ಸತತ ಸೋಲಿನಿಂದ ಕಂಗೆಟ್ಟಿರುವ ಆರ್ ಸಿಬಿ, ಇಂದು ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಾಡಲಿದೆ. ಇಂದು ಸಂಜೆ 7.30ಕ್ಕೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಮ್ಯಾಚ್ ನಡೆಯಲಿದೆ. ಅತ್ತ ಮುಂಬೈ ತಂಡವು ಸಹ ಸತತ 3 ಸೋಲುಗಳಿಂದ ಈಗಷ್ಟೇ ಗೆಲುವಿನ ಹಾದಿಗೆ ಮರಳಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ಲೀಗ್ನಲ್ಲಿ ಏಕೈಕ ಗೆಲುವು ದಾಖಲಿಸಿದ್ದರೆ, ಆರ್ಸಿಬಿ ಕೂಡ ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಒಂದೇ ಒಂದು ಪಂದ್ಯವನ್ನು ಗೆದ್ದಿದೆ. ಇದು ಮುಂಬೈಗೆ ನಾಲ್ಕನೇ ಪಂದ್ಯವಾಗಿದ್ದು, ಬೆಂಗಳೂರು ತಂಡಕ್ಕೆ ಆರನೇ ಪಂದ್ಯ. ಎರಡೂ ತಂಡಗಳಿಗೂ ಇಂದಿನ ಪಂದ್ಯದಲ್ಲಿ ಗೆಲುವಿನ ಹಾದಿ ಸುಗಮವಾಗಿಲ್ಲ. ಉಭಯ ತಂಡಗಳು ತಲಾ 2 ಪಾಯಿಂಟ್ ಗಳಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಇಂದು ಗೆದ್ದ ತಂಡಕ್ಕೆ 2 ಪಾಯಿಂಟ್ ಸಿಗಲಿದ್ದು, ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿರೋ ಆರ್ ಸಿಬಿ ಇಂದು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಟೀಂನಲ್ಲಿ ಕೆಲವು ಬದಲಾವಣೆ ಮಾಡುವ ಸಾಧ್ಯತೆ ಇದೆ. ಆರ್ಸಿಬಿಯಲ್ಲಿ ಕೆಲವೇ ಕೆಲವು ಆಟಗಾರರು ಒಳ್ಳೆಯ ಆಟವಾಡುತ್ತಿದ್ದಾರೆ. ಇಂದಿನ ಮ್ಯಾಚ್ನಲ್ಲಿ ಇಬ್ಬರು ವಿದೇಶಿ ಆಟಗಾರರಿಗೆ ಬೇಂಚ್ ಕಾಯಿಸುವ ಸಾಧ್ಯತೆ ಇದೆ. ವಿದೇಶಿ ಆಟಗಾರರಾದ ಮ್ಯಾಕ್ಸ್ವೆಲ್ ಹಾಗೂ ಕ್ಯಾಮರೂನ್ ಗ್ರೀನ್ ಕಳಪೆ ಪ್ರದರ್ಶನ ನೀಡುತ್ತಿದ್ದು, ಇಬ್ಬರೂ ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿ ಇಂದಿನ ಪಂದ್ಯದಲ್ಲಿ ಇಬ್ಬರು ಫಾರಿನ್ ಪ್ಲೇಯರ್ಗಳನ್ನ ಡ್ರಾಪ್ ಮಾಡುವುದು ಪಕ್ಕಾ ಎನ್ನುತ್ತಿವೆ ಆರ್ ಸಿಬಿ ವಲಯ.