ಸತತ ಸೋಲಿನಿಂದ ಕಂಗೆಟ್ಟಿರೋ ಆರ್ಸಿಬಿ, ಫ್ಯಾನ್ಸ್ಗಳ ಕೆಂಗಣ್ಣಿಗೆ ಗುರಿಯಾಗಿದೆ. ಆದರೆ ಸಾಮಾಜಿಕ ಕಳಕಳಿಯಲ್ಲಿ ಮಾತ್ರ ನಮ್ಮ ಆರ್ ಸಿಬಿ ಬೇರೆಲ್ಲ ತಂಡಗಳಿಗೂ ಮಾದರಿಯಾಗಿದೆ, ಮೈದಾನದಲ್ಲಿ ಗೋ ಗ್ರೀನ್ ಎಂದು ಸಾರಲು, ಗ್ರೀನ್ ಜರ್ಸಿಯನ್ನ ಹಾಕಿ, ಪಂದ್ಯ ಆಡಿದ್ದು ಉಂಟು. ಈಗ ಮತ್ತೊಂದು ಹೆಜ್ಜೆ ಮುಂದಿಡಲು ಆರ್ಸಿಬಿ ಮುಂದಾಗಿದೆ.
ಬೆಂಗಳೂರಿನ ಎರಡು ಪ್ರಮುಖ ಕೆರೆಗಳನ್ನ ಪುನರುಜ್ಜೀವನ ಕಾರ್ಯವನ್ನು ಆರ್ಸಿಬಿ ಪೂರ್ಣಗೊಳಿಸಿದೆ. ಈ ಕೆರೆಗಳ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿದೆ ಮತ್ತು ಮೂರನೇ ಕೆರೆಯಲ್ಲಿ ನಾಗರಿಕ ಸೌಲಭ್ಯಗಳನ್ನು ಹೆಚ್ಚಿಸಿದೆ.
ಇಟ್ಟಗಲ್ಪುರ ಕೆರೆ ಮತ್ತು ಸಾದೇನಹಳ್ಳಿ ಕೆರೆಯ ಹೂಳೆತ್ತುವ ಮತ್ತು ಅಭಿವೃದ್ಧಿಪಡಿಸುವತ್ತ ಗಮನ ಹರಿಸಿ ಆರ್ಸಿಬಿ 2023ರ ಅಕ್ಟೋಬರ್ನಲ್ಲಿ ಇಎಸ್ಜಿ ಬದ್ಧತೆಯ ಭಾಗವಾಗಿ ಕೆರೆಗಳ ಸುಧಾರಣಾ ಕಾರ್ಯ ಯೋಜನೆಯನ್ನು ಪ್ರಾರಂಭಿಸಿತ್ತು. ಇಟ್ಟಗಲ್ಪುರ ಕೆರೆ ಮತ್ತು ಸಾದೇನಹಳ್ಳಿ ಕೆರೆಯಲ್ಲಿ 1.20 ಲಕ್ಷ ಟನ್ ಹೂಳು ಮತ್ತು ಮರಳನ್ನು ತೆಗೆಯಲಾಗಿದ್ದು, ಇದನ್ನು ಕೆರೆಗಳಿಗೆ ಅಡ್ಡಲಾಗಿ ಕಟ್ಟೆಗಳು ಮತ್ತು ಮಾರ್ಗಗಳನ್ನು ನಿರ್ಮಿಸಲು ಬಳಸಲಾಗಿದೆ ಮತ್ತು 52 ರೈತರು ಮಣ್ಣನ್ನು ತಮ್ಮ ಹೊಲಗಳಿಗೆ ಮೇಲ್ಮಣ್ಣು ಆಗಿ ಬಳಸಿದ್ದಾರೆ. ಇದರಿಂದಾಗಿ ಈ ಕೆರೆಗಳ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ 17 ಎಕರೆಗಳಷ್ಟು ಹೆಚ್ಚಾಗಿದೆ.
ಜೊತೆಗೆ ಜೀವವೈವಿಧ್ಯವನ್ನು ಸುಧಾರಿಸುವ ಉದ್ದೇಶದಿಂದ ಕಣ್ಣೂರು ಕೆರೆಯ ಸುತ್ತಲೂ ಔಷಧೀಯ ಸಸ್ಯಗಳ ಉದ್ಯಾನ, ಬಿದಿರಿನ ಉದ್ಯಾನವನ ಮತ್ತು ಚಿಟ್ಟೆ ಪಾರ್ಕ್ಗಳನ್ನು ನಿರ್ಮಿಸಲಾಗಿದೆ. ಒಟ್ಟಾರೆ ಸತತ ಮ್ಯಾಚ್ಗಳನ್ನ ಸೋಲುವ ಮೂಲಕ, ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡುತ್ತಿರೋ ಆರ್ ಸಿಬಿ, ಈಗ ಪರಿಸರ ಕಾಳಜಿ ಮೂಲಕ ಎಲ್ಲರ ಮನಗೆದ್ದಿರೋದಂತು ಸ್ಪಷ್ಟ.