ಜೈಲರ್ ಸಿನಿಮಾದಲ್ಲಿ ವಿಲನ್ ಆಗಿ ನಟಿಸಿದ್ದ ವಿನಾಯಕನ್ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಕುಡಿದು ಟೈಟ್ ಆಗಿ ಹಲವು ಬಾರಿ ನಟ ಗಲಾಟೆ ಮಾಡಿ ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸಿದ ಆರೋಪ ಕೂಡ ಇದೆ. ಈ ಮುಂಚೆ ಹೈದರಾಬಾದ್ ಪೊಲೀಸರು ವಿನಾಯಕನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಇದೀಗ ಮತ್ತೆ ನಟ ಅಶಿಸ್ತಿನ ವರ್ತನೆಯನ್ನು ತೋರಿದ್ದಾರೆ. ತಮ್ಮ ಮನೆಯ ಬಾಲ್ಕನಿಯಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ. ನೆರೆಹೊರೆಯವರಿಗೆ ಅಶ್ಲೀಲ ಪದಗಳಿಂದ ನಿಂದಿಸುತ್ತಾ ನೆಲದ ಮೇಲೆ ಹೊರಳಾಡಿದ್ದಾರೆ. ಈಗ ಈ ವಿಡಿಯೋ ಭಾರಿ ವೈರಲ್ ಆಗಿದೆ.
ಮೈ ಮೇಲೆ ಬಟ್ಟೆ ಇಲ್ಲದ ಅವತಾರದಲ್ಲಿ ವಿನಾಯಕನ್ ಅವರು ಕಾಣಿಸಿಕೊಂಡಿದ್ದಾರೆ. ನೆರೆಮನೆಯವರಿಗೆ ಅಶ್ಲೀಲವಾಗಿ ಬೈಯ್ದಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಅವರ ಅಶ್ಲೀಲ ವರ್ತನೆಯನ್ನು ಕಂಡು ನೆಟ್ಟಿಗರು ಖಾರವಾಗಿ ಕಮೆಂಟ್ ಮಾಡುತ್ತಿದ್ದಾರೆ. ವಿನಾಯಕನ್ ಅವರನ್ನು ಚಿತ್ರರಂಗದಿಂದ ಹೊರಗೆ ಹಾಕಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.
ವಿನಾಯಕನ್ ಅವರು ಮನೆಯ ಬಾಲ್ಕನಿಯಲ್ಲಿ ನಿಂತು ನೆರೆಮನೆಯವರಿಗೆ ಬೈಯ್ದಿದ್ದಾರೆ. ಅವಾಚ್ಯ ಪದಗಳನ್ನು ಅವರು ಬಳಸಿದ್ದಾರೆ. ಲುಂಗಿ ಧರಿಸಿ ಜಗಳಕ್ಕೆ ಬಂದಿದ್ದ ಅವರಿಗೆ ಸರಿಯಾಗಿ ನಿಂತುಕೊಳ್ಳಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಸೊಂಟದ ಮೇಲಿದ್ದ ಲುಂಗಿ ಉದುರಿ ಹೋದರೂ ಅರಿವಿಲ್ಲದ ಹಾಗೆ ಅವರು ಜಗಳ ಮಾಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ.
ಅಂದ್ಹಾಗೇ ಸದಾ ವಿವಾದಗಳಿಂದ ಸುದ್ದಿಯಾಗುವ ವಿನಾಯಕನ್ತಮ್ಮ ಚಿತ್ರ ಜೀವನವನ್ನು ಡ್ಯಾನ್ಸರ್ ಆಗಿ ಶುರು ಮಾಡಿದ್ದರು. ಬ್ಲ್ಯಾಕ್ ಮರ್ಕುರಿ ಎಂಬ ಡ್ಯಾನ್ಸ್ ತಂಡವನ್ನು ಮುನ್ನಡೆಸುತ್ತಿದ್ದ ವಿನಾಯಕನ್ ಆ ನಂತರ ‘ಮಾಂತ್ರಿಕಮ್’ ಎನ್ನುವ ಚಿತ್ರದಲ್ಲಿ ಮೊದಲಿಗೆ ಬಣ್ಣ ಹಚ್ಚಿದ್ದರು. ‘ಸ್ಟಾಪ್ ವೈಲೆನ್ಸ್’, ‘ವೆಲ್ಲಿತಿರಾ’, ‘ಚಾತಿಕಥಾ ಚಂತು’, ‘ಛೋಟಾ ಮುಂಬೈ’ ಮತ್ತು ‘ತೊಟ್ಟಪ್ಪನ್’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದರು. ಮಲಯಾಳಂ ಬಿಟ್ಟರೆ ಕೆಲ ತಮಿಳು ಸಿನಿಮಾಗಳಲ್ಲಿ ಕೂಡ ಅಬ್ಬರಿಸಿರುವ ವಿನಾಯಕನ್ಗೆ ಧನುಷ್ ಅಭಿನಯದ ‘ಮರಿಯಾನ್’ ತಮಿಳುನಾಡಿನಲ್ಲಿ ಹೆಸರು ತಂದು ಕೊಟ್ಟಿತ್ತು. ‘ತಿಮಿರು’, ‘ಕಾಳೈ’, ‘ಸಿರುತೈ’ ‘ಸಿಲಂ ಪಟ್ಟಂ’, ವಿನಾಯಕನ್ ಅಭಿನಯದ ಕೆಲ ಪ್ರಮುಖ ತಮಿಳು ಚಿತ್ರಗಳು.
ಇನ್ನು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಚಿತ್ರದಲ್ಲಿ ಪ್ರಮುಖ ವಿಲನ್ ಪಾತ್ರದಲ್ಲಿ ಅಬ್ಬರಿಸಿದ್ದ ವಿನಾಯಕನ್, ವರ್ಮಾ ಪಾತ್ರದ ಮೂಲಕ ಜನ ಮನ ಗೆದ್ದಿದ್ದರು. ಇಂಥಾ ಪ್ರತಿಭಾವಂತ ನಟ ಮತ್ತು ಡ್ಯಾನ್ಸರ್ ಕುಡಿತಕ್ಕೆ ದಾಸನಾಗಿ ಕಂಡ ಕಂಡಲೆಲ್ಲ ರಂಪ-ರಾಮಾಯಣ ಮಾಡಿಕೊಂಡು ಸುದ್ದಿಯಾಗುತ್ತಿರುವುದು ದುರಂತ.
‘ಒಬ್ಬ ವ್ಯಕ್ತಿಯಾಗಿ, ಸಿನಿಮಾ ನಟನಾಗಿ ನನಗೆ ಎಷ್ಟೋ ವಿಷಯಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ನನ್ನಿಂದ ನೆಗೆಟಿವ್ ಎನರ್ಜಿ ಉಂಟಾಗಿದ್ದಕ್ಕೆ ನನ್ನ ಕಡೆಯಿಂದ ಜನರ ಬಳಿ ಕ್ಷಮೆ ಕೇಳುತ್ತೇನೆ. ಚರ್ಚೆ ಮುಂದುವರಿಯಲಿ’ ಎಂದು ವಿನಾಯಕನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ:https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ:https://chat.whatsapp.com/HWayJDSBf9aI06q6jplPgc