ದಶಕಗಳ ಕಾಲ ಕ್ರಿಕೆಟ್ ಲೋಕವನ್ನು ಅಕ್ಷರಶಃ ಆಳಿದ ಸಚಿನ್ ತೆಂಡೂಲ್ಕರ್ ಅವರನ್ನು ಕ್ರಿಕೆಟ್ ದೇವರು ಎಂದೇ ಕರೆಯಲಾಗುತ್ತದೆ. ಸಚಿನ್ ಕ್ರಿಕೆಟ್ ಜೊತೆಜೊತೆಯಲ್ಲಿ ಅವರ ಆದರ್ಶ ವ್ಯಕ್ತಿತ್ವದಿಂದ ಜನಮಾನಸದಲ್ಲಿ ರಾರಾಜಿಸುತ್ತಿದ್ದಾರೆ.
ಸಚಿನ್ ಸಂದರ್ಶನವೊಂದರಲ್ಲಿ, ತಮ್ಮ ತಂದೆಗೆ ನೀಡಿದ ಪ್ರಮಾಣವೊಂದರ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ, ಹೌದು..ಕಪಿಲ್ ದೇವ್, ಸುನಿಲ್ ಗವಾಸ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ಕ್ರಿಸ್ ಗೇಲ್ ಸೇರಿದಂತೆ ಹಲವು ಆಟಗಾರರು ತಂಬಾಕು ಸಂಬಂಧಿತ ಉತ್ಪನ್ನಗಳನ್ನು ಪ್ರಚಾರ ಮಾಡುವುದನ್ನು ಕಾಣಬಹುದು. ಆದರೆ ತೆಂಡೂಲ್ಕರ್ ಈ ವಿಚಾರದಿಂದ ದೂರವಿದ್ದಾರೆ.
ಮಹಾರಾಷ್ಟ್ರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿನ್ ತೆಂಡೂಲ್ಕರ್, “ನಾನು ಭಾರತದ ಪರ ಆಡಲು ಪ್ರಾರಂಭಿಸಿದಾಗ, ನಾನು ಶಾಲೆಯಿಂದ ಹೊರಗುಳಿದಿದ್ದೆ. ನನಗೆ ಅನೇಕ ಜಾಹೀರಾತುಗಳಲ್ಲಿ ಪ್ರಚಾರ ಮಾಡಲು ಒಳ್ಳೆಯ ಅವಕಾಶಗಳು ಬಂದಿದ್ದವು. ಆದರೆ ನನ್ನ ತಂದೆ ನನಗೆ ಎಂದಿಗೂ ತಂಬಾಕು ಉತ್ಪನ್ನಗಳ ಜಾಹೀರಾತು ಮಾಡಬೇಡ ಎಂದು ಹೇಳಿದರು. ನಾನು ಅಂತೆಯೇ ಪ್ರಮಾಣ ಮಾಡಿ, ಇದುವರೆಗೆ ಸಹ ಅಂತಹ ಜಾಹಿರಾತುಗಳಲ್ಲಿ ಪ್ರಚಾರ ಮಾಡಿಲ್ಲ” ಎಂದು ಹೇಳಿದ್ದಾರೆ.
“ಇದು ನನ್ನ ತಂದೆಗೆ ನಾನು ನೀಡಿದ ಭರವಸೆಯ ನುಡಿಯಾಗಿತ್ತು. ನೀನು ಬಹಳಷ್ಟು ಜನರಿಗೆ ರೋಲ್ ಮಾಡೆಲ್ ,ನಿನ್ನ ಕೆಲಸವನ್ನು ಅನುಸರಿಸುತ್ತಾರೆ ಎಂದು ತಂದೆ ನನಗೆ ಹೇಳಿದರು. ಹಾಗಾಗಿ ನಾನು ಎಂದಿಗೂ ತಂಬಾಕು ಉತ್ಪನ್ನಗಳು ಅಥವಾ ಮದ್ಯಸಾರವನ್ನು ಪ್ರಚಾರ ಮಾಡುವುದಿಲ್ಲ” ಎಂದು ಬಹಿರಂಗವಾಗಿ ಹೇಳಿದ್ದಾರೆ.