ಮುಂಬೈ: ನವೆಂಬರ್ 23 ರಂದು ಪ್ರಾರಂಭವಾಗಲಿರುವ ಮುಂಬರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಗಾಗಿ ಮುಂಬೈ ಕ್ರಿಕೆಟ್ ಸಂಸ್ಥೆ ಭಾನುವಾರ ತಂಡವನ್ನು ಪ್ರಕಟಿಸಿದೆ . ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಮುಂಬೈ ತಂಡದ ನಾಯಕನ ಜವಾಬ್ದಾರಿಯನ್ನು ನಿಭಾಯಿಸಲು ಸಿದ್ಧರಾಗಿದ್ದಾರೆ. ಭಾರತ ಕ್ರಿಕೆಟ್ ತಂಡದಲ್ಲಿ ಮರಳಿ ಸ್ಥಾನ ಪಡೆಯುವತ್ತ ಗುರಿಯಿಟ್ಟಿರುವ ಶ್ರೇಯಸ್ ಅಯ್ಯರ್ ಅವರನ್ನು ಸೈಯದ್ ಮುಸ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಮುಂಬೈ ತಂಡಕ್ಕೆ ನಾಯಕರನ್ನಾಗಿ ನೇಮಕ ಮಾಡಲಾಗಿದೆ.
ಇದೇ 23 ರಿಂದ ಡಿಸೆಂಬರ್ 15ರವರೆಗೆ ಟೂರ್ನಿಯು ನಡೆಯಲಿದೆ. ರಣಜಿ ಟ್ರೋಫಿ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಅಜಿಂಕ್ಯ ರಹಾನೆ ಕೂಡ ಟಿ20 ತಂಡದಲ್ಲಿದ್ದಾರೆ. ರಣಜಿ ಟೂರ್ನಿಯಲ್ಲಿ ಅಯ್ಯರ್ ಉತ್ತಮ ಲಯದಲ್ಲಿದ್ದರು. 452 ರನ್ ಗಳಿಸಿದ್ದಾರೆ. ಅದರಲ್ಲಿ 2 ಶತಕಗಳಿವೆ. ಒಡಿಶಾ ಎದುರು ಅವರು 228 ಎಸೆತಗಳಲ್ಲಿ 233 ರನ್ ಹೊಡೆದಿದ್ದರು. ಆರಂಭಿಕ ಬ್ಯಾಟರ್ ಪೃಥ್ವಿ ಶಾ ಕೂಡ ತಂಡದಲ್ಲಿದ್ದಾರೆ.
ಅಜಿಂಕ್ಯ ರಹಾನೆ ಅವರೇ ಮುಂಬೈ ತಂಡವನ್ನು ಮುನ್ನಡೆಸುತ್ತಾರೆ ಎಂದು ಹೇಳಲಾಗಿತ್ತು. ಇದೀಗ ಮುಂಬೈ ತಂಡ ಮ್ಯಾನೇಜ್ಮೆಂಟ್ ನಿರ್ಧಾರ ಬದಲಿಸಿದ್ದು, ರಹಾನೆ ಬದಲಿಗೆ ಅಯ್ಯರ್ಗೆ ಕ್ಯಾಪ್ಟನ್ಸಿ ಪಟ್ಟ ನೀಡಿದೆ. ಒಟ್ಟು 16 ಆಟಗಾರರು ತಂಡದಲ್ಲಿದ್ದು, ಶ್ರೇಯಸ್ ಅಯ್ಯರ್, ಪೃಥ್ವಿ ಶಾ, ಅಂಗ್ಕ್ರಿಶ್ ರುಘುವಂಶಿ, ಜಯ್ ಬಿಸ್ತಾ, ರಹಾನೆ, ಸಿದ್ದೇಶ್ ಲಾಡ್, ಸುರ್ಯಂಶ್, ಸಿರಾಜ್ ಪಾಟಿಲ್, ಹರ್ದಿಕ್ ಟಮೊರೆ, ಆಕಾಶ್ ಆನಂದ್, ಶ್ಯಾಮ್ಸ್ ಮುಲಾನಿ, ಹಿಮಾಂಶು ಸಿಂಗ್, ತನುಶ್ ಕೊಟಿಯನ್, ಶಾರ್ದುಲ್ ಠಾಕೂರ್, ಮಹಿತ್ ಅವಸ್ತಿ, ಜುನೇದ್ ಖಾನ್ ತಂಡದಲ್ಲಿದ್ದಾರೆ.