ಮಾಜಿ ಸಂಸದೆ ಸುಮಲತಾ, ಎಸ್.ಎಂ. ಕೃಷ್ಣ ಅವರ ಅಂತಿಮ ದರ್ಶನ ಪಡೆದರು. “ಎಸ್.ಎಂ. ಕೃಷ್ಣರು ಕೇವಲ ರಾಜಕಾರಣಿ ಮಾತ್ರವಲ್ಲ, ರಾಜ್ಯ ರಾಜಕೀಯದ ಆಧುನೀಕರಣದ ದಿಗ್ವಿಜಯ ಶಿಲ್ಪಿಯಾಗಿದ್ದರು. ಅವರು ನಮ್ಮ ರಾಜ್ಯಕ್ಕೆ ಘನತೆಯನ್ನು ತಂದುಕೊಟ್ಟಿದ್ದಾರೆ. ಅವರಂತಹ ಡಿಗ್ನಿಫೈಡ್ ರಾಜಕಾರಣಿಯನ್ನು ಇನ್ನು ಎಂದಿಗೂ ಕಾಣಲು ಸಾಧ್ಯವಿಲ್ಲ. ಮಂಡ್ಯದ ಹೆಮ್ಮೆಯ ಸುಪುತ್ರರಾಗಿರುವ ಅವರು ಬೆಂಗಳೂರು ‘ನಂ. 1’ ಪಟ್ಟವನ್ನು ಗಳಿಸಲು ಎಷ್ಟು ಶ್ರಮಪಟ್ಟರೂ ಕಡಿಮೆಯೇ. ಜನಪರ ಕಾಳಜಿ, ಆಧುನಿಕೀಕರಣ, ಮತ್ತು ಪ್ರಗತಿ ಎಂಬ ಮೂರು ಪಾಯಿಂಟ್ಸ್ನ್ನ ಇಟ್ಟುಕೊಂಡು, ರಾಜ್ಯವನ್ನು ಅಭಿವೃದ್ಧಿ ಹಾದಿಗೆ ಕರೆದೊಯ್ದ ದಿಗ್ಗಜ ಎಂದು ಭಾವುಕರಾದರು.
ಎಸ್.ಎಂ. ಕೃಷ್ಣ ಅವರು ಅಂಬರೀಶ್ ಅವರನ್ನು ಮತ್ತೆ ಕಾಂಗ್ರೆಸ್ಗೆ ಕರೆತರುವ ಪ್ರಮುಖ ಕಾರಣಕರ್ತರು. ನನ್ನ ರಾಜಕೀಯ ಪ್ರವೇಶಕ್ಕೂ ಅವರ ಆಶೀರ್ವಾದವೇ ಬೆನ್ನೆಲುಬಾಗಿತ್ತು. ಅವರು ರಾಜ್ಯಕ್ಕೆ ನೀಡಿದ ಘನತೆ ಮತ್ತು ಗೌರವವನ್ನು ಮರೆಯಲು ಸಾಧ್ಯವಿಲ್ಲ. ರಾಜಕಾರಣದಲ್ಲಿ ವೃತ್ತಿಪರತೆ ಮತ್ತು ಚಾಕಚಕ್ಯತೆ ಎಂಬ ಮಾತಿನ ಅರ್ಥವೇ ಎಸ್.ಎಂ ಕೃಷ್ಣ ಅವರು ಎಂದು ಅವರು ಸ್ಮರಿಸಿದರು.