ಕೋಲಾರ : ರಾಜ್ಯದಲ್ಲಿ ಲೋಕಸಭಾ ಚುನಾವಣಾ ರಣಾಂಗಣದಲ್ಲಿ ಕಾವು ಭರ್ಜರಿ ಆಗಿಯೇ ಜೋರಾಗಿದೆ.ನಡೆಯುತ್ತಿರುವುದು ಲೋಕಸಭಾ ಚುನಾವಣೆ ಆಗ್ತಿದ್ರೂ, ಅದರ ಎಫೆಕ್ಟ್ ರಾಜ್ಯ ರಾಜಕಾರಣದಲೂ ಆಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಪಾಲಿಗಂತೂ ಮೈಸೂರು ಮತ್ತು ಚಾಮರಾಜನಗರ ಕ್ಷೇತ್ರಗಳು ನಿರ್ಣಾಯಕವಾಗಿದೆ. ಆದರೆ ಇದರ ಜೊತೆಗೆ ಈಗ ಕೋಲಾರ ಲೋಕಸಭಾ ಕ್ಷೇತ್ರವೂ ಸೇರಿಕೊಂಡಿದೆ. ಹೌದು ಕೋಲಾರದಲ್ಲಿ ಮಾತನಾಡಿದ ಸಚಿವ ಬೈರತಿ ಸುರೇಶ್, ಕೋಲಾರದಲ್ಲಿ ಕಾಂಗ್ರೆಸ್ ಗೆಲ್ಲದಿದ್ದರೆ, ಸಿದ್ದರಾಮಯ್ಯನವರ ಮುಖ್ಯಮಂತ್ರಿ ಸ್ಥಾನಕ್ಕೆ ಸಂಚಕಾರ ಆಗಲಿದೆ ಅಂತ ತಿಳಿಸಿದ್ದಾರೆ.
ಸಿದ್ದರಾಮಯ್ಯನವರ ಪರಮಾಪ್ತರಾಗಿರುವ ಬೈರತಿ ಸುರೇಶ್ ಅವರ ಈ ಮಾತು ಭಾರಿ ಸಂಚಲನಕ್ಕೆ ಕಾರಣವಾಗಿದೆ. ಕೋಲಾರದ ಹಾಲಿಸ್ಟರ್ ಭವನದಲ್ಲಿ ನಡೆದ ಕುರುಬ ಸಮುದಾಯದ ಸಭೆಯಲ್ಲಿ ಮಾತನಾಡಿದ ಸಚಿವ ಬೈರತಿ ಸುರೇಶ್, ಕಾಂಗ್ರೆಸ್ ಅಭ್ಯರ್ಥಿಗಳು ಸೋತರೆ ಸಿದ್ದರಾಮಯ್ಯ ಸ್ಥಾನಕ್ಕೆ ಕಂಟಕವಾಗಲಿದೆ. ಹೀಗಾಗಿ ಕುರುಬ ಸಮುದಾಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೈ ಬಲಪಡಿಸಬೇಕಿದೆ. ನಿಮ್ಮ ಬೆಂಬಲ ಕಾಂಗ್ರೆಸ್ ಪಕ್ಷದ ಮೇಲಿರಲಿ, ಸಿದ್ದರಾಮಯ್ಯನವರ ಮೇಲಿರಲಿ, ಹಾಗೇ ಅಭ್ಯರ್ಥಿ ಗೌತಮ್ ಮೇಲಿರಲಿ ಅಂತ ಹೇಳಿದ್ದಾರೆ. ಒಂದು ವೇಳೆ ನೀವು ಬೇರೆ ಮನಸ್ಸು ಮಾಡಿ ಬೇರೆ ಅಭ್ಯರ್ಥಿ ಏನಾದರೂ ಗೆದ್ದರೆ ಸಿದ್ದರಾಮಯ್ಯನವರ ಸೀಟಿಗೆ ಕಂಟಕವಾಗಲಿದೆ ಎಂದು ಒತ್ತಿ ಒತ್ತಿ ಹೇಳಿದ್ದಾರೆ.