ಸಿಎಂ ಸಿದ್ದರಾಮಯ್ಯ ಅವರ ಆಪರೇಷನ್ ಕಮಲ ಮತ್ತು ಒಬ್ಬೊಬ್ಬ ಶಾಸಕರಿಗೂ 50 ಕೋಟಿ ಆಫರ್ ಎಂಬ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಪುಡಾರಿಯಂತೆ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಮೈಸೂರಿನ ಕಾರ್ಯಕ್ರಮ ವೊಂದರಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ 50 ಶಾಸಕರಿಗೆ 50 ಕೋಟಿ ಆಫರ್ ನೀಡಿದ್ರು ಎಂದು ಗಭೀರ ಆರೋಪ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿಜಯೇಂದ್ರ ಬಹುಶಃ ನಿಮ್ಮ ಶಾಸಕರ ಮೇಲೆ ನೀವು ವಿಶ್ವಾಸವನ್ನು ಕಳೆದುಕೊಂಡಿದ್ದೀರಿ ಎಂದು ಕಾಣುತ್ತಿದೆ. ಅದಕ್ಕಾಗಿಯೇ ₹50 ಕೋಟಿಗೆ ಮಾರಾಟವಾಗುತ್ತಿದ್ದಾರೆ ಎಂಬ ಕಪೋಲಕಲ್ಪಿತ ಆರೋಪ ಮಾಡುತ್ತಿದ್ದೀರಿ. ಇದು ನೀವು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುತ್ತಿರುವ ಅವಮಾನ. ಶಾಸಕರನ್ನು ಮಾರಾಟದ ವಸ್ತುಗಳಂತೆ ವ್ಯಾಖ್ಯಾನಿಸಿ ಅವರಿಗೆ ಮಾಡುತ್ತಿರುವ ಅವಮಾನ ಎಂದು ತಿರುಗೇಟು ಕೊಟ್ಟಿದ್ದಾರೆ.
ಇದನ್ನು ಓದಿ: ಸಿಎಂ ಸಿದ್ದರಾಮಯ್ಯರನ್ನು ಲಫಂಗ ಎಂದ ಸ್ವಾಮೀಜಿ ಕ್ಷಮೆಯಾಚನೆ
ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ವಿಜಯೇಂದ್ರ, ನಿಮ್ಮ ಈ ಹೇಳಿಕೆ ಕಾಂಗ್ರೆಸ್ ಶಾಸಕರುಗಳನ್ನು ಅಂಕೆಯಲಿಟ್ಟುಕೊಳ್ಳಲು, ನಿಮ್ಮನ್ನು ಸುತ್ತುವರೆದಿರುವ ಭ್ರಷ್ಟಾಚಾರದ ಹಗರಣಗಳನ್ನು ಮುಚ್ಚಿಕೊಳ್ಳಲು ಹೆಣೆದಿರುವ ಹತಾಶೆಯ ಸುಳ್ಳಿನ ಕಂತೆ. ಕನಿಷ್ಠ ರಾಜಕೀಯ ಜ್ಞಾನ ಇರುವವರಿಗೂ ಅರಿವಾಗುತ್ತದೆ. ಮುಖ್ಯಮಂತ್ರಿಯಂತಹ ಜವಾಬ್ದಾರಿ ಸ್ಥಾನದಲ್ಲಿ ಕುಳಿತಿರುವ ನೀವು ಅದರ ಘನತೆಯನ್ನು ಕುಗ್ಗಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದೀರಿ. ನಿಮ್ಮದೇ ಸರ್ಕಾರವಿದೆ, ನಿಮ್ಮದೇ ತನಿಖಾ ಸಂಸ್ಥೆಗಳಿವೆ, ₹50 ಕೋಟಿ ಆಮಿಷದ ಮೂಲ ಯಾವುದು ಎನ್ನುವುದನ್ನು ಜನರ ಮುಂದೆ ಬಹಿರಂಗಪಡಿಸುವುದು ನಿಮ್ಮ ನೈತಿಕ ಜವಾಬ್ದಾರಿ. ಇಲ್ಲದಿದ್ದರೆ ನಿಮ್ಮ ಹೇಳಿಕೆ ಪುಡಾರಿಗಳು ನೀಡುವ ಬಾಲಿಶ ರಾಜಕೀಯ ಹೇಳಿಕೆಯಾಗುತ್ತದೆಯಷ್ಟೆ ಎಂದಿದ್ದಾರೆ.
ಈ ಮೂಲಕ ಸಿದ್ದರಾಮಯ್ಯ ಹೇಳಿಕೆ ಕಪೋಲಕಲ್ಪಿತ, ಸುಳ್ಳಿನ ಕಂತೆ, ಹಗರಣಗಳ ಆರೋಪದಿಂದ ನುಣುಚಿಕೊಳ್ಳುವ ಯತ್ನ ಎಂದಿರುವುದಷ್ಟೇ ಅಲ್ಲ, ಪರೋಕ್ಷವಾಗಿ ಸಿದ್ದರಾಮಯ್ಯ ಅವರನ್ನು ಪುಡಾರಿ ಎಂದು ಟೀಕಿಸಿದ್ದಾರೆ. ಇತ್ತೀಚೆಗೆ ಮೋದಿಯವರನ್ನು ಸಿದ್ದರಾಮಯ್ಯ ಪುಡಾರಿ ಎಂದು ಟೀಕಿಸಿದ್ದು ಭಾರಿ ವಿವಾದ ಸೃಷ್ಟಿಸಿತ್ತು. ಇದೀಗ ವಿಜಯೇಂದ್ರ ಸಿದ್ದರಾಮಯ್ಯ ಅವರನ್ನು ಪುಡಾರಿ ಎನ್ನುವ ಮೂಲಕ ತಿರುಗೇಟು ಕೊಟ್ಟಿದ್ದಾರೆ.ಸರ್ಕಾರ ಬೀಳಿಸಲು ಸಾವಿರಾರು ಕೋಟಿ ಬಂಡವಾಳ ಹೂಡಲು ತಯಾರಾಗಿರುವವರು ಯಾರು? ಈ ಬಗ್ಗೆ ಇಡಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕೂಡಲೇ ತನಿಖೆ ನಡೆಸುವುದು ತುರ್ತು ಅಗತ್ಯವಿದೆ. ರಾಜ್ಯದ ಜನತೆಗೆ ಸತ್ಯ ತಿಳಿಯಬೇಕಿದೆ ಎಂದು ಕೂಡಾ ವಿಜಯೇಂದ್ರ ಹೇಳಿದ್ದಾರ. ಆದರೆ ಸಿದ್ದರಾಮಯ್ಯ ಅವರು ಹೇಳಿರುವುದ ಸತ್ಯ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಸಿದ್ದರಾಮಯ್ಯ ಸಂಪುಟದ ಬಹುತೇಕ ಸಚಿವರು ಅಭಿಪ್ರಾಯಪಟ್ಟಿದ್ದಾರೆ.