ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಿಯೇ ಹೋದರೂ ಅವರ ಕಾಲು ಮುಟ್ಟಿ ನಮಸ್ಕರಿಸಲು ಹಲವರು ಪ್ರಯತ್ನ ಮಾಡುತ್ತಾರೆ. ಆದರೆ ಮೋದಿ ಅದನ್ನು ತಡೆಯುತ್ತಾರೆ. ದೂರದಿಂದಲೇ ನಮಸ್ಕರಿಸುವವರಿಗೆ ಕೊರತೆ ಇಲ್ಲ. ಆದರೆ ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಲು ಮುಟ್ಟಿ ನಮಸ್ಕರಿಸಲು ಮುಂದಾಗಿದ್ದಾರೆ. ವಿಶೇಷವೆಂದರೆ, ನಿತೀಶ್ ಕುಮಾರ್ ಅವರು ಪ್ರಧಾನಿ ಮೋದಿ ಅವರ ಕಾಲಿಗೆ ನಮಸ್ಕರಿಸಲು ಮುಂದಾಗಿರುವುದು ಈ ವರ್ಷದಲ್ಲಿ ಇದು ಮೂರನೇ ಬಾರಿ. ವೇದಿಕೆಯಲ್ಲಿ 74 ವರ್ಷದ ಮೋದಿ ಅವರ ಕಡೆ ಕೈ ಮುಗಿದು ನಡೆದ 73 ವರ್ಷದ ನಿತೀಶ್, ಅವರ ಪಾದ ಸ್ಪರ್ಶಿಸಲು ಪ್ರಯತ್ನಿಸುತ್ತಾರೆ. ಆದರೆ ಮೋದಿ ಅದನ್ನು ಮಧ್ಯದಲ್ಲೇ ತಡೆಯುತ್ತಾರೆ. ಹಸ್ತಲಾಘವ ಮಾಡಿ ಅಪ್ಪಿಕೊಳ್ಳುತ್ತಾರೆ.
ನಿತೀಶ್ ಕುಮಾರ್ ಅವರು ಮೋದಿ ಅವರ ಕಾಲಿಗೆ ಎರಗಲು ಪ್ರಯತ್ನಿಸುತ್ತಿರುವುದು ಇದು ಮೊದಲ ಸಲವೇನಲ್ಲ. ಸಂಸತ್ನ ಸೆಂಟ್ರಲ್ ಹಾಲ್ನಲ್ಲಿ ಜೂನ್ನಲ್ಲಿ ಕಾರ್ಯಕ್ರಮದ ವೇಳೆ ನಿತೀಶ್ ಅವರು ಮೋದಿ ಅವರ ಪಾದ ಸ್ಪರ್ಶಿಸಿದ್ದರು. ಅದಕ್ಕೂ ಮುನ್ನ ನವಾಡದಲ್ಲಿ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಏಪ್ರಿಲ್ ತಿಂಗಳಲ್ಲಿ ಮೋದಿ ಅವರ ಕಾಲಿಗೆ ನಮಸ್ಕರಿಸಿದ್ದರು.
ಇದನ್ನು ಓದಿ : 3 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಯಾರಿಗೆ ಗೆಲುವು? ತ್ರಿಮೂರ್ತಿಗಳಿಗೆ ತ್ರಿವಳಿ ಸವಾಲ್!
ನರೇಂದ್ರ ಮೋದಿ ಅವರಿಗೆ 74 ವರ್ಷ. ನಿತೀಶ್ ಅವರಿಗೆ 73 ವರ್ಷ. ಕೇವಲ ಒಂದು ವರ್ಷ ದೊಡ್ಡವರಾದ ಮೋದಿ ಅವರಿಗೆ ಪದೇ ಪದೇ ಕಾಲು ಮುಟ್ಟಿ ನಮಸ್ಕರಿಸಲು ಯತ್ನಿಸುತ್ತಿರುವುದು ನೋಡಿ ರಾಜಕೀಯ ವಿಶ್ಲೇಷಕರು ಬೇರೆಯದೇ ರೀತಿಯಲ್ಲಿ ಅರ್ಥೈಸುತ್ತಿದ್ದಾರೆ.