ಭಾರೀ ಕುತೂಹಲ ಮೂಡಿಸಿರೋ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಆಕ್ಷನ್ಗೆ ಬಿಸಿಸಿಐ ಎಲ್ಲಾ ರೀತಿಯ ತಯಾರಿ ನಡೆಸಿಕೊಂಡಿದೆ. ಮೆಗಾ ಹರಾಜು ಪ್ರಕ್ರಿಯೆಗೆ ಕೇವಲ ಮೂರು ದಿನಗಳು ಮಾತ್ರ ಬಾಕಿ ಉಳಿದಿದೆ. ಇದೇ ನವೆಂಬರ್ 24 ಮತ್ತು 25ನೇ ತಾರೀಕು ಸೌದಿ ಅರೇಬಿಯಾದಲ್ಲಿ ನಡೆಯೋ ಈ ಹರಾಜಿನಲ್ಲಿ ಎಲ್ಲರೂ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಮುಂದಿನ ಸೀಸನ್ಗೆ ಬಲಿಷ್ಠ ತಂಡ ಕಟ್ಟಲು ಎಲ್ಲಾ ಫ್ರಾಂಚೈಸಿಗಳು ರಣತಂತ್ರ ರೂಪಿಸಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ತೆರೆಮರೆಯಲ್ಲಿ ಮೆಗಾ ಹರಾಜಿಗಾಗಿ ಸಿದ್ದತೆ ಮಾಡಿಕೊಂಡಿದೆ. ಹೇಗಾದ್ರೂ ಮಾಡಿ ಕಪ್ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದು ಭಾರೀ ಪ್ಲ್ಯಾನ್ ಹಾಕಿಕೊಂಡಿದೆ.
ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ರೀಟೈನ್ ಲಿಸ್ಟ್ ರಿಲೀಸ್ ಮಾಡಿದೆ. ಆರ್ಸಿಬಿ ಟೀಮ್ ಮೊದಲು ರೀಟೈನ್ ಮಾಡಿಕೊಂಡಿದ್ದು ವಿರಾಟ್ ಕೊಹ್ಲಿ. 2ನೇ ಆಯ್ಕೆ ರಜತ್ ಪಾಟಿದಾರ್ ಮತ್ತು 3ನೇ ಆಯ್ಕೆಯಾಗಿ ಯಶ್ ದಯಾಳ್ ಅವರನ್ನು ಉಳಿಸಿಕೊಂಡಿದೆ. ಹೊಸ ಕ್ಯಾಪ್ಟನ್ ಹುಡುಕಾಟದಲ್ಲಿ ಆರ್ಸಿಬಿ ಇದೆ ಅನ್ನೋ ಮಾತುಗಳು ಕೂಡ ಕೇಳಿ ಬಂದಿದೆ. ಇದರ ಮಧ್ಯೆ ಆರ್ಸಿಬಿ ಈತನಿಗೆ ಕ್ಯಾಪ್ಟನ್ಸಿ ನೀಡಬೇಕು ಎಂದು ಟೀಮ್ ಇಂಡಿಯಾದ ಮಾಜಿ ಕ್ರಿಕೆಟರ್ ಹೇಳಿದ್ದಾರೆ.
ರಾಬಿನ್ ಉತ್ತಪ್ಪ ಏನಂದ್ರು?
