ಬೆಂಗಳೂರು : ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ, ಟಿಪ್ಪು ಸಿದ್ಧಾಂತ ಇರುವ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ರಾಜ್ಯದಲ್ಲಿ ಮೂಲಭೂತವಾದಿ ಇಸ್ಲಾಮಿಕ್ ಸಂಘಟನೆಗಳು, ಇಸ್ಲಾಮಿಕ್ ಕಾರ್ಯಕರ್ತರು ಪಾಕಿಸ್ತಾನ ಬೆಂಬಲಿತ ಕಾರ್ಯಕರ್ತರಿಂದ ಹಿಂದೂಗಳ ಮೇಲೆ ನಿರಂತರವಾಗಿ ಹಲ್ಲೆ, ಅವಹೇಳನ, ಧಮ್ಕಿ, ಭಯೋತ್ಪಾದನಾ ಚಟುವಟಿಕೆ, ಬಾಂಬ್ ಹಾಕುವ ಘಟನೆಗಳು ಮಿತಿ ಮೀರಿ ನಡೆಯುತ್ತಿವೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಾತನಾಡಿದ ಅವರು, ಇದು ಗಂಭೀರ ವಿಚಾರ ಮತ್ತು ಆತಂಕಕಾರಿ ಎಂದು ಕಳವಳ ವ್ಯಕ್ತಪಡಿಸಿದರು. ನಿನ್ನೆ ವಿದ್ಯಾರಣ್ಯಪುರದಲ್ಲಿ ರಾಮನವಮಿ ಇತ್ತು. ರಾಮ ಈ ದೇಶದ ಆದರ್ಶ ಪುರುಷ. ಶ್ರೀರಾಮ ಮಂದಿರವೂ ನಿರ್ಮಾಣವಾಗಿದೆ.
ಇಂಥ ಸಂದರ್ಭದಲ್ಲಿ “ಜೈ ಶ್ರೀರಾಮ್” ಎಂದು ಕೂಗಿದ್ದನ್ನು ಆಕ್ಷೇಪಿಸಿ ಗೂಂಡಾಗಳು ಅವರ ಮೇಲೆ ಹಲ್ಲೆ ನಡೆಸಿ “ಅಲ್ಲಾ ಹು ಅಕ್ಬರ್” ಕೂಗಬೇಕು ಎಂದು ಧಮ್ಕಿ ಹಾಕಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ. ಇದರಿಂದ ನಾವು ಹಿಂದೂಸ್ತಾನದಲ್ಲಿ ಇದ್ದೇವಾ ಅಥವಾ ಪಾಕಿಸ್ತಾನದಲ್ಲಿ ಇದ್ದೇವಾ ಎಂಬ ಸಂದೇಹ ಕಾಡುವಂತಾಗಿದೆ. ಸಿದ್ದರಾಮಯ್ಯನವರು ಇಸ್ಲಾಮಿಕ್ ಮೂಲಭೂತವಾದಿಗಳಿಗೆ ಕರ್ನಾಟಕವನ್ನು ಧಾರೆ ಎರೆದು ಕೊಟ್ಟಿದ್ದಾರಾ ಎಂದು ಭೀತಿ ವ್ಯಕ್ತಪಡಿಸಿದ ಅವರು, ಲಕ್ಷ್ಮಣ ಸವದಿಯವರು ಸಾರ್ವಜನಿಕ ಸಭೆಯಲ್ಲಿ ಕೈಮುಗಿದು ವಿನಮ್ರವಾಗಿ ‘ನಾನು ಭಾರತ್ ಮಾತಾ ಕೀ ಜೈ ಅನ್ನಬಹುದೇ ಖರ್ಗೆ ಸಾಹೇಬರೇ’ ಎಂದು ಪ್ರಶ್ನಿಸಿದ್ದಾರೆ. ಖರ್ಗೆಯವರು ಅನುಮತಿ ಕೊಟ್ಟಿದ್ದಾರೆ. ಡಿ.ಕೆ.ಸುರೇಶ್ ಅವರು ರಾಮ ದೇವರಲ್ಲ, ನಾವು ಮನೆಯಲ್ಲಿ ಅವರ ಫೋಟೊ ಇಟ್ಟಿಲ್ಲ ಎನ್ನುತ್ತಾರೆ. ಡಿ.ಕೆ.ಸುರೇಶ್ ಅವರೇ, ನೀವು ಕಲ್ಲುಬಂಡೆ ವ್ಯಾಪಾರ ಮಾಡುವವರಲ್ಲವೇ? ಕಲ್ಲು ಬಂಡೆ ಇಟ್ಟುಕೊಳ್ಳಿ. ರಾಮನ ಫೋಟೊ ಯಾಕೆ ಇಡಬೇಕು ಎಂದು ಕೇಳಿದರು. ಇಡೀ ದೇಶದಲ್ಲಿ ರಾಮಭಕ್ತ ಆಂಜನೇಯನ ದೇವಸ್ಥಾನಗಳಿವೆ. ಇದು ನಿಮಗೆ ಕಣ್ಣಿಗೆ ಕಾಣಿಸುವುದಿಲ್ಲವೇ ಎಂದು ಡಿ.ಕೆ.ಸುರೇಶ್ ಅವರನ್ನು ಪ್ರಶ್ನಿಸಿದರು.
ಹಿಂದೂಗಳನ್ನು ಈ ಥರ ಬೈದು ಬೈದು ರಾಜ್ಯದಲ್ಲಿ ಮುಸ್ಲಿಂ ಭಯೋತ್ಪಾದನಾ ಚಟುವಟಿಕೆಗಳು ಜಾಸ್ತಿಯಾಗಿವೆ. ಶ್ರೀರಾಮ ಮಂದಿರಕ್ಕೆ ಹೋಗುವ ಹಿಂದೂ ಕಾರ್ಯಕರ್ತರ ವಿರುದ್ಧ ಕೇಸು ದಾಖಲಿಸಲಾಗುತ್ತಿದೆ. ಮಂಡ್ಯದಲ್ಲಿ ಹಾರಾಡುತ್ತಿದ್ದ ಹನುಮಧ್ವಜವನ್ನು ಕಿತ್ತು ಹಾಕಿದ್ದೀರಿ. ಸಿದ್ದರಾಮಯ್ಯನವರ ಸರಕಾರ ಬಂದ ಬಳಿಕ ಕರ್ನಾಟಕದಲ್ಲಿ ಹಿಂದೂಗಳು ಭಯದಿಂದ ಬದುಕುವಂಥ ವಾತಾವರಣವನ್ನು ಸಿದ್ದರಾಮಯ್ಯ ಆಂಡ್ ಗ್ಯಾಂಗ್ ಮಾಡುವುದನ್ನು ಖಂಡಿಸುವುದಾಗಿ ಹೇಳಿದರು.