ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದ್ದು, ದೇಶ ಕಂಡ ಅಪ್ರತಿಮ ನಾಯಕನಿಗೆ ಜನರು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಎರಡು ಬಾರಿ ಪ್ರಧಾನಿಯಾಗಿ ದೇಶವನ್ನು ಯಶಸ್ವಿಯಾಗಿ ಮುನ್ನಡೆಸಿದ ಖ್ಯಾತಿ ಹೊಂದಿರುವ ಮನಮೋಹನ್ ಸಿಂಗ್ ಅವರ ನಿಧನಕ್ಕೆ ರಾಜಕೀಯ, ಸಿನಿಮಾ. ಕ್ರೀಡೆ ಸೇರಿದಂತೆ ಅನೇಕ ಕ್ಷೇತ್ರದ ಗಣ್ಯರು ಕಂಬನಿ ಮಿಡಿಯುತ್ತಿರುವ ನಡುವೆಯೇ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗುರುವಾರ ರಾತ್ರಿ ನವದೆಹಲಿಯ ಏಮ್ಸ್ ನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಅಂತ್ಯಕ್ರಿಯೆ ನೆರವೇರಿಸಲು ಮತ್ತು ಸ್ಮಾರಕ ನಿರ್ಮಿಸಲು ಕಾಂಗ್ರೆಸ್ ಬಿಜೆಪಿ ಸರ್ಕಾರಕ್ಕೆ ಮನವಿ ಮಾಡಿತ್ತು. ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ನಡೆಯುವ ಸ್ಥಳದಲ್ಲೇ ಸ್ಮಾರಕ ನಿರ್ಮಿಸಲು ಅವಕಾಶ ನೀಡಬೇಕೆಂದು ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದರು. ಆದರೆ, ಸ್ಮಾರಕಕ್ಕೆ ಬೇರೆ ಸ್ಥಳ ನಿಗದಿಪಡಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿತ್ತು. ಇದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ, ಇದೀಗ ಕಾಂಗ್ರೆಸ್ ತನ್ನ ಪಕ್ಷದ ನಾಯಕರ ವಿಚಾರದಲ್ಲಿ ತಳೆಯುವ ಧೋರಣೆಯ ಬಗ್ಗೆ ಸ್ವಪಕ್ಷೀಯರಿಂದಲೇ ಆಕ್ಷೇಪ ವ್ಯಕ್ತವಾಗಿದೆ. ಕಾಂಗ್ರೆಸ್ ನಾಯಕ ಹಾಗೂ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನರಾದಾಗ ಕಾಂಗ್ರೆಸ್ ಸಿಡಬ್ಲುಸಿ ಸಭೆ ಕರೆದು, ಸಂತಾಪ ಸೂಚಕ ಸಭೆಯನ್ನು ನಡೆಸುವ ಔದಾರ್ಯವನ್ನೂ ತೋರಲಿಲ್ಲ ಎಂದು ಪ್ರಣಬ್ ಮುಖರ್ಜಿಯ ಮಗಳು ಶರ್ಮಿಷ್ಠಾ ಆರೋಪಿಸಿದ್ದಾರೆ.
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಅವರು ತಮ್ಮ ತಂದೆಯ ನಿಧನದ ನಂತರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯನ್ನು ಕರೆಯಲು ಕಾಂಗ್ರೆಸ್ ವಿಫಲವಾಗಿತ್ತು ಎಂದು ಟೀಕಿಸಿದ್ದಾರೆ. ತನ್ನ ತಂದೆ ಆಗಸ್ಟ್ 2020ರಲ್ಲಿ ನಿಧನರಾದಾಗ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಂತಾಪ ಸೂಚಕ ಸಭೆಯನ್ನು ಕೂಡ ಕರೆಯಲಿಲ್ಲ ಎಂದು ಅವರು ಹೇಳಿದ್ದಾರೆ. ಆ ಸಮಯದಲ್ಲಿ ಕಾಂಗ್ರೆಸ್ ನಾಯಕರು ಈ ವಿಷಯದಲ್ಲಿ ತನ್ನನ್ನು ದಾರಿ ತಪ್ಪಿಸಿದ್ದರು ಎಂದು ಕೂಡ ಅವರು ಆರೋಪಿಸಿದ್ದಾರೆ.
ನನ್ನ ತಂದೆ ನಿಧನರಾದಾಗ ಕಾಂಗ್ರೆಸ್ ಪಕ್ಷವು ಕಾರ್ಯಕಾರಿ ಸಮಿತಿ ಹಾಗೂ ಸಂತಾಪ ಸೂಚಕ ಸಭೆಯನ್ನು ಕರೆಯಲಿಲ್ಲ. ಈ ಬಗ್ಗೆ ಕೇಳಿದಾಗ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ರಾಷ್ಟ್ರಪತಿಯಾಗಿದ್ದವರಿಗೆ ನಾವು ಸಭೆ ನಡೆಸುವುದಿಲ್ಲ ಎಂದು ಹೇಳಿದರು. ನನ್ನ ತಂದೆಯವರು ಕಾಂಗ್ರೆಸಸ್ಸಿನಲ್ಲಿದ್ದಾಗ ಕೆ.ಆರ್. ನಾರಾಯಣನನ್ ಅವರು ನಿಧನರಾಗಿದ್ದರು. ಸಂತಾಪ ಸಭೆಯನ್ನು ಖುದು ನನ್ನ ತಂದೆಯವರೇ ಆಯೋಜನೆ ಮಾಡಿದ್ದರು. ಈ ವಿಚಾರವನ್ನು ನಾನು ನ್ನ ತಂದೆಯಿಂದಲೇ ತಿಳಿದುಕೊಂಡೆ.
ಇದಲ್ಲದೆ ಮನಮೋಹನ್ ಸಿಂಗ್ ಅವರ ಸ್ಮಾರಕ ನಿರ್ಧಾರದ ವಿಚಾರವನ್ನು ಸ್ವಾಗತಿಸಿರುವ ಶರ್ಮಿಷ್ಠಾ ಅವರಿಗೆ ಭಾರತ ರತ್ನ ನೀಡಬೇಕು ಎಂದು ಆಗ್ರಹಿಸಿದ್ದಾರೆ. ನನ್ನ ತಂದೆಯವರು ರಾಷ್ಟ್ರಪತಿಯಾಗಿದ್ದಾಗ ಅವರಿಗೆ ಭಾರತ ರತ್ನ ನೀಡಲು ಬಯಸಿದ್ದರು. ಆದರೆ, ಅದು ಆಗಲಿಲ್ಲ. ಈಗ ಅದರ ಬಗ್ಗೆ ಮಾತನಾಡುವುದು ಬೇಡ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಟ್ವೀಟ್ ಮಾಡಿದ್ದಾರೆ.