ಡಿಕೆ ಬ್ರದರ್ಸ್ ಭದ್ರಕೋಟೆಗೆ ಲಗ್ಗೆ ಇಟ್ಟ ಅಮಿತ್ ಶಾ, ಕನಕಪುರ ಬಂಡೆಗೆ ಡಿಚ್ಚಿ ಕೊಟ್ಟು ಹೋದ್ರು, ಈಗ ನರೇಂದ್ರ ಮೋದಿ ಸರದಿ, ಹೌದು ಬೆಂಗಳೂರು ಗ್ರಾಮಾಂತರ ಕ್ಷೇತ್ರದಂತೆ ಹೈವೋಲ್ಟೇಜ್ ಕಣ ಆಗಿರೋ ಮೈಸೂರು ಲೋಕಸಭಾ ಕ್ಷೇತ್ರ, ಸದ್ಯ ಪ್ರತಿಷ್ಠೆಯ ಅಖಾಡ. ಮೈಸೂರು ಲೋಕಸಭಾ ಕ್ಷೇತ್ರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಕ್ಷೇತ್ರ. ಹೀಗಾಗಿ ಸಿಎಂ ಸಿದ್ದರಾಮಯ್ಯಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಗೆಲ್ಲಬೇಕಾದ ಅನಿವಾರ್ಯತೆ. ಮುಖ್ಯಮಂತ್ರಿ ಆಗಿ ತವರು ಕ್ಷೇತ್ರದಲ್ಲೇ ಸೋತರೆ ತಪ್ಪು ಸಂದೇಶ ರವಾನೆ ಆಗಲಿದೆ. ವಿರೋಧ ಪಕ್ಷದ ಜೊತೆ ಸ್ವಪಕ್ಷದವರಿಗೂ ಟೀಕೆಗೆ ಆಹಾರವಾಗಲಿದೆ. ಹೀಗಾಗಿ ಕುರ್ಚಿ ಭದ್ರಪಡಿಸಿಕೊಳ್ಳಲು ಹಾಗೂ ಪ್ರತಿಷ್ಠೆ ಉಳಿಸಿಕೊಳ್ಳಲು ಮೈಸೂರು ಜಾಣನಿಗೆ..ತವರು ಕ್ಷೇತ್ರದಲ್ಲಿ ವಿಜಯ ಸಾಧಿಸುವುದು ಅನಿವಾರ್ಯ ಮತ್ತು ಅವಶ್ಯಕ.
ಇನ್ನು ಇತ್ತ ಬಿಜೆಪಿ ಸ್ಥಿತಿಯೂ ಭಿನ್ನವಾಗಿಲ್ಲ. ಹಾಲಿ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ನಿರಾಕರಿಸಿ, ಮೈಸೂರು ರಾಜಮನೆತನದ ಕುಡಿಗೆ ಬಿಜೆಪಿ ಮಣೆ ಹಾಕಿದೆ. ಅಲ್ಲದೇ ಯದುವೀರ್ ಒಡೆಯರ್ ಅವರಿಗೆ ಟಿಕೆಟ್ ಘೋಷಿಸಿದೆ. ಪ್ರತಾಪ್ ಸಿಂಹ ಪ್ರಾಬಲ್ಯವನ್ನ ಮಟ್ಟ ಹಾಕಬೇಕಾದರೆ, ಬಿಜೆಪಿಗೆ ಯದುವೀರ್ ಗೆಲುವು ಅನಿವಾರ್ಯ. ಅಲ್ಲದೇ ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿಸಿದ್ದು, ಬಿ.ಎಸ್. ಯಡಿಯೂರಪ್ಪ ಎಂಬ ಆಪಾದನೆ ಇದೆ. ಹೀಗಾಗಿ ಯದುವೀರ್ ಒಡೆಯರ್ ಅವರನ್ನ ಗೆಲ್ಲಿಸಿಕೊಂಡು ಬರುವ ಹೊಣೆಗಾರಿಕೆ ರಾಜಾಹುಲಿಯ ಮೇಲಿದೆ. ಬೆಂಗಳೂರಿನಲ್ಲಿ ನಿಗದಿ ಆಗಿದ್ದ ಮೋದಿ ಸಮಾವೇಶವನ್ನ, ಮೈಸೂರಿಗೆ ಶಿಫ್ಟ್ ಮಾಡಲಾಗಿದೆ. ಮೈಸೂರಿನಲ್ಲಿ ಸಮಾವೇಶ ನಿಗದಿ ಆಗಲು ಯಡಿಯೂರಪ್ಪ ಅವರ ಮಾಸ್ಟರ್ ಪ್ಲಾನ್ ಕಾರಣ ಎನ್ನಲಾಗಿದೆ. ಮೈಸೂರಿನಲ್ಲಿ ಮೋದಿ ಮೇನಿಯಾ ಸೃಷ್ಟಿಸಲು ಬಿಎಸ್ ವೈ ತಂತ್ರ ಹೆಣೆದಿದ್ದಾರೆ.
ಲೋಕಸಭಾ ಅಖಾಡದಲ್ಲಿ ಮೈಸೂರಿನಲ್ಲಿ ಜಗಜಟ್ಟಿ ಕಾಳಗ ತಾರಕಕ್ಕೇರಿದೆ. ಅಖಾಡದಲ್ಲಿ ಪಳಗಿರೋ ಟಗಟು ಮತ್ತು ರಾಜಾಹುಲಿ..ದಾಳಗಳನ್ನ ಉರುಳಿಸುತ್ತಿದ್ದಾರೆ. ತವರಿನಲ್ಲಿ ತೊಡೆ ತಟ್ಟಿ ಬಂದಿರೋ ಎದುರಾಳಿಗಳನ್ನ ಸಿದ್ದು ಮಣ್ಣುಮುಕ್ಕಿಸ್ತಾರಾ.? ಇಲ್ಲ ಮುಷ್ಠಿ ಕಾಳಗದಲ್ಲಿ ಗೆದ್ದು ಬೀಗ್ತಾರಾ ರಾಜಾಹುಲಿ..? ಕಾದು ನೋಡೋಣ.