ವಿಶ್ವ ಚೆಸ್ ಚಾಂಪಿಯನ್ ಡಿ.ಗುಕೇಶ್ ಗುರುವಾರ ರಜನಿಕಾಂತ್ ಮತ್ತು ‘ಅಮರನ್’ ನಟ ಶಿವಕಾರ್ತಿಕೇಯನ್ ಅವರನ್ನು ಭೇಟಿಯಾಗಿದ್ದಾರೆ. ಭಾರತಕ್ಕೆ ಹೆಮ್ಮೆ ತಂದಿರುವ ಗುಕೇಶ್ ಸಾಧನೆಯನ್ನು ಕೊಂಡಾಡಿ ತಲೈವಾ ಮತ್ತು ಶಿವಕಾರ್ತಿಕೇಯನ್ ಶುಭಹಾರೈಸಿದ್ದಾರೆ.
ಗುಕೇಶ್ ಸಾಧನೆ ಕೊಂಡಾಡಿದ ಗಣ್ಯರು
8ನೇ ವಯಸ್ಸಿನಲ್ಲಿ ವಿಶ್ವ ಚೆಸ್ ಚಾಂಪಿಯನ್ ಪಟ್ಟ ಗೆದ್ದ ಗುಕೇಶ್ಗೆ ಪ್ರಧಾನಿ ಮೋದಿಯಿಂದ ಹಿಡಿದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಸೇರಿದಂತೆ ಹಲವು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ರು. ತಮಿಳುನಾಡು ಸರ್ಕಾರವು ವಿಶ್ವ ಚೆಸ್ ಚಾಂಪಿಯನ್ ಗುಕೇಶು ಅವರನ್ನ ಚೆನ್ನೈನ ಕಲೈವಾನರ್ ಅರೆನಾದಲ್ಲಿ ಸನ್ಮಾನಿಸಿ ರೂ.5 ಕೋಟಿ ಬಹುಮಾನವನ್ನು ನೀಡಿದ್ರು. ಇದೀಗ ಸಿನಿಮಾ ನಟರು ಕೂಡ ಗುಕೇಶ್ಗೆ ಸನ್ಮಾನ ಮಾಡಿದ್ದಾರೆ.
ಗುಕೇಶ್ಗೆ ಗಿಫ್ಟ್ ಕೊಟ್ಟ ರಜನಿಕಾಂತ್!
ಗುಕೇಶ್ ತಮ್ಮ ಪೋಷಕರೊಂದಿಗೆ ರಜನಿಕಾಂತ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ, ತಲೈವಾ ಗುಕೇಶ್ಗೆ ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ. ಪುಸ್ತಕವೊಂದನ್ನು ಗಿಫ್ಟ್ ಆಗಿ ನೀಡಿದ್ದಾರೆ ತಲೈವಾ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ‘ಸೂಪರ್ ಸ್ಟಾರ್ ರಜನಿಕಾಂತ್ ಅವರ ಹಾರೈಕೆಗಳಿಗೆ ಧನ್ಯವಾದಗಳು. ನಮ್ಮನ್ನು ಮನೆಗೆ ಆಹ್ವಾನಿಸಿ, ನಮ್ಮೊಂದಿಗೆ ಅಮೂಲ್ಯವಾದ ಸಮಯ ಕಳೆದು, ಜ್ಞಾನ ಹಂಚಿಕೊಂಡಿದ್ದಕ್ಕೆ ಧನ್ಯವಾದ ಸರ್’ ಎಂದು ಗುಕೇಶ್ ಬರೆದುಕೊಂಡಿದ್ದಾರೆ.
ವಾಚ್ ಗಿಫ್ಟ್ ಕೊಟ್ಟ ಶಿವಕಾರ್ತಿಕೇಯನ್!
ಜೊತೆಗೆ ತಮಿಳು ನಟ ಶಿವಕಾರ್ತಿಕೇಯನ್ ಅವರು ಗುಕೇಶ್ ಅವರನ್ನ ಭೇಟಿಯಾಗಿ ಅಭಿನಂದನೆ ಹೇಳಿದ್ರು. ಗುಕೇಶ್ ಅವರು ತಮ್ಮ ಬಾಲ್ಯದಿಂದಲೂ ಶಿವಕಾರ್ತಿಕೇಯನ್ ಅವರ ದೊಡ್ಡ ಅಭಿಮಾನಿ ಎಂದು ತಿಳಿದ ಶಿವಕಾರ್ತಿಕೇಯನ್, ಗುಕೇಶ್ ಅವರಿಗೆ ಸರ್ಪ್ರೈಸ್ ನೀಡಿದ್ರು. ಚೇಸ್ ಚಾಂಪಿಯನ್ನನ್ನು ಭೇಟಿಯಾಗಿ ದುಬಾರಿ ವಾಚ್ ಅನ್ನು ಉಡುಗೊರೆಯಾಗಿ ನೀಡಿದ್ರು. ಇಬ್ಬರು ಸ್ಟಾರ್ ಜೊತೆಗಿನ ಗುಕೇಶ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.