ಈ ಬಾರಿ ಶಬರಿಮಲೆಯಲ್ಲಿ ದೇವಸ್ಥಾನದ ಬಾಗಿಲು ತೆರೆದ 9 ದಿನಗಳಲ್ಲೇ 6,12,290 ಭಕ್ತರು ಸ್ವಾಮಿಯ ದರ್ಶನ ಪಡೆದುಕೊಂಡಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ 3,03,501 ಅಯ್ಯಪ್ಪ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು ಎಂದು ಮಂಡಳಿ ತಿಳಿಸಿದೆ. ಕಳೆದ 9 ದಿನಗಳಲ್ಲಿ ಕ್ಷೇತ್ರಕ್ಕೆ 41,64,00,065 ರೂ. ಆದಾಯ ಲಭಿಸಿದೆ. ಇದು ಹಿಂದಿನ ವರ್ಷಕ್ಕಿಂತ 13,33,79,701 ಹೆಚ್ಚಾಗಿದೆ. ಶಬರಿಮಲೆಯಲ್ಲಿ ತಿರುವಾಂಕೂರು ದೇವಸ್ವಂ ಬೋರ್ಡ್ ಮತ್ತು ಸರಕಾರದ ನೇತೃತ್ವದ 20ಕ್ಕೂ ಹೆಚ್ಚು ಇಲಾಖೆಗಳು ಒಟ್ಟಾಗಿ ಕೆಲಸ ನಿರ್ವಹಿಸುತ್ತಿದೆ. ಪಾರ್ಕಿಂಗ್, ಮೂಲಸೌಕರ್ಯ, ಶುದ್ಧ ನೀರು, ಉಪಾಹಾರ, ಪ್ರಸಾದ, ನೈವೇದ್ಯ, ಅನ್ನದಾನ ಸೂಕ್ತ ರೀತಿಯಲ್ಲಿ ನಡೆಯುತ್ತಿದೆ. ಇದರ ಪ್ರಯೋಜನವನ್ನು ಭಕ್ತರು ಪಡೆದುಕೊಳ್ಳುತ್ತಿದ್ದಾರೆ.
ಹದಿನೆಂಟು ಮೆಟ್ಟಿಲು ಬಳಿ ಪೊಲೀಸರು ಪ್ರತಿ ನಿಮಿಷಕ್ಕೆ 80 ಅಯ್ಯಪ್ಪ ಭಕ್ತರಿಗೆ ಮೆಟ್ಟಲೇರಿ ದರ್ಶನ ಪಡೆಯಲು ಅವಕಾಶ ನೀಡುತ್ತಿದ್ದಾರೆ. ವೃಶ್ಚಿಕ ತಿಂಗಳ ಮೊದಲ ದಿನ ಅರವಣ ಪ್ರಸಾದ ಸಂಗ್ರಹ 40 ಲಕ್ಷಕ್ಕೆ ಹೆಚ್ಚಾಯಿತು. ಮಂಡಳಿ ವತಿಯಿಂದ ಸನ್ನಿಧಾನದಲ್ಲಿ ದಿನಕ್ಕೆ ಮೂರು ಬಾರಿ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. “ಶಬರಿಮಲೆಗೆ ನೇರವಾಗಿ ಬರುವ ಭಕ್ತರ ಅನುಕೂಲಕ್ಕಾಗಿ ಮೂರು ಕಡೆ ಸ್ಪಾಟ್ ಬುಕ್ಕಿಂಗ್ ವ್ಯವಸ್ಥೆ ಏರ್ಪಡಿಸಲಾಗಿದೆ. ವಂಡಿಪೆರಿಯಾರ್ ಸಂ, ಎರುಮೇಲಿ, ಪಂಪಾದಲ್ಲಿ ಸ್ಪಾಟ್ ಬುಕ್ಕಿಂಗ್ ಇದೆ. ತಿರುವಾಂಕೂರು ದೇವಸ್ವಂ ಮಂಡಳಿ ಪಂಪಾದಲ್ಲಿ ಎಷ್ಟೇ ಭಕ್ತರು ಬಂದರೂ ದರ್ಶನಕ್ಕೆ ಅನುಕೂಲವಾಗುವಂತೆ ರಿಯಲ್ ಟೈಮ್ ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆಯನ್ನು ಸಿದ್ಧಪಡಿಸಿದೆ. ಪ್ರತಿಯೊಬ್ಬ ಭಕ್ತರೂ ಆಧಾರ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ನಕಲು ಪ್ರತಿಯನ್ನು ತರಬೇಕು. ಶಬರಿಮಲೆಯನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಇರುಮುಡಿ ಕಟ್ಟೆಗೆ ಪ್ಲಾಸ್ಟಿಕ್ ತರಬಾರದು,” ಎಂದು ತಂತ್ರಿ ಕಂಠರರ್ ರಾಜೀವ ಸೂಚಿಸಿದ್ದಾರೆ.