ಪಶ್ಚಿಮ ಬಂಗಾಳದ ಬಸಿರ್ಹತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಂದೇಶ್ಖಾಲಿ ಸಂತ್ರಸ್ತೆ ರೇಖಾ ಪಾತ್ರಾ ಅವರೊಂದಿಗೆ ಪ್ರಧಾನಿ ಮೋದಿ ದೂರವಾಣಿ ಮೂಲಕ ಮಾತನಾಡಿದ್ದಾರೆ. ಪಶ್ಚಿಮ ಬಂಗಾಳದ ಕೃಷ್ಣನಗರ ಬಿಜೆಪಿ ಅಭ್ಯರ್ಥಿ ರಾಜಮಾತಾ ಅಮೃತಾ ರಾಯ್ ಅವರೊಂದಿಗೆ ಫೋನ್ ಮೂಲಕ ಮಾತನಾಡಿರುವ ಮೋದಿ,ದೇಶಾದ್ಯಂತ ನಡೆದ ವಿವಿಧ ದಾಳಿಗಳಲ್ಲಿ ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡ ಸುಮಾರು 3000 ಕೋಟಿಗಳನ್ನ ವಿವಿಧ ಯೋಜನೆಗಳ ಮೂಲಕ ಬಡ ಜನರಿಗೆ ನೀಡುವುದಾಗಿ ಬಂಗಾಳದ ಜನತೆಗೆ ತಿಳಿಸುವಂತೆ ಅಮೃತಾ ರಾಯ್ ಅವರಿಗೆ ಮೋದಿ ತಿಳಿಸಿದ್ದಾರೆ ಎನ್ನಲಾಗಿದೆ. ಕೇಂದ್ರದಲ್ಲಿ ಹೊಸ ಸರ್ಕಾರ ರಚಿಸಿದ ನಂತರ ಇಡಿಯಿಂದ ಪಡೆದ ಹಣ ಬಡಜನರಿಗೆ ನೀಡಲು ಕಾನೂನು ರೂಪಿಸುವ ಬಗ್ಗೆ ಯೋಚಿಸುವುದಾಗಿ ಹೇಳಿದ್ದಾರೆ. ಬಿಜೆಪಿ ಅಭ್ಯರ್ಥಿ ಬಗ್ಗೆ ಪ್ರತಿಪಕ್ಷಗಳು ಏನು ಹೇಳುತ್ತವೆ ಎಂಬುದರ ಬಗ್ಗೆ ನಿರಾಸೆಗೊಳ್ಳಬೇಡಿ ಎಂದು ಸಲಹೆ ನೀಡಿದ ಪ್ರಧಾನಿ, ರಾಜಕೀಯವನ್ನು ಈಗ 2 ಭಾಗವಾಗಿ ವಿಂಗಡಿಸಲಾಗಿದ್ದು, ಒಂದು ಬಿಜೆಪಿ ನೇತೃತ್ವದಲ್ಲಿ, ಇದು ದೇಶದಲ್ಲಿ ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತುಹಾಕಲು ಬದ್ಧವಾಗಿದೆ ಮತ್ತು ಇನ್ನೊಂದು ಭ್ರಷ್ಟರನ್ನು ಬೆಂಬಲಿಸುವ ಇಂಡಿಯಾ ಮೈತ್ರಿಕೂಟ ಮತ್ತು ಟಿಎಂಸಿ ಎಂದು ಪ್ರಧಾನಿ ಕಿಡಿಕಾರಿದ್ದಾರೆ.