ರಾಯಲ್ ಚಾಲೆಂಜರ್ಸ್ ಬೆಂಗಳೂರು ರಜತ್ ಪಾಟಿದಾರ್ ಅವರನ್ನು ಕ್ಯಾಪ್ಟನ್ ಮಾಡಬೇಕು ಎಂದು ರಾಬಿನ್ ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ. ನಾಯಕನ ಪಾತ್ರದಲ್ಲಿ ರಜತ್ ಪಾಟಿದಾರ್ ಅವರನ್ನು ನೋಡಬೇಕೆಂದು ನಾನು ಭಾವಿಸುತ್ತೇನೆ. ಎರಡು ವರ್ಷಗಳ ನಂತರ ಆರ್ಸಿಬಿಗೆ ಹೊಸ ನಾಯಕನ ಅಗತ್ಯ ಎದುರಾಗಿದೆ. ಹೀಗಾಗಿ ಪಾಟಿದರ್ ಮೇಲೆ ನಂಬಿಕೆ ಇಡಬಹುದು. ಆಗ ಮಾತ್ರ ಮುಂದಿನ 5 ವರ್ಷಗಳು ಆರ್ಸಿಬಿಗೆ ಕ್ಯಾಪ್ಟನ್ಸಿ ಸಮಸ್ಯೆ ಎದುರಾಗಲ್ಲ ಎಂದರು.
ರಜತ್ ಪಾಟಿದಾರ್ ಐಪಿಎಲ್ ಸಾಧನೆ
ಆರ್ಸಿಬಿ ತಂಡದ ಸ್ಟಾರ್ ಬ್ಯಾಟರ್ ರಜತ್ ಪಾಟಿದಾರ್. ಇವರು ಐಪಿಎಲ್ನಲ್ಲಿ ಇದುವರೆಗೆ ಒಟ್ಟು 27 ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳಲ್ಲಿ 34.73 ಸರಾಸರಿಯಲ್ಲಿ 799 ರನ್ ಗಳಿಸಿದ್ದಾರೆ. ರಜತ್ ಪಾಟಿದಾರ್ 7 ಅರ್ಧಶತಕ ಮತ್ತು 1 ಶತಕ ಸಹ ಸಿಡಿಸಿದ್ದಾರೆ. 2022ರ ಐಪಿಎಲ್ನ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ವಿರುದ್ಧ ಶತಕ ಸಿಡಿಸಿದ ಬಳಿಕ ರಜತ್ ಪಾಟಿದಾರ್ ಬಹಳ ಹೆಸರು ಮಾಡಿದ್ರು.
ಇದರ ಬೆನ್ನಲ್ಲೇ ಮಧ್ಯಪ್ರದೇಶ್ ತಂಡದ ನಾಯಕರಾಗಿ ರಜತ್ ಪಾಟಿದಾರ್ ಆಯ್ಕೆಯಾಗಿದ್ದಾರೆ. ಅಲ್ಲದೆ ಮುಂಬರುವ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಧ್ಯಪ್ರದೇಶ್ ತಂಡವು ಫೈನಲ್ಗೆ ತಲುಪಿದರೆ ಆರ್ಸಿಬಿ ತಂಡದ ನಾಯಕತ್ವದ ರೇಸ್ನಲ್ಲಿ ರಜತ್ ಪಾಟಿದಾರ್ ಹೆಸರು ಕಾಣಿಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿಯೇ ಸಿಕ್ಕ ಅವಕಾಶವನ್ನು ಪಾಟಿದಾರ್ ಹೇಗೆ ಬಳಸಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಬಿಸಿಸಿಐ ಕೂಡ ಹರಾಜಿಗೆ ಬಂದಿರೋ ಆಟಗಾರರ ಹೆಸರು ಶಾರ್ಟ್ ಲಿಸ್ಟ್ ಮಾಡಿ ಐಪಿಎಲ್ ತಂಡಗಳ ಮಾಲೀಕರಿಗೆ ಕಳಿಸಲಿದೆ. ಒಟ್ಟು 1500ಕ್ಕೂ ಹೆಚ್ಚು ಆಟಗಾರರು ಐಪಿಎಲ್ ಹರಾಜಿಗೆ ಹೆಸರು ನೊಂದಾಯಿಸಿಕೊಂಡಿದ್ದಾರೆ. ಈಗ 1574 ಆಟಗಾರರ ಆರಂಭಿಕ ಪಟ್ಟಿಯನ್ನು 574ಕ್ಕೆ ಇಳಿಸಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಪೈಕಿ 366 ಭಾರತೀಯರು ಇದ್ದಾರೆ.