು ಅಪಾರ ಪ್ರಮಾಣದ ಚಿನ್ನ ಮತ್ತು ನಗದನ್ನು ಹೊಂದಿರುವ ವಾಹನವನ್ನು ಪತ್ತೆ ಮಾಡಿದ್ದಾರೆ.
ಇನ್ನೋವಾ ಕ್ರಿಸ್ಟಾ ಎಂದು ಗುರುತಿಸಲಾದ ವಾಹನದಲ್ಲಿ ಇದೀಗ ಐಟಿ ಅಧಿಕಾರಿಗಳು ಸುಮಾರು 42 ಕೋಟಿ ಮೌಲ್ಯದ ಅಂದಾಜು 52 ಕಿಲೋಗ್ರಾಂಗಳಷ್ಟು ಚಿನ್ನವನ್ನು ಹೊಂದಿರುವ ಎರಡು ಬ್ಯಾಗ್ಗಳು ಮತ್ತು ಹೆಚ್ಚುವರಿಯಾಗಿ 10 ಕೋಟಿ ರೂಪಾಯಿ ನಗದು ಹಣವನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಭೋಪಾಲ್ನಲ್ಲಿ ಐಟಿ ದಾಳಿ ನಡೆಯುತ್ತಿದ್ದು, ಈ ವೇಳೆ ಇನ್ನೋವಾ ಕ್ರಿಸ್ಟಾ ಕಾರಿನಲ್ಲಿ52 ಕೆಜಿ ಚಿನ್ನ ಮತ್ತು 10 ಕೋಟಿಯಷ್ಟು ನಗದು ಹಣ ಪತ್ತೆಯಾಗಿದೆ ಎಂದು ವರದಿಯಾಗಿದೆ. ಇನ್ನು ಈ ಚಿನ್ನ ಮತ್ತು ಹಣ ಯಾರೋ ಉದ್ದೇಶಪೂರ್ವಕವಾಗಿ ಬಿಟ್ಟು ಹೋಗಿರಬಹುದು ಎನ್ನಲಾಗಿದೆ. ಐಟಿ ದಾಳಿ ಸಮಯದಲ್ಲಿ ಸಿಕ್ಕಿಬೀಳಬಾರದೆಂಬ ಕಾರಣದಿಂದ ಈ ರೀತಿ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ. ಇನ್ನು ಇದು ಮಾಜಿ ಕಾನ್ಸ್ಟೆಬಲ್ ಸೌರಭ್ ಶರ್ಮಾ ಅವರ ಪಾಲುದಾರ ಚೇತನ್ ಗೋರಾ ಅವರ ಕಾರು ಎನ್ನಲಾಗುತ್ತಿದೆ.
ಇನ್ನು ಈ ಬಾರಿ ಉದ್ಯಮಗಳ ಮೇಲೆ ದಾಳಿ ನಡೆಸಿದ್ದು, ಆದಾಯ ತೆರಿಗೆ ಇಲಾಖೆ ತಂಡವು ರಾಜೇಶ್ ಶರ್ಮಾ ಹಾಗೂ ವಿನೋದ್ ಅಗರ್ವಾಲ್, ದೀಪಕ್ ಭಾವಸರ್ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ವಿಶ್ವನಾಥ್ ಸಾಹು ಅವರ ಮನೆಗಳ ಮೇಲೂ ದಾಳಿ ನಡೆಸಿದೆ. ಇವರೆಲ್ಲರೂ ಭೂಮಿ ಮತ್ತು ಆಸ್ತಿ ವ್ಯವಹಾರದೊಂದಿಗೆ ಸಂಬಂಧ ಹೊಂದಿದ್ದಾರೆ. ದೀಪಕ್ ಭಾವಸರ್ ಮಾಜಿ ಸಚಿವರೊಬ್ಬರ ಆಪ್ತರು ಎಂದೂ ಹೇಳಲಾಗುತ್ತಿದೆ.
ಐಟಿ ರೈಡ್ ವೇಳೆಯೇ ಇಂತಹ ಭಾರೀ ಪ್ರಮಾಣದ ಚಿನ್ನ ಮತ್ತು ನಗದು ಪತ್ತೆಯಾಗಿರುವುದು ದಾಳಿಗೆ ಹೊಸ ಟ್ವಿಸ್ಟ್ ನೀಡಿದಂತಾಗಿದೆ. ಸದ್ಯ ಅಧಿಕಾರಿಗಳು ಈ ಚಿನ್ನ ಮತ್ತು ನಗದಿನೊಂದಿಗೆ ಅರಣ್ಯದಲ್ಲಿ ವಾಹನ ಯಾರು ಇಟ್ಟಿರಬಹುದೆಂದು ತನಿಖೆ ಆರಂಭಿಸಿದ್ದಾರೆ.